ತುಮಕೂರು: ಪಾಕಿಸ್ತಾನ ಮೂಲದ ಉಗ್ರರ ಜೊತೆಗೆ ಸಂಪರ್ಕ ಹೊಂದಿದ್ದ ಹಿನ್ನೆಲೆಯಲ್ಲಿ ದೇಶದ್ರೋಹದ ಆರೋಪದಡಿ ತುಮಕೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ.
ತುಮಕೂರು ಶ್ರೀ ರಾಮನಗರ ನಿವಾಸಿ ಅಲ್ಲಾಬಕ್ಷ್(24), ದಾವಣಗೆರೆ ಬೀಡಿ ಕಾಲೋನಿ ನಿವಾಸಿ ಜಮೀರ್ ಖಾನ್(22) ಬಂಧಿತರು. ಪಾಕಿಸ್ತಾನದ ಐಎಸ್ಐ ಬೆಂಬಲಿತ ಉಗ್ರರು, ಗ್ಯಾಂಗ್ ಸ್ಟರ್ ಗಳು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಭಾರತೀಯ ಯುವಕರನ್ನು ಉದ್ದೇಶಪೂರ್ವಕವಾಗಿ ಪ್ರಚೋದಿಸುವ ರೀತಿ ಸಂದೇಶ ಹಾಕುತ್ತಿದ್ದರು. ಇವರನ್ನು ಜಾಲತಾಣದಲ್ಲಿ ಹಿಂಬಾಲಿಸುತ್ತಿದ್ದ ಬಂಧಿತರು ಭಾರತದ ವಿರುದ್ಧ ಕಮೆಂಟ್ ಮಾಡುತ್ತಿದ್ದರು.
ಜಾಲತಾಣದ ಮೇಲೆ ನಿಗಾ ಇಟ್ಟಿದ್ದ ರಾಷ್ಟ್ರೀಯ ತನಿಕಾ ದಳ ಯುವಕರ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿತ್ತು. ಪಾಕಿಸ್ತಾನ ಮೂಲ ಉಗ್ರರೊಂದಿಗೆ ತುಮಕೂರಿನ ಅಲ್ಲಾಬಕ್ಷ್ ಮತ್ತು ದಾವಣಗೆರೆಯ ಜಮೀರ್ ಸಂಪರ್ಕದಲ್ಲಿದ್ದು, ಉಗ್ರರ ಪೋಸ್ಟ್ ಬೆಂಬಲಿಸಿ ಕಮೆಂಟ್ ಹಾಕುತ್ತಿದ್ದರು. ಈ ಬಗ್ಗೆ ಕ್ಯಾತ್ಸಂದ್ರ ಪೊಲೀಸರಿಗೆ ರಾಷ್ಟ್ರೀಯ ತನಿಖಾ ದಳ ಮಾಹಿತಿ ನೀಡಿದ್ದು, ಇದನ್ನು ಆಧರಿಸಿ ಪೊಲೀಸರು ತುಮಕೂರು ಮತ್ತು ದಾವಣಗೆರೆಯಲ್ಲಿ ದಾಳಿ ಮಾಡಿ ಶಂಕಿತ ಉಗ್ರರ ವಿಚಾರಣೆ ನಡೆಸಿ ಬಂಧಿಸಿದ್ದಾರೆ.

