ತುಮಕೂರು: ಪತಿ ಮಹಾಶಯನೊಬ್ಬ ಪ್ರೀತಿಸಿ ಮದುವೆಯಾಗಿದ್ದ ಪತ್ನಿಗೆ ಕೈಕೊಟ್ಟು ಮತ್ತೊಂದು ಮದುವೆಯಾಗುತ್ತಿದ್ದ ವೇಳೆ ನೇರವಾಗಿ ಕಲ್ಯಾಣ ಮಂಟಪಕ್ಕೆ ಬಂದ ಮೊದಲ ಪತ್ನಿ ಎರಡನೇ ಮದುವನ್ನು ನಿಲ್ಲಿಸಿರುವ ಘಟನೆ ತುವಮೂರಿನ ಎಸ್ ಎಲ್ ಎನ್ ಕಲ್ಯಾಣ ಮಂಟದಲ್ಲಿ ನಡೆದಿದೆ.
ಹರಿಪ್ರಸಾದ್ ಎಂಬಾತ ತನ್ನ ಮೊದಲ ಪತ್ನಿ ಲೇಪಾಕ್ಷಿ ಎಂಬುವವರಿಗೆ ಮೋಸ ಮಾಡಿ ಆಕೆಗೆ ಗೊತ್ತಾಗದಂತೆ ಇಂದು ತುಮಕೂರಿನಲ್ಲಿ ಎರಡನೇ ಮದುವೆಯಾಗುತ್ತಿದ್ದ. ಕಲ್ಯಾಣ ಮಂಟಪದಲ್ಲಿ ಮದುವೆಯ ವೇಳೆ ಇನ್ನೇನು ತಾಳಿ ಕಟ್ಟುವ ಸಮಯ. ಈ ವೇಳೆ ಪೊಲೀಸರೊಂದಿಗೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ ಮೊದಲ ಪತ್ನಿ ಲೇಪಾಕ್ಷಿ ಮದುವೆಯನ್ನು ನಿಲ್ಲಿಸಿದ್ದಾರೆ.
ಬೆಂಗಳೂರಿನ ಆರ್.ಆರ್.ನಗರದ ನಿವಾಸಿಯಾಗಿದ್ದ ಲೇಪಾಕ್ಷಿ ಎಂಬುವವರನ್ನು ಹರಿಪ್ರಸಾದ್ ಹತ್ತುವರ್ಷಗಳ ಹಿಂದೆಯೇ ವಿವಾಹವಾಗಿದ್ದ. ಲೇಪಾಕ್ಷಿ ಹಾಗೂ ಹರಿಪ್ರಸಾದ್ ಇಬ್ಬರೂ ಹೈಸ್ಕೂಲಿನಿಂದ ಕ್ಲಾಸ್ ಮೇಟ್ಸ್ ಆಗಿದ್ದರು. ಬಳಿಕ ಇಬ್ಬರೂ ಪ್ರೀತಿಸಿ ಮದುವೆಯಾಗಿದ್ದರು.
ಹರಿಪ್ರಸಾದ್ ತಾಯಿ ಹಾಗೂ ಸಹೋದರಿಯರಿಗೆ ಲೇಪಾಕ್ಷಿಯನ್ನು ಮದುವೆಯಾಗಿದ್ದು ಇಷ್ಟವಿರಲಿಲ್ಲ. ಇದೇ ಕಾರಣಕ್ಕೆ ಹಲವು ಬಾರಿ ಇಬ್ಬರನ್ನೂ ದೂರ ಮಾಡಲು ಸಾಕಷ್ಟು ಪ್ರಯತ್ನಿಸಿದ್ದರಂತೆ ಆದಾಗ್ಯೂ ಲೇಪಾಕ್ಷಿ ಹಾಗೂ ಹರಿಪ್ರಸಾದ್ ಹನ್ನೊಂದು ವರ್ಷಗಳ ಕಾಲ ಸಂಸಾರ ಮಾಡಿದ್ದರು. ಪದೇ ಪದೇ ಮನೆಯವರ ಮಾತು ಕೇಳಿ ಪತ್ನಿಯೊಂದಿಗೆ ಕಿರಿಕ್ ತೆಗೆದು ಕಿರುಕುಳ ನೀಡಲಾರಂಭಿಸಿದ್ದ. ಅಲ್ಲದೇ ವಿಚ್ಛೇದನ ನೀಡುವುದಾಗಿ ಹೇಳಿದ್ದ. ವಿಚ್ಛೇದನಕ್ಕೆ ಅರ್ಜಿಯನ್ನೂ ಹಾಕಿದ್ದ. ಆದರೆ ಕೋರ್ಟ್ ನಲ್ಲಿ ಮಾತುಕತೆ ವೇಳೆ ವಿಚ್ಛೇದನ ನೀಡಲ್ಲ, ಲೇಪಾಕ್ಷಿಯೊಂದಿಗೆ ಇರುವುದಾಗಿ ಹೇಳಿದ್ದ. ಅಲ್ಲದೇ ಬುಧವಾರ ಮನೆಗೆ ಬರುವುದಾಗಿಯೂ ಹೇಳಿದ್ದನಂತೆ.
ಬುಧವಾರ ಮನೆಗೆ ಬಾರದಿದ್ದಾಗ ಲೇಪಾಕ್ಷಿ ಹಾಗೂ ಆಕೆಯ ಪೋಷಕರು ಪ್ರಶ್ನಿಸಿದಾಗ ಮಾತನಾಡಿಲ್ಲ ಎನ್ನಲಾಗಿದೆ. ಈ ನಡುವೆ ಲೇಪಾಕ್ಷಿ ಹಾಗೂ ಆಕೆಯ ಪೋಷಕರಿಗೆ ಹರಿಪ್ರಸಾದ್ ಭಾನುವಾರ ತುಮಕೂರಿನಲ್ಲಿ ಇನ್ನೋರ್ವ ಯುವತಿಯೊಂದಿಗೆ ವಿವಾಹವಾಗುತ್ತಿದ್ದಾನೆ ಎಂಬ ವಿಚಾರ ಗೊತ್ತಾಗಿದೆ. ಪತಿ ಮನೆಗೆ ಬರುತ್ತಾನೆ ಎಂದು ಕಾಯುತ್ತಿದ್ದ ಪತ್ನಿಗೆ ವಿಷಯ ತಿಳಿದು ಶಾಕ್ ಆಗಿದೆ. ತಕ್ಷಣ ಬೆಂಗಳೂರಿನ ಆರ್.ಆರ್.ನಗರ ಠಾಣೆಗೆ ತೆರಳಿ ದೂರು ನೀಡಿದ್ದರು. ಬಳಿಕ ತಕ್ಷಣೆ ಲೇಪಾಕ್ಷಿ ತನ್ನ ಪೋಷಕರು ಹಾಗೂ ಪೊಲೀಸರೊಂದಿಗೆ ತುಮಕೂರಿನ ಕಲ್ಯಾಣ ಮಂಟಪಕ್ಕೆ ಬಂದಿದ್ದಾರೆ. ಎರಡನೇ ಮದುವೆಗೆ ಸಿದ್ಧನಾಗಿದ್ದ ಪತಿ ಮಹಾಶಯ ಪೊಲೀಸರೊಂದಿಗೆ ಮೊದಲ ಪತ್ನಿ ಎಂಟ್ರಿ ಕೊಟ್ಟಿದ್ದನ್ನು ಕಂಡು ದಂಗಾಗಿದ್ದಾನೆ. ಮೊದಲ ಪತ್ನಿಗೆ ವಿಚ್ಛೇದನ ನೀಡದೇ ಎರಡನೇ ಮದುವೆಯಾಗುತ್ತಿರುವುದು ಕಾನೂನು ಪ್ರಕಾರ ಅಪರಾಧ ಎಂದು ಪೊಲೀಸರು ಬುದ್ಧಿ ಹೇಳಿ ಮದುವೆ ನಿಲ್ಲಿಸಿದ್ದಾರೆ.

