ಕಲಿಯುಗ ವೈಕುಂಠವೆಂದೇ ಪ್ರಸಿದ್ಧವಾಗಿರುವ ತಿರುಮಲದಲ್ಲಿ ಭಾವನಾತ್ಮಕ ಹಾಗೂ ಅಪರೂಪದ ಘಟನೆ ನಡೆದಿದೆ. ಶ್ರೀ ವೆಂಕಟೇಶ್ವರ ಸ್ವಾಮಿಯ ಮೇಲಿನ ಅಪಾರ ಭಕ್ತಿಯಿಂದ 116 ವರ್ಷದ ವೃದ್ಧೆ ನವನೀತಮ್ಮ ಅವರು ಅಲಿಪಿರಿ ಕಾಲ್ನಡಿಗೆ ಮಾರ್ಗದ ಮೂಲಕ ತಿರುಮಲ ಬೆಟ್ಟ ಏರಿದ್ದರು. ಅವರ ಭಕ್ತಿಗೆ ಮನಸೋತ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಆಡಳಿತ ಮಂಡಳಿ, ಅವರಿಗೆ ವಿಶೇಷ ವಿಐಪಿ ಬ್ರೇಕ್ ದರ್ಶನ ಕಲ್ಪಿಸಿದೆ.
ಟಿಟಿಡಿ ಅಧ್ಯಕ್ಷ ಬಿಆರ್ ನಾಯುಡು ಅವರ ವಿಶೇಷ ಸೂಚನೆಯ ಮೇರೆಗೆ ಅಧಿಕಾರಿಗಳು ನವನೀತಮ್ಮ ಹಾಗೂ ಅವರ ಕುಟುಂಬ ಸದಸ್ಯರಿಗೆ ಶ್ರೀವಾರಿಯ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಿದರು.
ಶನಿವಾರ ಅಲಿಪಿರಿ ಕಾಲ್ನಡಿಗೆ ಮಾರ್ಗದಲ್ಲಿ 116 ವರ್ಷದ ವಯಸ್ಸಿನಲ್ಲಿಯೂ ನವನೀತಮ್ಮ ಅವರು ಧೈರ್ಯದಿಂದ ಬೆಟ್ಟ ಏರುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು. ಅವರ ಭಕ್ತಿಯನ್ನು ಕಂಡು ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆರಂಭದಲ್ಲಿ ಅವರು ಕರ್ನಾಟಕದವರು ಎಂದು ಸುದ್ದಿ ಹರಿದಾಡಿದ್ದರೂ, ನಂತರ ಅವರ ನಿಜವಾದ ವಿವರಗಳು ಬಹಿರಂಗವಾದವು.
ವೈರಲ್ ವಿಡಿಯೊ ಗಮನಿಸಿದ ಟಿಟಿಡಿ ಅಧ್ಯಕ್ಷ ಬಿಆರ್ ನಾಯುಡು, ವೃದ್ಧೆಯ ಬಗ್ಗೆ ಮಾಹಿತಿ ತಿಳಿದವರು ತಮ್ಮ ಕಚೇರಿಯನ್ನು ಸಂಪರ್ಕಿಸುವಂತೆ ‘ಎಕ್ಸ್’ (ಟ್ವಿಟರ್) ಮೂಲಕ ಮನವಿ ಮಾಡಿದ್ದರು. ಅವರ ನಿರ್ದೇಶನದಂತೆ ಟಿಟಿಡಿ ವಿಜಿಲೆನ್ಸ್ ಸಿಬ್ಬಂದಿ ತನಿಖೆ ನಡೆಸಿ, ವೃದ್ಧೆ ತಮಿಳುನಾಡಿನ ನವನೀತಮ್ಮ ಎಂದು ಗುರುತಿಸಿದರು. ಪ್ರಸ್ತುತ ಅವರು ತಿರುಪತಿಯ ಜೀವಕೋಣದಲ್ಲಿರುವ ತಮ್ಮ ಸಂಬಂಧಿಕರ ಮನೆಯಲ್ಲಿ ವಾಸಿಸುತ್ತಿರುವುದು ತಿಳಿದುಬಂತು.
ವಿವರಗಳು ತಿಳಿದ ತಕ್ಷಣ ಬಿಆರ್ ನಾಯುಡು ಅವರ ಆದೇಶದಂತೆ ಅಧಿಕಾರಿಗಳು ನವನೀತಮ್ಮ ಹಾಗೂ ಅವರ ಕುಟುಂಬಕ್ಕೆ ವಿಐಪಿ ಬ್ರೇಕ್ ದರ್ಶನ ವ್ಯವಸ್ಥೆ ಮಾಡಿ, ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನ ಮಾಡಿಸಿದರು.
ದರ್ಶನದ ಬಳಿಕ ರಂಗನಾಯಕುಲ ಮಂಟಪದಲ್ಲಿ ವೇದ ಪಂಡಿತರು ಅವರಿಗೆ ವೇದಾಶೀರ್ವಚನ ನೀಡಿದರು.ಈ ಸಂದರ್ಭದಲ್ಲಿ ಟಿಟಿಡಿ ಕಾರ್ಯನಿರ್ವಾಹಕ ಅಧಿಕಾರಿ ಮುದ್ದಾಡ ರವಿಚಂದ್ರ ಅವರು ನವನೀತಮ್ಮ ಅವರಿಗೆ ಪಟ್ಟು ವಸ್ತ್ರ ಹೊದಿಸಿ, ಶ್ರೀವಾರಿಯ ತೀರ್ಥ ಪ್ರಸಾದವನ್ನು ನೀಡಿ ಗೌರವಿಸಿದರು. ಬಳಿಕ ಅವರ ಪಾದಗಳಿಗೆ ನಮಸ್ಕರಿಸಿ ಆಶೀರ್ವಾದ ಪಡೆದ ದೃಶ್ಯ ಭಕ್ತರ ಮನ ಗೆದ್ದಿತು. 116 ವರ್ಷದ ವೃದ್ಧೆಯ ಭಕ್ತಿಗೆ ಟಿಟಿಡಿ ನೀಡಿದ ಈ ಗೌರವಕ್ಕೆ ಭಕ್ತರು ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
https://twitter.com/TGGovtUpdates/status/2073235012405858603/photo/1

