ಕರಾವಳಿ ನಗರ ಮತ್ತು ಕರ್ನಾಟಕದ ರಾಜಧಾನಿ ಸಂಪರ್ಕಿಸಲು ಕೆಎಸ್ಆರ್‌ಟಿಸಿ ನೂತನ ಬಸ್ ಸೇವೆಯನ್ನು ಆರಂಭಿಸಿದೆ. ಕಾರವಾರ-ಬೆಂಗಳೂರು ನಡುವೆ ನಾನ್ ಎಸಿ ಪಲ್ಲಕ್ಕಿ ಬಸ್‌ಗಳ ಸಂಚಾರವನ್ನು ಪ್ರಾರಂಭಿಸಲಾಗಿದೆ.
ಕಾರವಾರ- ಬೆಂಗಳೂರು ನಡುವಿನ ನೂತನ ಪಲ್ಲಕ್ಕಿ ಬಸ್‌ಗಳಿಗೆ ಕಾರವಾರ ಬಸ್ ನಿಲ್ದಾಣದಲ್ಲಿ ಎಂಸಿಎ ಅಧ್ಯಕ್ಷ ಹಾಗೂ ಕಾರವಾರ ಶಾಸಕ ಸತೀಶ್ ಸೈಲ್ ಚಾಲನೆ ನೀಡಿದ್ದರು.
ಶಾಸಕರು ಮಾತನಾಡಿ, “ಕಾರವಾರ ಜನರ ಬಹು ಬೇಡಿಕೆಯಂತೆ ಬೆಂಗಳೂರು ನಗರಕ್ಕೆ ಸುಸಜ್ಜಿತ ಸರ್ಕಾರಿ ಬಸ್ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು 2 ಹೆಚ್ಚುವರಿ ಪಲ್ಲಕ್ಕಿ ಬಸ್ ಮತ್ತು ಮಲ್ಟಿ ಆಕ್ಸೆಲ್ ವೋಲ್ವೋ ಬಸ್ ಸೌಲಭ್ಯವನ್ನು ಒದಗಿಸಲಾಗುವುದು” ಎಂದು ಹೇಳಿದ್ದರು.
ಸತೀಶ್ ಸೈಲ್ ಮಾತನಾಡಿ, “ಕಾರವಾರಕ್ಕೆ 15 ಹೊಸ ಬಸ್‌ಗಳು ಬಂದಿವೆ. ಶಕ್ತಿ ಯೋಜನೆಯು ಸಾರಿಗೆ ಸಂಸ್ಥಗೆ ಆರ್ಥಿಕ ಶಕ್ತಿ ಒದಗಿಸಿದ್ದು, ಈ ವರ್ಷ ವಾಯುವ್ಯ ಕರ್ನಾಟಕ ಸಾರಿಗೆಯ ಉತ್ತರ ಕನ್ನಡ ವಿಭಾಗ 13 ಕೋಟಿ ಲಾಭವಾಗಿದೆ” ಎಂದು ತಿಳಿಸಿದ್ದಾರೆ.
ಈಗ ಕಾರವಾರ-ಬೆಂಗಳೂರು ನಡುವಿನ ಪಲ್ಲಕ್ಕಿ ನಾನ್ ಎಸಿ ಸ್ಲೀಪರ್ ಬಸ್ ವೇಳಾಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಜನರು ಕೆಎಸ್ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡುವ ಮೂಲಕವೂ ಟಿಕೆಟ್‌ಗಳನ್ನು ಬುಕ್ ಮಾಡಿಕೊಳ್ಳಬಹುದು.
ಬಸ್ ವೇಳಾಪಟ್ಟಿ
- ಕಾರವಾರ-ಬೆಂಗಳೂರು ನಡುವಿನ ಪಲ್ಲಕ್ಕಿ ಸ್ಲೀಪರ್ ಬಸ್ ಕಾರವಾರದಿಂದ ಸಂಜೆ 7.30ಕ್ಕೆ ಹೊಡಲಿದೆ. ಅಂಕೋಲಾಕ್ಕೆ ರಾತ್ರಿ 8.15, ಗೋಕರ್ಣ ರಾತ್ರಿ 8.50, ಶಿರಸಿ ರಾತ್ರಿ 10.45ಕ್ಕೆ ತಲುಪಲಿದ್ದು, ಬೆಂಗಳೂರು ನಗರಕ್ಕೆ ಬೆಳಗ್ಗೆ 7.30ಕ್ಕೆ ತಲುಪುತ್ತದೆ.
- ಬೆಂಗಳೂರು-ಕಾರವಾರ ನಡುವಿನ ಪಲ್ಲಕ್ಕಿ ಸ್ಲೀಪರ್ ಬಸ್ ಬೆಂಗಳೂರು ನಗರದಿಂದ ರಾತ್ರಿ 8.15ಕ್ಕೆ ಹೊರಟು, ಬೆಳಗ್ಗೆ 8 ಗಂಟೆಗೆ ಕಾರವಾರವನ್ನು ತಲುಪಲಿದೆ.

