ರಾಯಚೂರು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ದಂಡಾಧಿಕಾರಿಗಳು ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163ರನ್ವಯ ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಆದೇಶವನ್ನು ಹೊರಡಿಸಿದ್ದಾರೆ.
ಈ ಆದೇಶ ತುಂಗಭದ್ರಾ ಜಲಾಶಯದಿಂದ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರನ್ನು ಹರಿಸುತ್ತಿರುವುದರಿಂದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮೈಲ್-47 ರಿಂದ 108ರ ತನಕ ನಿಷೇಧಾಜ್ಞೆ ಜಾರಿಗೊಳಿಸುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ರಾಯಚೂರು ಜಿಲ್ಲೆಯ ಸಿಂಧನೂರು, ಮಾನವಿ ಹಾಗೂ ರಾಯಚೂರು ತಾಲ್ಲೂಕುಗಳಿಗೆ ಮುಂಬರುವ ದಿನಗಳಲ್ಲಿ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಇರುತ್ತದೆ. ಕಾರಣ ಸದರಿ ತಾಲ್ಲೂಕುಗಳಿಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ತುಂಗಭದ್ರಾ ನದಿಯ ಮುನಿರಾಬಾದ್ ಜಲಾಶಯದಿಂದ 2 ಟಿಎಂಸಿ ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಮುಖಾಂತರ ಗಣೇಕಲ್ ಜಲಾಶಯಕ್ಕೆ ಬಿಡುಗಡೆಗೊಳಿಸಲು ಸಂಬಂಧಪಟ್ಟವರಿಗೆ ನಿರ್ದೇಶನ ನೀಡುವಂತೆ ಕೋರಲಾಗಿತ್ತು.
ಮಾನ್ಯ ಪ್ರಾದೇಶಿಕ ಆಯುಕ್ತರು, ಕಲಬುರಗಿ ವಿಭಾಗ ಅವರು ಸಾರ್ವಜನಿಕ ಹಿತದೃಷ್ಠಿಯಿಂದ ರಾಯಚೂರು ಜಿಲ್ಲೆಗೆ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ದಿನಾಂಕ 16-03-2026 ಬೆಳಗ್ಗೆ 8 ರಿಂದ ದಿನಾಂಕ 27-03-2026ರ ಬೆಳಗ್ಗೆ 8 ಗಂಟೆಯವರೆಗೆ ತುಂಗಭದ್ರಾ ಜಲಾಶಯದಿಂದ ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಯಡಿ ಬರುವ ರಾಯಚೂರು ಜಿಲ್ಲೆಗೆ ನೀರನ್ನು ಹರಿಸಲು ಆದೇಶಿಸಿರುತ್ತಾರೆ.
ತುಂಗಭದ್ರಾ ಎಡದಂಡೆ ಕಾಲುವೆಯಿಂದ ಗಣೇಕಲ್ ಸಮತೋಲನ ಜಲಾಶಯಕ್ಕೆ ನೀರನ್ನು ಹರಿಸುತ್ತಿರುವುದರಿಂದ ಹಾಗೂ ನೀರನ್ನು ಸಂಗ್ರಹಿಸಲು ಮುಖ್ಯ ಕಾಲುವೆ ಮೈಲ್-47 ರಿಂದ 108 ರವರೆಗೆ ಕಾಲುವೆಗಳ ಪ್ರದೇಶಗಳಲ್ಲಿ ಕಾನೂನು, ಶಾಂತಿ ಮತ್ತು ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಹಾಗೂ ಯಾವುದೇ ಅಹಿತಕರ ಘಟನೆಗಳು ಜರುಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ದಿನಾಂಕ 16-03-2026 ಬೆಳಗ್ಗೆ 8 ರಿಂದ ದಿನಾಂಕ 27-03-2026ರ ಬೆಳಗ್ಗೆ 8 ಗಂಟೆಯವರೆಗೆ ಕಾಲುವೆ ಪ್ರದೇಶದ ಸುತ್ತಮುತ್ತಲು 100 ಮೀಟರ್ ವ್ಯಾಪ್ತಿಯಲ್ಲಿ ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ 2023ರ ಕಲಂ 163 ರನ್ವಯ ನಿಷೇಧಾಜ್ಞೆಯನ್ನು ಜಾರಿಗೊಳಿಸಿ ಆದೇಶಿಸಲಾಗಿದೆ.
ನಿಷೇಧಾಜ್ಞೆ ಸಂದರ್ಭದ ನಿಬಂಧನೆಗಳು
- ತುಂಗಭದ್ರ ಎಡದಂಡೆ ಕಾಲುವೆ ಮೈಲು 47 ರಿಂದ 104ರ ವರೆಗಿನ ಪ್ರದೇಶದಲ್ಲಿ ಸಂಬಂಧಿಸಿದ ನೀರಾವರಿ ಅಧಿಕಾರಿಗಳು ಮಾತ್ರ ತೂಬುಗಳನ್ನು ತೆರೆಯತಕ್ಕದ್ದು. ಸಂಬಂಧಿಸಿದ ಅಧಿಕಾರಿಗಳನ್ನು ಹೊರತುಪಡಿಸಿ ಬೇರೆಯವರು ತೂಬುಗಳನ್ನು ತೆರೆಯುವುದು/ ಮುಚ್ಚುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
- ರೈತರು ಅನಧಿಕೃತವಾಗಿ ತಮ್ಮ ಹೊಲಗಳಿಗೆ ನೀರಾವರಿಗಾಗಿ ನೀರನ್ನು ಹರಿಸುವುದಾಗಲಿ ಅಥವಾ ಪಂಪ್ ಸೆಟ್‌ಗಳ ಹಾಗೂ ತೂಬುಗಳ ಮೂಲಕ ನೀರನ್ನು ಎತ್ತುವಳಿ ಮಾಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದೆ.
- ನೀರಾವರಿ ಇಲಾಖೆಯ ಅಧಿಕಾರಿಗಳು, (ಕಿರಿಯ ಇಂಜಿನೀಯರ್, ಸಹಾಯಕ ಇಂಜಿನೀಯರ್, ಸಹಾಯಕ ಕಾರ್ಯನಿರ್ವಾಹಕ ಇಂಜಿನೀಯರರು, ಕಾರ್ಯನಿರ್ವಾಹಕ ಇಂಜಿನೀಯರರು, ಹಾಗೂ ಅಧೀಕ್ಷಕ ಇಂಜಿನೀಯರರು) ಹಾಗೂ ಸದರಿ ಕಾರ್ಯಕ್ಕಾಗಿ ನಿಯೋಜಿಸಿದ ಕಂದಾಯ, ಜಿಲ್ಲಾ ಪಂಚಾಯತ ಹಾಗೂ ಇತರೆ ಇಲಾಖೆಯ ಅಧಿಕಾರಿಗಳು/ ಸಿಬ್ಬಂದಿಗಳು ಸಹ ಕಾರ್ಯ ಕ್ಷೇತ್ರದ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿದ್ದು, ನೀರಿನ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸತಕ್ಕದ್ದು, ಹಾಗೂ ಜಿಲ್ಲಾಧಿಕಾರಿಗಳ ಲಿಖಿತ ಪೂರ್ವಾನುಮತಿ ಪಡೆಯದೇ ರಜಾ ದಿನಗಳನ್ನು ಸೇರಿದಂತೆ ಕೇಂದ್ರ ಸ್ಥಾನವನ್ನು ಬಿಡತಕ್ಕದ್ದಲ್ಲ.
- ಸಂಬಂಧಪಟ್ಟ ತಹಶೀಲ್ದಾರರು ಹಾಗೂ ನೀರಾವರಿ ಇಲಾಖೆಯ ಅಧಿಕಾರಿಗಳು ಸದರಿ ಕಾರ್ಯಕ್ಕಾಗಿ ನಿಯೋಜಿಸಿದ ಅಧಿಕಾರಿಗಳೊಂದಿಗೆ ನೀರಿನ ನಿಗದಿತ ಗೇಜ್ ನಿರ್ವಹಣೆಯನ್ನು ಸಮರ್ಪಕವಾಗಿ ನಿರ್ವಹಿಸಲು ಹಾಗೂ ನೀರು ಪೋಲಾಗದಂತೆ ಕ್ರಮವಹಿಸಿತಕ್ಕದ್ದು.
- ಕಾಲುವೆ ಸುತ್ತಮುತ್ತ ಜನರು ಮಾರಕಾಸ್ತ್ರಗಳನ್ನು ಹಿಡಿದು ತಿರುಗಾಡುವುದನ್ನು ನಿಷೇಧಿಸಲಾಗಿದೆ.
- ತುಂಗಭದ್ರ ಎಡದಂಡೆ ಕಾಲುವೆಯ ಪ್ರದೇಶದ 100 ಮೀಟರ್ ಅಂತರದ ವ್ಯಾಪ್ತಿಯ ದಡದ ಸುತ್ತಮುತ್ತಲಿನ ಪ್ರದೇಶದಲ್ಲಿ ನಾಲ್ಕು ಜನಕ್ಕಿಂತ ಹೆಚ್ಚಿನ ಜನರು ಒಟ್ಟಾಗಿ ಓಡಾಡುವುದನ್ನು ನಿಷೇಧಿಸಲಾಗಿದೆ.

