ದಾವಣಗೆರೆ: ಬೈಕ್ ನಲ್ಲಿ ಬಂದು ಚಿನ್ನಾಭರಣ ಕಸಿದು ಪರಾರಿಯಾಗಿದ್ದ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಹಾವೇರಿ ತಾಲೂಕಿನ ಹೊಸರಿತ್ತಿ ಗ್ರಾಮದ ನಿಯಾಜ್ ಅಹಮದ್ ಮತ್ತು ರಾಜು ಬಂಧಿತ ಆರೋಪಿಗಳು. ಬಂಧಿತರಿಂದ 1.80 ಲಕ್ಷ ರೂಪಾಯಿ ಮೌಲ್ಯದ 14 ಗ್ರಾಂ ತೂಕದ ಮಾಂಗಲ್ಯ ಸರ ಮತ್ತು ಕೃತ್ಯಕ್ಕೆ ಬಳಸಿದ ಕೆಟಿಎಂ ಬೈಕ್ ವಶಕ್ಕೆ ಪಡೆಯಲಾಗಿದೆ.
ಡಿಸೆಂಬರ್ 16ರಂದು ಚನ್ನಗಿರಿ ತಾಲೂಕಿನ ಅರಿಶಿನಘಟ್ಟ ಗ್ರಾಮದ ಸರೋಜಮ್ಮ ಬಸವಾಪಟ್ಟಣದ ದುರ್ಗಮ್ಮ ದೇವಸ್ಥಾನಕ್ಕೆ ಹೋಗಿದ್ದರು. ಸೂಳೆಕೆರೆಯ ತೂಗು ಸೇತುವೆ ಸಮೀಪ ಬೈಕ್ ನಲ್ಲಿ ಬಂದ ಆರೋಪಿಗಳು ಸರೋಜಮ್ಮ ಅವರ ಚಿನ್ನದ ಸರ ಕಸಿದು ಪರಾರಿಯಾಗಿದ್ದರು. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.

