ವಾಷಿಂಗ್ಟನ್/ಟೆಹ್ರಾನ್: ಅಮೆರಿಕಾ ಮತ್ತು ಇರಾನ್ ನಡುವಿನ ಸಂಬಂಧ ಅತ್ಯಂತ ಕಠಿಣ ಹಂತವನ್ನು ತಲುಪಿದ್ದು, ಮಧ್ಯಪ್ರಾಚ್ಯ ಮತ್ತೆ ಯುದ್ಧದ ಅಂಚಿನಲ್ಲಿ ನಿಂತಿದೆ.
ಇರಾನ್ ತನ್ನ ನಾಯಕರ ಹತ್ಯೆಗೆ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಅಮೆರಿಕಾದ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹತ್ಯೆಗೆ ಸಂಚು ರೂಪಿಸುತ್ತಿದೆ ಎಂಬ ಆರೋಪಗಳು ಕೇಳಿಬಂದಿರುವ ಬೆನ್ನಲ್ಲೇ, ಟ್ರಂಪ್ ಅವರು ಇರಾನ್‌ಗೆ ನೇರವಾದ ಮತ್ತು ತೀವ್ರ ಸ್ವರೂಪದ ಎಚ್ಚರಿಕೆ ನೀಡಿದ್ದಾರೆ.
ತಮ್ಮ ಅಧಿಕೃತ ‘ಟ್ರೂತ್ ಸೋಶಿಯಲ್’ (Truth Social) ಖಾತೆಯ ಮೂಲಕ ಆಕ್ರೋಶ ಹೊರಹಾಕಿರುವ ಅಧ್ಯಕ್ಷ ಟ್ರಂಪ್, ಇರಾನ್‌ನ ಯಾವುದೇ ದುಸ್ಸಾಹಸಕ್ಕೆ ತಕ್ಕ ಪ್ರತ್ಯುತ್ತರ ನೀಡಲು ಅಮೆರಿಕ ಸಿದ್ಧವಾಗಿದೆ ಎಂದು ಘೋಷಿಸಿದ್ದಾರೆ.
ಇರಾನ್‌ನತ್ತ ಈಗಾಗಲೇ 1,000 ಕ್ಷಿಪಣಿಗಳನ್ನು ‘ಲಾಕ್ ಆಂಡ್ ಲೋಡ್’ ಮಾಡಿ ಗುರಿ ಇಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಒಂದು ವೇಳೆ ಅಮೆರಿಕದ ಅಧ್ಯಕ್ಷರಾದ ತಮ್ಮ ಮೇಲೆ ಅಥವಾ ಅಮೆರಿಕದ ನಾಯಕರ ಮೇಲೆ ಹತ್ಯೆಯ ಪ್ರಯತ್ನ ನಡೆದರೆ, ಈ ಕ್ಷಿಪಣಿಗಳ ಜೊತೆಗೆ ತಕ್ಷಣವೇ ಸಾವಿರಾರು ಕ್ಷಿಪಣಿಗಳನ್ನು ಪ್ರಯೋಗಿಸಿ ಇರಾನ್‌ನಾದ್ಯಂತ ಸರ್ವನಾಶ ಮಾಡಲು ಆದೇಶ ನೀಡಲಾಗಿದೆ.
ಮಿಲಿಟರಿ ಆದೇಶ: ಯುಎಸ್ ಮಿಲಿಟರಿಗೆ ಈ ಕುರಿತು ಸ್ಪಷ್ಟ ನಿರ್ದೇಶನಗಳನ್ನು ನೀಡಲಾಗಿದ್ದು, ಇರಾನ್‌ನ ಯಾವುದೇ ಭಾಗವನ್ನು ನಾಶಪಡಿಸುವ ಸಾಮರ್ಥ್ಯವನ್ನು ಅಮೆರಿಕ ಹೊಂದಿದೆ ಎಂದು ಅವರು ಎಚ್ಚರಿಸಿದ್ದಾರೆ.
ಖಮೇನಿ ಸೇಡಿನ ಕಿಚ್ಚು
ಇರಾನ್‌ನ ನಾಯಕರಾದ ಖಮೇನಿ ಅವರ ಸಾವಿಗೆ ಟ್ರಂಪ್ ಕಾರಣ ಎಂದು ನಂಬಿರುವ ಇರಾನ್, ಟ್ರಂಪ್ ಹತ್ಯೆಗೆ ಮೊದಲಿನಿಂದಲೂ ಹೊಂಚು ಹಾಕುತ್ತಿದೆ ಎಂದು ಅಮೆರಿಕದ ಗುಪ್ತಚರ ವರದಿಗಳು ಸೂಚಿಸುತ್ತಿವೆ.
ಇರಾನ್‌ನ ಹಿಟ್‌ಲಿಸ್ಟ್‌ನಲ್ಲಿ ಟ್ರಂಪ್ ಹೆಸರು ಅಗ್ರಸ್ಥಾನದಲ್ಲಿದೆ ಎಂದು ಇಸ್ರೇಲ್‌ನ ಗುಪ್ತಚರ ಸಂಸ್ಥೆಗಳು ಸಹ ಅಮೆರಿಕಕ್ಕೆ ಎಚ್ಚರಿಕೆ ನೀಡಿದ್ದವು. ಈ ವಿಷಯವನ್ನು ಟ್ರಂಪ್ ನ್ಯಾಟೋ (NATO) ಸಭೆಯಲ್ಲೂ ಪ್ರಸ್ತಾಪಿಸಿದ್ದರು.
ನ್ಯೂಯಾರ್ಕ್ ಪೋಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಟ್ರಂಪ್, ಇರಾನ್ ಕಳೆದ ಹಲವು ವರ್ಷಗಳಿಂದ ತನ್ನ ಹತ್ಯೆಗೆ ಸಂಚು ರೂಪಿಸುತ್ತಿದೆ. ಒಂದು ವೇಳೆ ಏನಾದರೂ ಅಹಿತಕರ ಘಟನೆ ನಡೆದರೆ, ಇರಾನ್ ಹಿಂದೆಂದೂ ನೋಡಿರದ ರೀತಿಯಲ್ಲಿ ಪ್ರತೀಕಾರ ಎದುರಿಸಬೇಕಾಗುತ್ತದೆ ಎಂದು ಸ್ಪಷ್ಟಪಡಿಸಿದ್ದಾರೆ.
ಉಭಯ ದೇಶಗಳ ನಡುವಿನ ಒಪ್ಪಂದಗಳು ಸಂಪೂರ್ಣ ಮುರಿದುಬಿದ್ದಿದ್ದು, ರಾಜತಾಂತ್ರಿಕ ಮಾತುಕತೆಗಳಿಗಿಂತ ಶಸ್ತ್ರಾಸ್ತ್ರಗಳ ಭಾಷೆ ಜೋರಾಗಿದೆ. ಟ್ರಂಪ್ ಅವರ ಈ ಹೇಳಿಕೆಯು ಮಧ್ಯಪ್ರಾಚ್ಯದಲ್ಲಿ ಭೀಕರ ಯುದ್ಧವೊಂದಕ್ಕೆ ದಾರಿ ಮಾಡಿಕೊಡುವ ಆತಂಕವನ್ನು ಸೃಷ್ಟಿಸಿದೆ.
ಈ ಬೆಳವಣಿಗೆಗಳು ಜಾಗತಿಕ ಭದ್ರತೆಯ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆಯಿದ್ದು, ಅಂತರಾಷ್ಟ್ರೀಯ ಸಮುದಾಯದ ಕಣ್ಣು ಈ ಎರಡು ದೇಶಗಳ ಮುಂದಿನ ಹೆಜ್ಜೆಯ ಮೇಲಿದೆ.ಈ ಭೌಗೋಳಿಕ ರಾಜಕೀಯ ಪರಿಸ್ಥಿತಿಯು ದಿನದಿಂದ ದಿನಕ್ಕೆ ಉಲ್ಬಣಗೊಳ್ಳುತ್ತಿದ್ದು, ಯುದ್ಧದ ಮೋಡಗಳು ಕವಿದಿವೆ

