ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಭೂತನಗುಡಿ ಬಡಾವಣೆಯಲ್ಲಿ ವೃದ್ಧ ದಂಪತಿ ಶವ ಮನೆಯಲ್ಲಿ ಪತ್ತೆಯಾಗಿತ್ತು. ಈ ಕೊಲೆ ಪ್ರಕರಣಕ್ಕೆ ಈಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಕೊಲೆ ಮಾಡಿದ್ದು ಸಂಬಂಧಿಕ ಎಂದು ತಿಳಿದುಬಂದಿದ್ದು, ಆತ ವೈದ್ಯನಾಗಿದ್ದು ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿದ್ದ.
ಮಂಗಳವಾರ ಸಂಜೆ ಚಂದ್ರಪ್ಪ(80), ಜಯಮ್ಮ(75) ಎನ್ನುವರ ಶವ ಮನೆಯಲ್ಲಿ ಬೇರೆ ಬೇರೆ ಕೊಠಡಿಯಲ್ಲಿ ಪತ್ತೆಯಾಗಿತ್ತು. ಹತ್ಯೆ ನಡೆದು ಎರಡು ದಿನಗಳಾಗಿದೆ ಎಂದು ಅಂದಾಜಿಸಲಾಗಿದ್ದು, ನಿನ್ನೆ ಪ್ರಕರಣ ಬೆಳಕಿಗೆ ಬಂದಿತ್ತು.
ಸದ್ಯದ ಅಪ್‌ಡೇಟ್ ಪ್ರಕಾರ ಹತ್ಯೆಯಾಗಿರುವ ಚಂದ್ರಪ್ಪ ಸಂಬಂಧಿಕನಾಗಿರುವ ಯುವಕನಿಂದಲೇ ಕೊಲೆ ನಡೆದಿದೆ. ಆತ ವೈದ್ಯನಾಗಿದ್ದು, ದಂಪತಿಗಳಿಗೆ ಚಿಕಿತ್ಸೆ ನೀಡುತ್ತಿದ್ದ. ಚಂದ್ರಪ್ಪ, ಜಯಮ್ಮ ಆತನಿಗೆ ದೊಡ್ಡಪ್ಪ, ದೊಡ್ಡಮ್ಮ ಆಗಬೇಕಿದೆ.
ಮಂಗಳವಾರ ಬೆಳಗ್ಗೆ ಮಕ್ಕಳು ಎಷ್ಟು ಸಲ ಕರೆ ಮಾಡಿದರೂ ದಂಪತಿಗಳು ಉತ್ತರ ನೀಡಿರಲಿಲ್ಲ. ಆದ್ದರಿಂದ ಆತಂಕಗೊಂಡು ಸ್ಥಳೀಯರಿಗೆ ವಿಷಯ ತಿಳಿಸಿದ್ದರು. ಸ್ಥಳೀಯರು ಬಂದು ನೋಡಿದಾಗ ದಂಪತಿ ಸಾವನ್ನಪ್ಪಿರುವುದು ತಿಳಿದುಬಂದಿತ್ತು.
ಚಂದ್ರಪ್ಪ ಶವ ಮನೆಯ ಬೆಡ್‌ರೂಮ್‌ನಲ್ಲಿ ಮತ್ತು ಹಾಲ್‌ನಲ್ಲಿ ಪತ್ನಿ ಜಯಮ್ಮ ಶವ ಬಿದ್ದಿರುವುದು ಕಂಡುಬಂದಿತ್ತು. ಸ್ಥಳೀಯರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದರು. ಪ್ರಕರಣ ದಾಖಲು ಮಾಡಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದರು.
ಕೊಲೆಯಾಗಿರುವ ಚಂದ್ರಪ್ಪ ವಿಐಎಸ್ಎಲ್ ನಿವೃತ್ತ ಉದ್ಯೋಗಿ. ಮಂಗಳವಾರ ಪ್ರಾಥಮಿಕ ತನಿಖೆಯಲ್ಲಿ ಪೊಲೀಸರು ಮನೆಗೆ ದರೋಡೆಕೋರರು ನುಗ್ಗಿ ಹತ್ಯೆ ಮಾಡಿದ್ದಾರೆ ಎಂದು ಅಂದಾಜಿಸಿದ್ದರು.
ಮಕ್ಕಳು ನೀಡಿದ ದೂರಿನ ಅನ್ವಯ ತನಿಖೆ ಕೈಗೊಂಡಿದ್ದರು. ಆದರೆ ದಂಪತಿಗಳ ಶವದ ಮೇಲೆ ಯಾವುದೇ ಗಾಯದ ಗುರುತು ಪತ್ತೆ ಆಗಿರಲಿಲ್ಲ. ಇದರಿಂದಾಗಿ ಈ ಪ್ರಕರಣ ಸಾಕಷ್ಟು ಗೊಂದಲಕ್ಕೆ ಕಾರಣವಾಗಿತ್ತು.
ಚಂದ್ರಪ್ಪ ಮತ್ತು ಜಯಮ್ಮ ದಂಪತಿಗಳಿಗೆ ಮೂವರು ಗಂಡು ಮಕ್ಕಳು. ಎಲ್ಲರೂ ಮದುವೆಯಾಗಿ ಪ್ರತ್ಯೇಕವಾಗಿ ವಾಸವಾಗಿದ್ದಾರೆ. ಸೋಮವಾರ ರಾತ್ರಿ ಊಟದ ಬಳಿಕ ಸ್ಥಳೀಯರ ಜೊತೆ ಇಬ್ಬರು ಮಾತುಕತೆ ನಡೆಸಿದ್ದರು. ಮಂಗಳವಾರ ಶವವಾಗಿ ಪತ್ತೆಯಾಗಿದ್ದರು.
ಈಗ ಚಂದ್ರಪ್ಪ ಮತ್ತು ಜಯಮ್ಮ ಅವರನ್ನು ಹತ್ಯೆ ಮಾಡಿರುವುದು ಮಲ್ಲೇಶ್ ಎಂದು ತಿಳಿದುಬಂದಿದೆ. ಭದ್ರಾವತಿ ಓಲ್ಡ್ ಟೌನ್ ಠಾಣೆಯ ಪೊಲೀಸರು ಚಂದ್ರಪ್ಪ ಸಹೋದರನ ಮಗನನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಹತ್ಯೆಯ ಬಳಿಕ ಮನೆಯಿಂದ 450 ರಿಂದ 500 ಗ್ರಾಂ ಚಿನ್ನಾಭವರಣ ನಾಪತ್ತೆಯಾಗಿದೆ ಎಂಬ ಮಾಹಿತಿ ಇದೆ. ಕೇವಲ ಚಿನ್ನಕ್ಕಾಗಿ ಕೊಲೆ ಮಾಡಲಾಗಿದೆಯೇ? ಅಥವ ಬೇರೆ ಕಾರಣ ಇದೆಯೇ? ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಒಂದು ವಾರದಿಂದ ಡಾ.ಮಲ್ಲೇಶ್ ಚಂದ್ರಪ್ಪ ಮತ್ತು ಜಯಮ್ಮ ಮನೆಗೆ ನಿರಂತರವಾಗಿ ಮಾಡುತ್ತಿದ್ದ. ಸುಮಾರು ಸಾಲ ಮಾಡಿಕೊಂಡಿದ್ದೇನೆ. 15 ಲಕ್ಷ ರೂ. ಸಾಲ ನೀಡಬೇಕು ಎಂದು ಬೇಡಿಕೆ ಇಟ್ಟಿದ್ದ. ಆದರೆ ಚಂದ್ರಪ್ಪ ಇದಕ್ಕೆ ನಿರಾಕರಿಸಿದ್ದರು.
ಇದರಿಂದಾಗಿ ಕೋಪಗೊಂಡ ಡಾ.ಮಲ್ಲೇಶ್ ಚಂದ್ರಪ್ಪ ಮತ್ತು ಜಯಮ್ಮ ಅವರನ್ನು ಇಂಜೆಕ್ಷನ್ ನೀಡಿ ಹತ್ಯೆ ಮಾಡಿದ್ದಾನೆ. ಸದಾ ದೊಡ್ಡಪ್ಪ, ದೊಡ್ಡಮ್ಮನ ಆರೋಗ್ಯ ಕಾಳಜಿ ಮಾಡುತ್ತಿದ್ದ ಡಾ.ಮಲ್ಲೇಶ್ ಮನೆಯಲ್ಲಿದ್ದ ಚಿನ್ನಾಭರಣವನ್ನು ದೋಚಿದ್ದ.

