ಮೈಸೂರು: ವಿಶ್ವ ವಿಖ್ಯಾತ ಮೈಸೂರು ದಸರಾ ಆಚರಣೆ ವಿಚಾರವಾಗಿ ರಾಜ್ಯ ಸರ್ಕಾರಕ್ಕೆ ರಾಜ ವಂಶಸ್ಥೆ ಪ್ರಮೋದಾದೇವಿ ಒಡೆಯರ್ ಬರೆದಿರುವ ಪತ್ರ ವಿಚಾರವಾಗಿ ಸಚಿವ ಯತೀಂದ್ರ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.
ಮೈಸೂರಿನಲ್ಲಿ ಮಾಅತನಾಡಿದ ಅವರು, ಅರಮನೆ ಬೋರ್ಡ್ ಸರ್ಕಾರದ್ದು, ಅರಮನೆ ಜಾಗ ಸರ್ಕಾರದ್ದು. ಅವರು ಉಳಿದುಕೊಳ್ಳಲು ಒಂದಿಷ್ಟು ಜಾಗ ಕೊಟ್ಟಿದ್ದೇವೆ, ಅಷ್ಟೇ. ಅಂಬಾರಿಯನ್ನು ನಾವು ಉಚಿತವಾಗಿ ಪಡೆಯುತ್ತಿಲ್ಲ. ಅದಕ್ಕೂ ಸರ್ಕಾರ ದುಡ್ಡು ಕೊಡುತ್ತದೆ ಎಂದು ಕಿಡಿಕಾರಿದ್ದಾರೆ.
ಏನೇ ಸಮಸ್ಯೆ ಇದ್ದರೂ ಸರ್ಕಾರಕ್ಕೆ ನೇರವಾಗಿ ಹೇಳಬಹುದಿತ್ತು. ನಾವು ನಿರಂತರವಾಗಿ ಅವರ ಜೊತೆಯಲ್ಲಿ ಸಂಪರ್ಕದಲ್ಲಿದ್ದೆವು. ನಮ್ಮ ಗಮನಕ್ಕೆ ತರದೆ ಏಕಾಏಕಿ ಮಾಧ್ಯಮಕ್ಕೆ ಪತ್ರ ಬರೆದರೆ ಹೇಗೆ? ಅವರೇನು ಸರ್ಕಾರಕ್ಕೆ ಪತ್ರ ಬರೆದಿಲ್ಲ ಎಂದವರು ಹೇಳಿದ್ದಾರೆ. ಅಗತ್ಯವಿದರೆ ಕೆಲವರನ್ನು ಸರ್ಕಾರದಿಂದ ಅವರ ಬಳಿ ಕಳಿಹಿಸುತ್ತೇವೆ. ಏನು ಸಮಸ್ಯೆಯಾಗಿದೆ ಎಂಬುದನ್ನು ಬೇಕಾದರೆ ಚರ್ಚೆ ಮಾಡುತ್ತೇವೆ ಎಂದು ಖಾರವಾಗಿ ತಿಳಿಸಿದ್ದಾರೆ.
ಪ್ರಮೋದಾದೇವಿ ಒಡೆಯರ್ ಹೇಳಿರುವ ಸಮಸ್ಯೆ ಬಗೆಹರಿಸ್ತೇವೆ. ಆದರೆ ಅವರು ಹೇಳಿದ್ದನ್ನೆಲ್ಲ ಒಪ್ಪಲು ಆಗುವುದಿಲ್ಲ. ಅವರು ಹೇಳಿದ ರೀತಿ 7 ದಿನ ದಸರಾ ಮಾಡಲು ಸಾಧ್ಯವಿಲ್ಲ. ದಸರಾ ಸರ್ಕಾರದ್ದಲ್ಲ ಎಂಬ ಪದ ಬಳಕೆಯೂ ಸರಿಯಲ್ಲ. ಸರ್ಕಾರದ ದಸರಾಗೂ ಇತಿಹಾಸ ಇದೆ. ಅದನ್ನು ದಸರಾ ಅಲ್ಲ ಎಂದು ಹೇಳುವುದನ್ನ ನಾವು ಒಪ್ಪಲ್ಲ. ಅಂಬಾರಿ ಆನೆ ಬಗ್ಗೆ ಕಾನೂನು ಪ್ರಕಾರ ಹೇಳುವ ಅವಶ್ಯಕತೆ ಇಲ್ಲ. ಕೊನೆ ಗಳಿಗೆಯಲ್ಲಿ ಅಂಬಾರಿ ಆನೆ ತೀರ್ಮಾನ ಆಗಿದ್ದು, ಮೊದಲು ಮಹೇಂದ್ರ, ಧನಂಜಯ ಎಂದ್ರು. ಆಮೇಲೆ ಪ್ರಶಾಂತ ಎಂದರು. ಇಲ್ಲೇ ಸ್ವಲ್ಪ ಗೊಂದಲ ಇತ್ತು, ಹೀಗಾಗಿ ಆನೆ ಆಯ್ಕೆ ತಡವಾಗಿದೆ ಎಂದು ತಿಳಿಸಿದರು.
ಇನ್ನು ಪ್ರಮೋದಾದೇವಿ ಒಡೆಯವರ್ ಬೇಸರ ಸಂಬಂಧ ಡಿಸಿಎಂ ಪರಮೇಶ್ವರ್ ಕೂಡ ಪ್ರತಿಕ್ರಿಯಿಸಿದ್ದಾರೆ. ಸರ್ಕಾರ ರಾಜಮನೆತನವನ್ನು ಧಿಕ್ಕರಿಸಿ ಯಾವುದೇ ಕಾರ್ಯಕ್ರಮ ಮಾಡಿಲ್ಲ. ಹಿಂದೆ ನಡೆದು ಬಂದ ಸಂಪ್ರದಾಯವನ್ನೇ ಮುಖ್ಯಮಂತ್ರಿಗಳು ಪಾಲನೆ ಮಾಡಿದ್ದಾರೆ. ಯಾವುದೇ ರೀತಿ ಸಂಪ್ರದಾಯ ಮೀರಿ ಕಾರ್ಯಕ್ರಮ ಮಾಡಿಲ್ಲ. ರಾಜಮಾತೆಯವರು ಬೇಸರಗೊಳ್ಳುವುದು ಬೇಡ. ಅವರಿಗೆ ಬೇಸರ ಏನಾದರೂ ಆಗಿದ್ದರೆ ಸರ್ಕಾರದ ಪರವಾಗಿ ನಾವು ಹೋಗಿ ಮಾತನಾಡುತ್ತೇವೆ ಎಂದು ತಿಳಿಸಿದ್ದಾರೆ.
45 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗಜಪಡೆ ಕ್ಯಾಪ್ಟನ್ ಆಯ್ಕೆ ವಿಚಾರ ಮುಚ್ಚಿಟ್ಟಿದ್ದಾರೆ. ಕೊನೆ ಕ್ಷಣದವರೆಗೂ ನನಗೆ ಅಂಬಾರಿ ಆನೆ ಬಗ್ಗೆ ಮಾಹಿತಿ ಕೊಡಲಿಲ್ಲ ಎಂದು ಪ್ರಮೋದಾ ದೇವಿ ಆರೋಪಿಸಿದ್ದರು.
ಅಲ್ಲದೆ ಮೈಸೂರು ದಸರಾ ಹಿನ್ನೆಲೆ ಅರಮನೆಯಲ್ಲಿ ಕಾರ್ಯಕ್ರಮ ಆಯೋಜನೆ ವಿಚಾರವಾಗಿ ಸರ್ಕಾರಕ್ಕೆ ಪ್ರಮೋದಾದೇವಿ ಕೆಲ ಸಲಹೆಯನ್ನೂ ನೀಡಿದ್ದರು. ಮೊದಲ ದಿನದಿಂದ 7ನೇ ದಿನದವರೆಗೆ ಸರ್ಕಾರ ಎಂದಿನಂತೆಯೇ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಬಹುದು. ಆಯುಧ ಪೂಜೆ, ವಿಜಯದಶಮಿ ದಿನದಂದು ಅರಮನೆ ಆವರಣವನ್ನು ಮುಕ್ತವಾಗಿಡಬೇಕೆಂದು ಆಗ್ರಹಿಸಿದ್ದರು.

