ಬೆಂಗಳೂರು: ದೇಶದ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ (ಟ್ರಾಫಿಕ್) ಎಂಬುದು ನಿತ್ಯದ ಕರಾಳ ವಾಸ್ತವ. ಗಂಟೆಗಟ್ಟಲೆ ರಸ್ತೆಯಲ್ಲೇ ಕಾಲಹರಣ ಮಾಡುವುದು ಬೆಂಗಳೂರಿಗರಿಗೆ ಅನಿವಾರ್ಯವಾಗಿಬಿಟ್ಟಿದೆ. ಇದೀಗ ಈ ಗಂಭೀರ ಸಮಸ್ಯೆ ಬಗ್ಗೆ ಇನ್ಫೋಸಿಸ್ ಸಹ-ಸಂಸ್ಥಾಪಕ ಕ್ರಿಸ್ ಗೋಪಾಲಕೃಷ್ಣನ್ ಅವರು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ಇವರ ಸಾಮಾಜಿಕ ಜಾಲತಾಣದ ಪೋಸ್ಟ್ ಸಾರ್ವಜನಿಕ ವಲಯದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
31 ಕಿಲೋಮೀಟರ್‌ಗೆ 2.5 ಗಂಟೆ ಕ್ರಿಸ್ ಗೋಪಾಲಕೃಷ್ಣನ್ ಬೇಸರ:
ಕೆಲಸದ ನಿಮಿತ್ತ ನಗರದಲ್ಲಿ ಪ್ರಯಾಣಿಸಿದ್ದ ಕ್ರಿಸ್ ಗೋಪಾಲಕೃಷ್ಣನ್ ಅವರು ತಮಗಾದ ಭೀಕರ ಟ್ರಾಫಿಕ್ ಅನುಭವವನ್ನು ‘ಎಕ್ಸ್’ (ಟ್ವಿಟರ್) ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ. “ಇಂದು 31 ಕಿಲೋಮೀಟರ್ ಪ್ರಯಾಣಿಸಲು ನನಗೆ ಎರಡೂವರೆ ಗಂಟೆ ಬೇಕಾಯಿತು. ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ” ಎಂದು ಬೇಸರ ಹೊರಹಾಕಿದ್ದಾರೆ.
ಈ ದುಸ್ಥಿತಿಗೆ ಕೇವಲ ಟ್ರಾಫಿಕ್ ಮಾತ್ರವಲ್ಲದೆ ಮೂರು ಪ್ರಮುಖ ಕಾರಣಗಳನ್ನು ಅವರು ಪಟ್ಟಿ ಮಾಡಿದ್ದಾರೆ:
ಅತಿಯಾದ ಸಂಚಾರ ದಟ್ಟಣೆ (ಟ್ರಾಫಿಕ್)
ರಸ್ತೆಗಳ ಕಳಪೆ ಸ್ಥಿತಿ
ವಾಹನ ಸವಾರರಲ್ಲಿನ ಶಿಸ್ತಿನ ಕೊರತೆ
ನೆಟ್ಟಿಗರ ಪ್ರತಿಕ್ರಿಯೆಗಳ ಮಹಾಪೂರ: ಉದ್ಯೋಗಿಗಳಿಗೆ WFH ಭಾಗ್ಯ ಕೊಡಿ
ಕ್ರಿಸ್ ಗೋಪಾಲಕೃಷ್ಣನ್ ಅವರ ಪೋಸ್ಟ್ ವೈರಲ್ ಆಗುತ್ತಿದ್ದಂತೆ, ಸಾವಿರಾರು ಬೆಂಗಳೂರಿಗರು ತಮ್ಮ ದೈನಂದಿನ ನರಕಯಾತನೆಯನ್ನು ಕಮೆಂಟ್‌ಗಳ ಮೂಲಕ ಹಂಚಿಕೊಂಡಿದ್ದಾರೆ.
ವರ್ಕ್ ಫ್ರಮ್ ಹೋಮ್ ಸಲಹೆ: “ಕಳೆದ ವಾರ ನನ್ನ 28 ಕಿ.ಮೀ ಪ್ರಯಾಣಕ್ಕೆ 3 ಗಂಟೆ ಹಿಡಿಯಿತು. ರಸ್ತೆಗಳು ಮತ್ತು ಸಂಚಾರ ನಿಯಮಗಳು ಸರಿಯಾಗುವವರೆಗೂ ಇನ್ಫೋಸಿಸ್ ಸೇರಿದಂತೆ ಎಲ್ಲಾ ಐಟಿ ಕಂಪನಿಗಳು ಉದ್ಯೋಗಿಗಳಿಗೆ ‘ರಿಮೋಟ್ ವರ್ಕ್’ (ಮನೆಯಿಂದಲೇ ಕೆಲಸ) ಸೌಲಭ್ಯವನ್ನು ನೀಡಬೇಕು” ಎಂದು ಬಳಕೆದಾರರೊಬ್ಬರು ಸಲಹೆ ನೀಡಿದ್ದಾರೆ.
ಸಾರ್ವಜನಿಕ ಸಾರಿಗೆ ಬಳಕೆ: ನಗರದ ಮೂಲಸೌಕರ್ಯಗಳು ಅತಿಯಾದ ಖಾಸಗಿ ವಾಹನಗಳ ಒತ್ತಡವನ್ನು ತಾಳಲಾರವು. ವಾರಾಂತ್ಯದಲ್ಲಾದರೂ ಜನರು ಬಸ್ ಅಥವಾ ಮೆಟ್ರೋ ಬಳಸಬೇಕು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಜೀವನದ ಶಕ್ತಿ ವ್ಯರ್ಥ: ಗಂಟೆಗಟ್ಟಲೆ ಧೂಳು ತುಂಬಿದ ರಸ್ತೆಯಲ್ಲಿ ಪರದಾಡುವುದರಿಂದ ಜನರ ದೈನಂದಿನ ಶಕ್ತಿ ಮತ್ತು ಸಮಯ ರಸ್ತೆಯಲ್ಲೇ ವ್ಯರ್ಥವಾಗುತ್ತಿದೆ. ಅತಿ ದೊಡ್ಡ ದುರಂತವೆಂದರೆ, ಜನರು ಇಂತಹ ಅಸಹನೀಯ ಪರಿಸ್ಥಿತಿಯನ್ನೇ ‘ಸಾಮಾನ್ಯ’ ಎಂದು ಸ್ವೀಕರಿಸುತ್ತಿದ್ದಾರೆ ಎಂದು ಮತ್ತೊಬ್ಬರು ಆಳಲು ತೋಡಿಕೊಂಡಿದ್ದಾರೆ.
ಟೈರ್-2, ಟೈರ್-3 ನಗರಗಳಿಗೆ ಐಟಿ ಕಂಪನಿಗಳ ಸ್ಥಳಾಂತರ ಸೂಕ್ತ?
ಬೆಂಗಳೂರಿನ ಮೇಲಿನ ಒತ್ತಡವನ್ನು ತಗ್ಗಿಸಲು ಉದ್ಯಮಿಗಳು ಹಾಗೂ ಸಾರ್ವಜನಿಕರು ಮಹತ್ವದ ಪ್ಲಾನ್ ಒಂದನ್ನು ಸರ್ಕಾರದ ಮುಂದಿಟ್ಟಿದ್ದಾರೆ. ನಗರದ ಹೊರವಲಯದಲ್ಲಿ ಐಟಿ ಪಾರ್ಕ್ ಅಥವಾ ಕೈಗಾರಿಕಾ ಪಾರ್ಕ್ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಬದಲಿಗೆ, ಬೆಂಗಳೂರಿನಲ್ಲಿರುವ ಐಟಿ ಕಂಪನಿಗಳ ಉದ್ಯೋಗಿಗಳನ್ನು ಮತ್ತು ಹೊಸ ಪ್ರಾಜೆಕ್ಟ್‌ಗಳನ್ನು ರಾಜ್ಯದ ಇತರ ಪ್ರಮುಖ ನಗರಗಳಾದ ಮೈಸೂರು, ಮಂಗಳೂರು ಹಾಗೂ ಹುಬ್ಬಳ್ಳಿ-ಧಾರವಾಡಕ್ಕೆ ವರ್ಗಾಯಿಸಬೇಕು. ಇದರಿಂದ ಆ ನಗರಗಳೂ ಅಭಿವೃದ್ಧಿಯಾಗುತ್ತವೆ ಹಾಗೂ ಬೆಂಗಳೂರಿನ ಟ್ರಾಫಿಕ್ ಸಮಸ್ಯೆಯೂ ಗಣನೀಯವಾಗಿ ತಗ್ಗುತ್ತದೆ ಎಂದು ಹಲವರು ಪ್ರತಿಪಾದಿಸಿದ್ದಾರೆ.
ಬೆಂಗಳೂರು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ವಲಯದಲ್ಲಿ ಗುರುತಿಸಿಕೊಂಡಿದ್ದರೂ, ಮೂಲಸೌಕರ್ಯ ಅಭಿವೃದ್ಧಿ ಮಾತ್ರ ಜನಸಂಖ್ಯೆಗೆ ತಕ್ಕಂತೆ ವೇಗವಾಗಿಲ್ಲ ಎಂಬುದು ಸಾಬೀತಾಗಿದೆ. ಕ್ರಿಸ್ ಗೋಪಾಲಕೃಷ್ಣನ್ ಅವರ ಈ ದನಿ, ಬೆಂಗಳೂರಿನ ಟ್ರಾಫಿಕ್ ಭೀಕರತೆಯನ್ನು ಮತ್ತೆ ಮುನ್ನೆಲೆಗೆ ತಂದಿದ್ದು, ಆಡಳಿತ ವರ್ಗ ಇನ್ನಾದರೂ ಎಚ್ಚೆತ್ತುಕೊಳ್ಳುತ್ತಾ ಎಂಬುದನ್ನು ಕಾದುನೋಡಬೇಕಿದೆ

