HomeKarnatakaರಾಜ್ಯದಲ್ಲಿ 6 ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ: ವೈಭವದ ತುಮಕೂರು ದಸರಾ: ಡಿಡಿಎಂ ಜಿ. ಪರಮೇಶ್ವರ್

ರಾಜ್ಯದಲ್ಲಿ 6 ಸರ್ಕಾರಿ ಮೆಡಿಕಲ್ ಕಾಲೇಜು ಘೋಷಣೆ: ವೈಭವದ ತುಮಕೂರು ದಸರಾ: ಡಿಡಿಎಂ ಜಿ. ಪರಮೇಶ್ವರ್

ತುಮಕೂರು: ತುಮಕೂರು ದಸರಾ ಉತ್ಸವ ಆಚರಣೆಯಲ್ಲಿ ತುಮಕೂರು ಜಿಲ್ಲೆಯ ಕಲಾವಿದರಿಗೆ ಅವಕಾಶ ಕಲ್ಪಿಸಬೇಕು. ಕಳೆದ ವರ್ಷ ನಮ್ಮ ಜಿಲ್ಲೆಯ 5,343 ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿತ್ತು. ಇಷ್ಟೊಂದು ಪ್ರತಿಭೆಗಳಿಗೆ ಬೇರೆ ಜಿಲ್ಲೆಯಲ್ಲಿ ಅವಕಾಶಗಳು ಸಿಗುವುದು ಕಷ್ಟ. ಈ ಬಾರಿಯೂ ಅವಕಾಶ‌ ಕಲ್ಪಿಸಿಕೊಡುತ್ತೇವೆ ಎಂದು ಡಿಸಿಎಂ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ತುಮಕೂರಿನ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಸಭಾಂಗಣದಲ್ಲಿ ತುಮಕೂರು ದಸರಾ ಉತ್ಸವ ಆಚರಣೆಗೆ ಸಂಬಂಧಿಸಿದಂತೆ ಪೂರ್ವಭಾವಿ ಸಭೆ‌ ನಡೆಸಿದ ಡಿಸಿಎಂ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದರು.

ತುಮಕೂರು ದಸರಾ ಉತ್ಸವದ ಬಗ್ಗೆ ಚರ್ಚಿಸಲು ಸಭೆ ಕರೆಯಲಾಗಿತ್ತು.‌ ಕಳೆದ ಎರಡು ವರ್ಷ ಯಶಸ್ವಿಯಾಗಿ ಆಚರಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಮಿತಿಯಲ್ಲಿ ಕೆಲಸ ಮಾಡಿದ್ದ ಸದಸ್ಯರೊಂದಿಗೆ ಸಭೆ ನಡೆಸಲಾಗಿದೆ. ಜಿಲ್ಲಾಧಿಕಾರಿಗಳು ಈ ವರ್ಷದ ದಸರಾ ಯಾವ ರೀತಿ ಆಚರಿಸಬೇಕು ಎಂಬುದರ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದ್ದಾರೆ ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೈಸೂರು ದಸರಾ ಉತ್ಸವವನ್ನು ಯಾವುದೇ ಬದಲಾವಣೆಗಳಿಲ್ಲದೆ ಆಚರಿಸಲಾಗುತ್ತಿದೆ. ಅದೇ ರೀತಿಯಾಗಿ ತುಮಕೂರು ದಸರಾ ಉತ್ಸವವನ್ನು ಆಚರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಮೈಸೂರಿನಲ್ಲಿ ಚಾಮುಂಡೇಶ್ವರಿಗೆ ಪೂಜೆ ನಡೆಯುತ್ತದೆ. ಆ ವಿಚಾರಧಾರೆಗಳ ಹಿನ್ನೆಲೆಯಲ್ಲಿ ತುಮಕೂರು ದಸರಾ ಮುಂದುವರಿಸಲು ತೀರ್ಮಾನಿಸಲಾಗಿದೆ. ಒಂಬತ್ತು ದಿನ‌ ನವದುರ್ಗೆಯರ ಪೂಜೆ, ಪ್ರತಿದಿನ ಹೋಮ ಹವನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುವುದು ಎಂದು ತಿಳಿಸಿದ್ದಾರೆ.

ನಾಡಹಬ್ಬದ ವಿಚಾರದಲ್ಲಿ ಯಾವ ರೀತಿ ಆಚರಿಸಬೇಕು ಎಂಬುದರ ಕುರಿತು ಪ್ರಸ್ತಾವನೆ ಸಿದ್ದಪಡಿಸಿದ್ದಾರೆ.‌ ಸೆ.15ರಂದು ತುಮಕೂರು ದಸರಾ ಉತ್ಸವ ಆಚರಣೆಯ ಲಾಂಛನ ಬಿಡುಗಡೆ ಮಾಡಿ, ದಸರಾ ಆಚರಣೆಯ ಕುರಿತು ಮಾಹಿತಿ ಹಂಚಿಕೊಳ್ಳಲಾಗುವುದು. ನಗರದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಅಕ್ಟೋಬರ್ 11ರಂದು ಧ್ವಜಾರೋಹಣ, ಮಹಾಮಂಗಳಾರತಿ ಮೂಲಕ ತುಮಕೂರು ದಸರಾ ಉತ್ಸವ ಆಚರಣೆಯನ್ನು ಪ್ರಾರಂಭಿಸಲಾಗುವುದು. ಅಕ್ಟೋಬರ್ 21ರವರೆಗೆ ವಿವಿಧ ಪೂಜೆ, ಹೋಮ-ಹವನ ಸೇರಿದಂತೆ ಧಾರ್ಮಿಕ ಆಚರಣೆಗಳು ನಡೆಯುತ್ತವೆ ಎಂದರು.

ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವ ದಸರಾ, ಮಹಿಳಾ ದಸರಾ, ಕ್ರೀಡಾ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸಲಾಗುವುದು. ಈ ಬಾರಿ 9 ಕ್ರೀಡೆಗಳಿಗೆ ಅವಕಾಶವಿದೆ. ನಗರದಲ್ಲಿ ಹೆಚ್ಚು ವೈಭವಯುತವಾಗಿ ದೀಪಾಲಂಕಾರ ಮಾಡಲಾಗುವುದು. ರಾತ್ರಿ ವೇಳೆ ದೀಪಾಲಂಕಾರ ವೀಕ್ಷಿಸಲು ಉಚಿತ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು. ವಸ್ತುಪ್ರದರ್ಶನ, ಫಲಪುಷ್ಪ ಪ್ರದರ್ಶನ ಇರುತ್ತದೆ. ಕವಿಗೋಷ್ಠಿ ಆಯೋಜಿಸಲಾಗುವುದು. ಯುವಕರಿಗೆ ಪ್ರತ್ಯೇಕ ಕವಿಗೋಷ್ಠಿ ನಡೆಸುವ ಬಗ್ಗೆ ಸಲಹೆಗಳು ಬಂದಿವೆ ಎಂದರು.

ಈ ಬಾರಿ ಅಮಾನಿಕೆರೆಯಲ್ಲಿ ಅತಿದೊಡ್ಡ “ಲೈಟ್ ಆ್ಯಂಡ್ ಸೌಂಡ್” ಕಾರಂಜಿ ಮಾಡಲಾಗುತ್ತಿದೆ.‌ ಈ ಕಾರಂಜಿ ಶಾಶ್ವತವಾಗಿ ಇರುತ್ತದೆ. ತುಮಕೂರು ಸ್ಕ್ವೇರ್ ಮಾಡಲಾಗುತ್ತಿದೆ. ಶಿವಕುಮಾರ ಸ್ವಾಮೀಜಿ ವೃತ್ತ ಮಾಡಲಾಗುವುದು. ಬಹಳ ದೊಡ್ಡ ಎಲೆಕ್ಟ್ರಾನಿಕ್ ಸ್ಕ್ರೀನಿಂಗ್‌ ಗಳನ್ನು ಹಾಕಲಾಗುವುದು. ಇದು ಯುವಕರಿಗಾಗಿ ಮಾಡಿರುವುದು ಎಂದರು.

ಸಾರ್ವಜನಿಕರಿಗೆ ಹೆಲಿಕಾಪ್ಟರ್‌ ರೈಡ್, ಪಂಜಿನ ಕವಾಯತು ಪರೇಡ್ ಇರುತ್ತದೆ. ಈಗಾಗಲೇ ಮಕ್ಕಳಿಗೆ ತರಬೇತಿ ಪ್ರಾರಂಭವಾಗಿದೆ. ಡ್ರೋನ್‌ ಶೋ ನಡೆಸಲು ಪ್ರಯತ್ನಿಸಲಾಗುವುದು. ತುಮಕೂರು ದಸರಾ ಚೆನ್ನಾಗಿ ನಡೆಯಲು ಅವಕಾಶ ಮಾಡಿಕೊಡಬೇಕು.‌ ಕಳೆದ ವರ್ಷ ತುಮಕೂರು ದಸರಾ ಆಚರಣೆಗೆ ಸರ್ಕಾರ 2 ಕೋಟಿ ರೂ.‌ ನೀಡಿತ್ತು. ಈ ಬಾರಿ ಹೆಚ್ಚಿನ ಹಣ ಕೇಳಲಾಗುವುದು ಎಂದರು.

ಹಿಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮತ್ತು ಈಗಿನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎತ್ತಿನಹೊಳೆ ಯೋಜನೆ 2026-27ರಲ್ಲಿ ಪೂರ್ಣಗೊಳಿಸಲು ಯೋಜನೆ ಹಾಕಿಕೊಂಡಿದ್ದರು. ಅರಣ್ಯ ಪ್ರದೇಶದಲ್ಲಿ ನೆನೆಗುದಿಗೆ ಬಿದ್ದಿದ್ದ 500 ಮೀಟರ್ ಕೆಲಸ ಸಂಪೂರ್ಣವಾಗುತ್ತ ಬಂದಿದೆ. ಎತ್ತಿನಹೊಳೆ ನೀರು ಅರಸಿಕೆರೆ ಬರುತ್ತದೆ. ತದನಂತರ ತುಮಕೂರಿಗೆ ನೀರು ಬರಬೇಕು. ಎಲ್ಲ ಸಮಸ್ಯೆ ಸಂಪೂರ್ಣವಾಗಿ ಕ್ಲಿಯರ್ ಅಗಿದೆ. ಅಕ್ಟೋಬರ್ ವೇಳೆಗೆ ಟ್ರಯಲ್ ಆಗಿ ತುಮಕೂರಿಗೆ ನೀರು ತರುವ ಕೆಲಸ ಆಗಲಿದೆ. ಯಾವುದೇ ಅಡಚಣೆ ಇಲ್ಲದೆ ಕೆಲಸ ನಡೆಯುತ್ತಿದೆ.

ರಾಜ್ಯದಲ್ಲಿ 6 ಸರ್ಕಾರಿ ಮೆಡಿಕಲ್‌ ಕಾಲೇಜು ಘೋಷಣೆ ಮಾಡಲಾಗುತ್ತಿದೆ.‌ ಇದರಲ್ಲಿ ತುಮಕೂರು ಮೆಡಿಕಲ್‌ ಕಾಲೇಜು ಇದೆ. ಪಿಪಿಪಿ ಮಾದರಿಯಲ್ಲಿ ಮಾಡಲಾಗುವುದು. ಖಾಸಗಿಯವರನ್ನು ನಿಯಂತ್ರಣದಲ್ಲಿಟ್ಟುಕೊಂಡು ಉಪಯೋಗ ಮಾಡಲಾಗುತ್ತದೆ. ಪಿಪಿಪಿ ಮಾದರಿಯಲ್ಲಿ ಪ್ರಾಜೆಕ್ಟ್ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರವೇ ತಿಳಿಸಿದೆ‌‌ ಎಂದು ಹೇಳಿದ್ದಾರೆ.

ಸಭೆಯಲ್ಲಿ ಜಿಲ್ಲಾಧಿಕಾರಿ ಶುಭ ಕಲ್ಯಾಣ್, ಜಿಲ್ಲಾ ಪಂಚಾಯತ್ ಸಿಇಒ ಅಶ್ವಿಜಾ, ಮಹಾನಗರ ಪಾಲಿಕೆ ಆಯುಕ್ತರಾದ ಶುಭ, ಎಸ್‌ಪಿ ಅಶೋಕ್, ಬಿಎಂಟಿಸಿ ಉಪಾಧ್ಯಕ್ಷರಾದ ನಿಕೇತ್ ರಾಜ್‌ ಮೌರ್ಯ, ಸ್ಥಳೀಯ ಮುಖಂಡರಾದ ಮುರಳಿಧರ್ ಹಾಲಪ್ಪ ಹಾಗೂ ತುಮಕೂರು ದಸರಾ ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

LEAVE A REPLY

Please enter your comment!
Please enter your name here

Most Popular