ಬೆಂಗಳೂರು: 9ನೇ ತರಗತಿ ವಿದ್ಯಾರ್ಥಿಗೆ ಜೀವ ಬೆದರಿಕೆ ಹಾಕಿ ಚೆನ್ನಾಭರಣ ಸುಲಿಗೆ ಮಾಡಿದ್ದ ಇಬ್ಬರು ಆರೋಪಿಗಳನ್ನು ಯಶವಂತಪುರ ಠಾಣೆ ಪೋಲೀಸರು ಬಂಧಿಸಿದ್ದಾರೆ.
ಮತ್ತಿಕೆರೆ ನಿವಾಸಿ ಅರುಣ್ ಕುಮಾರ್ ಮತ್ತು ಎಂಜಿನಿಯರಿಂಗ್ ವಿದ್ಯಾರ್ಥಿ ಬಂಧಿತ ಆರೋಪಿಗಳಾಗಿದ್ದಾರೆ. ಆರೋಪಿಗಳಿಂದ 14.59 ಲಕ್ಷ ರೂ. ಮೌಲ್ಯದ 107 ಗ್ರಾಂ ಚಿನ್ನಾಭರಣ ಜಪ್ತಿ ಮಾಡಲಾಗಿದೆ. ಇತ್ತೀಚೆಗೆ ಖಾಸಗಿ ಶಾಲೆಯ 9ನೇ ತರಗತಿ ವಿದ್ಯಾರ್ಥಿಯ ಶಂಕಾಸ್ಪದ ವರ್ತನೆ ಗಮನಿಸಿದ ಶಾಲೆಯ ಪ್ರಾಂಶುಪಾಲರು ಆತನ ಪೋಷಕರಿಗೆ ಮಾಹಿತಿ ನೀಡಿದ್ದರು.
ಬಾಲಕನನ್ನು ಪೋಷಕರು ವಿಚಾರಿಸಿದಾಗ ಸುಲಿಗೆ ಕೃತ್ಯ ಬೆಳಕಿಗೆ ಬಂದಿದೆ. ಮತ್ತಿಕೆರೆಯಲ್ಲಿ ಬಾಲಕ ಮತ್ತು ಆರೋಪಿಗಳು ವಾಸವಾಗಿದ್ದಾರೆ. ಬಾಲಕ ಮತ್ತು ಆರೋಪಿಗಳು ಪರಿಚಯಸ್ಥರಾಗಿದ್ದರು. ಬಾಲಕನ ಮನೆಯಲ್ಲಿ ಆಭರಣ ಇರುವುದನ್ನು ಖಚಿತಪಡಿಸಿಕೊಂಡ ಆರೋಪಿಗಳು ಸುಲಿಗೆ ಆರಂಭಿಸಿದ್ದರು. ಸಣ್ಣ ಪುಟ್ಟ ತಪ್ಪುಗಳ ಬಗ್ಗೆ ಪೋಷಕರಿಗೆ ಹೇಳುವುದಾಗಿ ಬೆದರಿಸಿ ಹಣ ಆಭರಣ ತಂದು ಕೊಡುವಂತೆ ಒತ್ತಡ ಹೇರುತ್ತಿದ್ದರು. ಆರೋಪಿಗಳ ಮಾತಿಗೆ ಬೆದರಿದ ಬಾಲಕ ಮನೆಯಲ್ಲಿ ಪೋಷಕರಿಗೆ ಗೊತ್ತಾಗದಂತೆ ಆಭರಣ ತಂದುಕೊಡುತ್ತಿದ್ದ. ಡಿಸೆಂಬರ್ ನಲ್ಲಿ ಮನೆಯಲ್ಲಿ ಆಭರಣ ಕಳವಾಗಿರುವುದು ವಿದ್ಯಾರ್ಥಿಯ ಪೋಷಕರಿಗೆ ಗೊತ್ತಾಗಿತ್ತು.
ಸಂತ್ರಸ್ತ ಬಾಲಕನ ತಂದೆ, ತಾಯಿ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿದ್ದಾರೆ. ಪ್ರಾಂಶುಪಾಲರು ಬಾಲಕನ ವರ್ತನೆ ಗಮನಿಸಿ ಪೋಷಕರಿಗೆ ಮಾಹಿತಿ ನೀಡಿದಾಗ ಮನೆಯಲ್ಲಿ ಚಿನ್ನಾಭರಣ ಕಳವಾದ ಸಂಗತಿ ಗೊತ್ತಾಗಿದೆ. ಎಂಜಿನಿಯರಿಂಗ್ ವಿದ್ಯಾರ್ಥಿ ಮೋಜು-ಮಸ್ತಿಗೆ ಬಾಲಕನ ಬೆದರಿಸಿ ಚಿನ್ನಾಭರಣ ಪಡೆದುಕೊಳ್ಳುತ್ತಿದ್ದ. ಅರುಣ್ ಕುಮಾರ್ ಮೂಲಕ ಅವುಗಳನ್ನು ಒತ್ತೆ ಇಟ್ಟು ಹಣ ಪಡೆಯುತ್ತಿದ್ದ.

