ತಮಿಳುನಾಡು ರಾಜ್ಯದಲ್ಲಿ ಈಗಾಗಲೇ ನಟ ವಿಜಯ್ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷದ ಮೂಲಕ ಸಂಚಲನ ಮೂಡಿಸಿದ್ದಾರೆ. ಏಪ್ರಿಲ್ 23ರಂದು ನಡೆಯುವ ಚುನಾವಣೆಗೆ ಯಾವುದೇ ಪಕ್ಷದ ಜೊತೆ ಮೈತ್ರಿ ಮಾಡಿಕೊಳ್ಳದೇ ಏಕಾಂಗಿಯಾಗಿ ಸ್ಪರ್ಧಿಸುತ್ತಿದ್ದಾರೆ.
ಏಪ್ರಿಲ್ 9ರಂದು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ 30 ಸದಸ್ಯ ಬಲದ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಟಿವಿಕೆ ಪಕ್ಷ ಭಾನುವಾರ ಎಲ್ಲಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಏಕಾಂಗಿಯಾಗಿ ಚುನಾವಣೆ ಎದುರಿಸಲಿದೆ.
ತಮಿಳುನಾಡು ಮಾದರಿಯಲ್ಲಿ ಪುದುಚೇರಿ ವಿಧಾನಸಭೆಯ ಸಾರ್ವತ್ರಿಕ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ ಸ್ವತಂತ್ರವಾಗಿ ಸ್ಪರ್ಧಿಸುತ್ತಿದೆ. ಕೇಂದ್ರಾಡಳಿತ ಪ್ರದೇಶದ 30 ಸದಸ್ಯರ ವಿಧಾನಸಭೆಯ ಪ್ರಸ್ತುತ ಅವಧಿಯು ಜೂನ್ 15ಕ್ಕೆ ಮುಕ್ತಾಯಗೊಳ್ಳಲಿದೆ. ಅಷ್ಟರೊಳಗೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬೇಕಿದೆ.
2021ರ ಪುದುಚೇರಿ ವಿಧಾನಸಭಾ ಚುನಾವಣೆಯಲ್ಲಿ ಎಐಎನ್ಆರ್ಸಿ 10 ಸ್ಥಾನಗಳೊಂದಿಗೆ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ನಂತರದ ಸ್ಥಾನಗಳಲ್ಲಿ ಡಿಎಂಕೆ 6 ಸ್ಥಾನಗಳನ್ನು ಪಡೆದರೆ, ಬಿಜೆಪಿ ಮತ್ತು ಕಾಂಗ್ರೆಸ್ ತಲಾ 6 ಸ್ಥಾನಗಳನ್ನು ಗೆದ್ದಿದ್ದವು. ಕಳೆದ ಬಾರಿ ಶೇಕಡಾ 84.8 ರಷ್ಟು ಮತದಾನ ದಾಖಲಾಗಿತ್ತು.
2016ರ ಚುನಾವಣೆಯಲ್ಲಿ ಕಾಂಗ್ರೆಸ್ 15 ಸ್ಥಾನಗಳನ್ನು ಪಡೆಯುವ ಮೂಲಕ ಬಹುಮತ ಗಳಿಸಿತ್ತು. ಆ ಚುನಾವಣೆಯಲ್ಲಿ ಎಐಎನ್ಆರ್ಸಿ 8 ಸ್ಥಾನಗಳನ್ನು, ಎಐಎಡಿಎಂಕೆ 4 ಸ್ಥಾನಗಳನ್ನು ಮತ್ತು ಡಿಎಂಕೆ 2 ಸ್ಥಾನಗಳನ್ನು ಗೆದ್ದಿದ್ದವು.
ಈ ಬಾರಿ ಬಿಜೆಪಿ ಮತ್ತು ಎಐಎನ್ಆರ್ಸಿ ಸೀಟು ಹಂಚಿಕೆ ಮಾಡಿಕೊಂಡು ಕಣಕ್ಕಿಳಿದಿವೆ. ಬಿಜೆಪಿ ತನ್ನ 14 ಸೀಟುಗಳಲ್ಲಿ ಎಐಎಡಿಎಂಕೆ ಪಕ್ಷಕ್ಕೆ 2 ಸೀಟುಗಳನ್ನು ಬಿಟ್ಟುಕೊಟ್ಟಿದೆ. ಎನ್ಡಿಎ ಮೈತ್ರಿಕೂಟ ಮತ್ತೆ ಸರ್ಕಾರ ರಚನೆ ಮಾಡುವ ಉತ್ಸಾಹದಲ್ಲಿದೆ.
ಎಐಎನ್ಆರ್ಸಿ ಸೀಟು ಜೊತೆ ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸುತ್ತಿರುವ ಬಿಜೆಪಿ, ಮಾರ್ಚ್ 21ರಂದು 9 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿತ್ತು. ಚುನಾವಣೆ ನಡೆಯಲಿರುವ ರಾಜ್ಯಗಳ ಅಭ್ಯರ್ಥಿಗಳನ್ನು ನಿರ್ಧರಿಸಲು ಮಾರ್ಚ್ 18ರಂದು ಬಿಜೆಪಿಯ ಕೇಂದ್ರ ಚುನಾವಣಾ ಸಮಿತಿಯು ಸಭೆ ಸೇರಿತ್ತು.
ಓಳುಕರೈ ಕ್ಷೇತ್ರದ ಪಕ್ಷೇತರ ಶಾಸಕ ಎಂ. ಶಿವಶಂಕರ್ ಪುದುಚೇರಿ ಕಾಂಗ್ರೆಸ್ ಉಸ್ತುವಾರಿ ಗಿರೀಶ್ ಚೋಡಂಕರ್ ಮತ್ತು ಸ್ಥಳೀಯ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಎಂ. ಶಿವಶಂಕರ್ ಅವರು 2021ರ ಚುನಾವಣೆಯಲ್ಲಿ ಓಳುಕರೈ ಕ್ಷೇತ್ರದಿಂದ ಜಯಗಳಿಸಿದ್ದರು.

