ಶಿವಮೊಗ್ಗ: ಸಾಮಾಜಿಕ ಜಾಲತಾಣ ಫೇಸ್ಬುಕ್ ನಲ್ಲಿ ನಕಲಿ ಖಾತೆ ಸೃಷ್ಟಿಸಿ ವ್ಯಕ್ತಿಯೊಬ್ಬರ ಖಾಸಗಿ ವಿಡಿಯೋ ಹರಿಬಿಟ್ಟಿದ್ದ ಆರೋಪದ ಮೇಲೆ ಇಬ್ಬರನ್ನು ಶಿವಮೊಗ್ಗ ಅಪರಾಧ ವಿಭಾಗ ಪೊಲೀಸರು ಬಂಧಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಹೊಸನಗರ ನಿವಾಸಿ ಸೀಮಾ ಜೂಲಿಯನ್ ಸೆರಾವೊ, ಬೆಂಗಳೂರಿನ ನಿವಾಸಿ ನಿಶಾಂತ್ ಬಂಧಿತ ಆರೋಪಿಗಳು. ಫೆಬ್ರವರಿ 6ರಂದು ಶಿವಮೊಗ್ಗ ಸೈಬರ್ ಅಪರಾಧ ಪೊಲೀಸ್ ಠಾಣೆಯಲ್ಲಿ ವ್ಯಕ್ತಿಯೊಬ್ಬರು ದೂರು ನೀಡಿದ್ದರು. ಫೇಸ್ಬುಕ್ ನಲ್ಲಿ ತಮ್ಮ ಖಾಸಗಿ ವಿಡಿಯೋ ಅಪ್ಲೋಡ್ ಮಾಡಿದ್ದಾರೆ ಎಂದು ಆರೋಪಿಸಿ ಕ್ರಮಕ್ಕೆ ಒತ್ತಾಯಿಸಿ ಅವರ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳ ಪತ್ತೆಗೆ ತಂಡ ರಚಿಸಿ ಕಾರ್ಯಾಚರಣೆ ಕೈಗೊಂಡಿದ್ದರು. ತಾಂತ್ರಿಕ ದಾಖಲೆಗಳ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿ ಸೀಮಾ ಜೂಲಿಯನ್ ಸೆರಾವೊ ಮತ್ತು ನಿಶಾಂತ್ ಎಂಬುವರನ್ನು ಬಂಧಿಸಲಾಗಿದೆ.

