ಬೆಂಗಳೂರು: ಶಾಲಾ ಶಿಕ್ಷಣ ಇಲಾಖೆಯ ಬೆಂಗಳೂರು ವಿಭಾಗದ ವ್ಯಾಪ್ತಿಯಲ್ಲಿ ದೀರ್ಘಕಾಲದಿಂದ ಸೇವೆ ಸಲ್ಲಿಸುತ್ತಿದ್ದ ಸರ್ಕಾರಿ ಪ್ರೌಢಶಾಲಾ ಸಹ ಶಿಕ್ಷಕರಿಗೆ ಇಲಾಖೆಯು ಸಿಹಿ ಸುದ್ದಿ ನೀಡಿದ್ದು, ಗ್ರೂಪ್-ಬಿ ವೃಂದದ ಮುಖ್ಯೋಪಾಧ್ಯಾಯರು ಹಾಗೂ ತತ್ಸಮಾನ ಉಪಪ್ರಾಂಶುಪಾಲರ ಹುದ್ದೆಗೆ ‘ಸ್ಥಾನಪನ್ನ ಮುಂಬಡ್ತಿ’ ನೀಡಿ ಸ್ಥಳ ನಿಯುಕ್ತಿಗೊಳಿಸಿ ಆದೇಶ ಹೊರಡಿಸಿದೆ. ಇತ್ತೀಚೆಗೆ ನಡೆದ ಕೌನ್ಸಿಲಿಂಗ್ ಪ್ರಕ್ರಿಯೆಯಲ್ಲಿ ಸ್ಥಳ ಆಯ್ಕೆ ಮಾಡಿಕೊಂಡಿದ್ದ ಅರ್ಹ ಶಿಕ್ಷಕರಿಗೆ ರೂ. 69,250 – 1,34,200 ರ ವೇತನ ಶ್ರೇಣಿಯೊಂದಿಗೆ ಈ ಹೊಸ ಜವಾಬ್ದಾರಿಯನ್ನು ವಹಿಸಲಾಗಿದ್ದು, ಆದೇಶದ ಪ್ರತಿ ಸಿಕ್ಕ 15 ದಿನಗಳ ಒಳಗಾಗಿ ನಿಯೋಜಿತ ಸ್ಥಳಗಳಲ್ಲಿ ಕರ್ತವ್ಯಕ್ಕೆ ಹಾಜರಾಗುವಂತೆ ಸೂಚಿಸಲಾಗಿದೆ. ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಾಳ್ಕರ್ ಅವರು ಈ ಕುರಿತು ಅಧಿಕೃತ ಜ್ಞಾಪನ ಪತ್ರವನ್ನು ಹೊರಡಿಸಿದ್ದಾರೆ.
ಪ್ರೌಢಶಾಲಾ ಗ್ರೇಡ್-2 ಸಹ ಶಿಕ್ಷಕರು/ತತ್ಸಮಾನ ವೃಂದದ ಶಿಕ್ಷಕರಿಗೆ ಗ್ರೂಪ್-ಬಿ ವೃಂದದ ಸರ್ಕಾರಿ ಪ್ರೌಢಶಾಲಾ ಮುಖ್ಯಶಿಕ್ಷಕರು ಹಾಗೂ ತತ್ಸಮಾನ ಉಪಪ್ರಾಂಶುಪಾಲರ ಹುದ್ದೆಗಳಿಗೆ ‘ಸ್ಥಾನಪನ್ನ ಮುಂಬಡ್ತಿ’ (Officiating Promotion) ನೀಡಲಾಗಿದೆ.
ವೇತನ ಶ್ರೇಣಿ: ಮುಂಬಡ್ತಿ ಪಡೆದ ಶಿಕ್ಷಕರಿಗೆ ರೂ. 69250 – 134200 ವೇತನ ಶ್ರೇಣಿಯಲ್ಲಿ ವೇತನ ನಿಗದಿಪಡಿಸಲಾಗಿದೆ.
ಕೌನ್ಸಿಲಿಂಗ್ ಮೂಲಕ ಆಯ್ಕೆ : ದಿನಾಂಕ 11-12-2025 ರಂದು ನಡೆದ ಸ್ಥಳ ಆಯ್ಕೆ ಕೌನ್ಸಿಲಿಂಗ್‌ನಲ್ಲಿ ಶಿಕ್ಷಕರು ತಮ್ಮ ಇಚ್ಛೆಯಂತೆ ಸ್ಥಳಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಷರತ್ತುಗಳು:
ಮುಂಬಡ್ತಿ ಪಡೆದ ಶಿಕ್ಷಕರು ನಿಯುಕ್ತಿಗೊಂಡ ಸ್ಥಳದಲ್ಲಿ 15 ದಿನಗಳ ಒಳಗಾಗಿ ವರದಿ ಮಾಡಿಕೊಳ್ಳಬೇಕು, ಇಲ್ಲದಿದ್ದರೆ ಮುಂಬಡ್ತಿ ಆದೇಶ ರದ್ದಾಗುತ್ತದೆ.ಕೌನ್ಸಿಲಿಂಗ್‌ನಲ್ಲಿ ಸ್ವತಃ ಸ್ಥಳ ಆಯ್ಕೆ ಮಾಡಿಕೊಂಡಿರುವುದರಿಂದ ಯಾವುದೇ ಕಾರಣಕ್ಕೂ ಸ್ಥಳ ಬದಲಾವಣೆಗೆ ಅವಕಾಶವಿರುವುದಿಲ್ಲ.ಈ ಮುಂಬಡ್ತಿಯು ಮಾನ್ಯ ಉಚ್ಚ ನ್ಯಾಯಾಲಯದಲ್ಲಿ ಬಾಕಿ ಇರುವ ರಿಟ್ ಅರ್ಜಿ ಸಂಖ್ಯೆ: 200448/2025 ರ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ.
ಅಧಿಕೃತ ಆದೇಶ: ಶಾಲಾ ಶಿಕ್ಷಣ ಇಲಾಖೆಯ ಆಯುಕ್ತರಾದ ವಿಕಾಸ್ ಕಿಶೋರ್ ಸುರಾಳ್ಕರ್ (ಭಾ.ಆ.ಸೇ) ಅವರು ಈ ಆದೇಶವನ್ನು ಹೊರಡಿಸಿದ್ದಾರೆ. ದಾವಣಗೆರೆ, ಹೊಸಕೋಟೆ, ಬಾಗೇಪಲ್ಲಿ ಸೇರಿದಂತೆ ಬೆಂಗಳೂರು ವಿಭಾಗದ ವಿವಿಧ ಜಿಲ್ಲೆಗಳ ಶಿಕ್ಷಕರು ಈ ಮುಂಬಡ್ತಿ ಪಟ್ಟಿಯಲ್ಲಿದ್ದಾರೆ. ದೋಷಪೂರಿತ ದಾಖಲೆ ಅಥವಾ ತಪ್ಪು ಮಾಹಿತಿ ನೀಡಿ ಮುಂಬಡ್ತಿ ಪಡೆದಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧ ಶಿಸ್ತು ಕ್ರಮ ಜರುಗಿಸುವುದಾಗಿ ಇಲಾಖೆ ಎಚ್ಚರಿಸಿದೆ.















