ದೇಶದ ಸರಕು ಸಾಗಣೆ ಕ್ಷೇತ್ರದಲ್ಲಿ ಭಾರತೀಯ ರೈಲ್ವೆಯ ‘ಟ್ರಕ್ಸ್-ಆನ್-ಟ್ರೈನ್ಸ್ʼ ಭಾರೀ ಯಶಸ್ಸುಗಳಿಸಿದೆ. ದೂರದ ಪ್ರದೇಶಗಳಿಗೆ ಸರಕು ಸಾಗಣೆಯನ್ನು ಇದು ಉತ್ತಮಗೊಳಿಸಿದೆ. ಇದರಿಂದಾಗಿ ವಾಯು ಮಾಲಿನ್ಯ, ಸಂಚಾರ ದಟ್ಟಣೆ ಮತ್ತು ಲಾಜಿಸ್ಟಿಕ್ಸ್ ವೆಚ್ಚಗಳು ಕಡಿಮೆಯಾಗಿವೆ.
ಭಾರತದ ಆರ್ಥಿಕತೆ ಬೆಳೆಯುತ್ತಿದೆ ಮತ್ತು ಸರಕು ಸಾಗಣೆಯು ಹೆಚ್ಚಾಗುತ್ತಿದೆ. ಇದು ರಸ್ತೆಗಳು, ಇಂಧನ ಬಳಕೆ ಮತ್ತು ಗಾಳಿಯ ಗುಣಮಟ್ಟದ ಮೇಲೆ ಒತ್ತಡವನ್ನು ಹೇರುತ್ತಿದೆ. ಇದನ್ನು ಪರಿಹರಿಸಲು ಭಾರತೀಯ ರೈಲ್ವೆಯು ದೂರದೃಷ್ಟಿಯ ‘ಟ್ರಕ್ಸ್-ಆನ್-ಟ್ರೈನ್ಸ್’ ಸೇವೆಯನ್ನು ಪರಿಚಯಿಸಿತು.
‘ಟ್ರಕ್ಸ್-ಆನ್-ಟ್ರೈನ್ಸ್ ಸೇವೆಯನ್ನು ರೈಲ್ವೆಯ ಸರಕು ಕಾರಿಡಾರ್ ಕಾರ್ಯಕ್ರಮದ ಅಡಿಯಲ್ಲಿ ವಿದ್ಯುದೀಕೃತ ರೈಲು ಮೂಲಕ ಜಾರಿಗೊಳಿಸಿದೆ. ಈ ಸೇವೆಯಲ್ಲಿ ಲೋಡ್ ಮಾಡಲಾದ ಲಾರಿಗಳನ್ನು ವಿಶೇಷವಾಗಿ ಮಾರ್ಪಡಿಸಿದ ಫ್ಲಾಟ್ ವ್ಯಾಗನ್‌ಗಳ ಮೇಲೆ ಸರಕು ಕಾರಿಡಾರ್ ಉದ್ದಕ್ಕೂ ಸಾಗಿಸಲು ಅನುಕೂಲ ಮಾಡಿಕೊಡಲಾಗಿದೆ.
ಲಾರಿಗಳು ರೈಲುಗಳ ಮೂಲಕ ಸಾಗುವುದರಿಂದ ರಸ್ತೆಯಲ್ಲಿ ದೀರ್ಘವಾದ ಸಂಚಾರ ದಟ್ಟಣೆ. ಹೆದ್ದಾರಿಯಲ್ಲಿನ ಇತರ ವಾಹನಗಳ ಸಂಚಾರಕ್ಕೆ ಅನುಕೂಲವಾಗಿದೆ. ಪ್ರಸ್ತುತ, ಸೀಮಿತ ರೈಲು ವಿಭಾಗದಲ್ಲಿ ಮಾತ್ರ ಈ ಸೇವೆ ಲಭ್ಯವಿದೆ. ಇದನ್ನು ಹೆಚ್ಚುವರಿ ವಿಭಾಗಗಳಿಗೆ ವಿಸ್ತರಿಸಲಾಗುವುದು ಎಂದು ರೈಲ್ವೆ ಇಲಾಖೆ ಹೇಳಿದೆ.
ಯೋಜನೆ ವಿಶೇಷತೆಗಳು: ನ್ಯೂ ಪಾಲನ್‌ಪುರ್-ನ್ಯೂ ರೇವಾರಿ ಕಾರಿಡಾರ್‌ನಲ್ಲಿ ಸದ್ಯ ‘ಟ್ರಕ್ಸ್-ಆನ್-ಟ್ರೈನ್ಸ್ ಸೇವೆ ಲಭ್ಯವಿದೆ. ಈ ಸೇವೆಯು ಸುಮಾರು 636 ಕಿಲೋಮೀಟರ್ ತನಕ ವ್ಯಾಪಿಸಿದೆ. ರಸ್ತೆಯ ಮೂಲಕ ಸುಮಾರು 30 ಗಂಟೆಗಳ ಕಾಲ ತೆಗೆದುಕೊಳ್ಳುತ್ತಿದ್ದ ಒಟ್ಟಾರೆ ಸರಕು ಸಾಗಣೆ ಸಮಯವನ್ನು ಈ ಸೇವೆಯ 12 ಗಂಟೆಗಳಿಗೆ ಇಳಿಸಿದೆ.
ಈ ಸೇವೆಯ ಪ್ರಮುಖ ಶಕ್ತಿ ಸ್ಪರ್ಧಾತ್ಮಕ ಬೆಲೆ. ಸರಕು ಸಾಗಣೆಗೆ ಪಾರದರ್ಶಕ ತೂಕದ ಸ್ಲ್ಯಾಬ್‌ಗಳ ಆಧಾರದ ಮೇಲೆ ಶುಲ್ಕ ವಿಧಿಸಲಾಗುತ್ತದೆ. 25 ಟನ್ ವರೆಗಿನ ಟ್ರಕ್‌ಗಳಿಗೆ ಪ್ರತಿ ವ್ಯಾಗನ್‌ಗೆ ರೂ. 25,543, 25-45 ಟನ್ ಗಳಿಗೆ ರೂ. 29,191 ಮತ್ತು 45-58 ಟನ್ ಗಳಿಗೆ ರೂ. 32,000, ಹಾಗೆಯೇ ಖಾಲಿ ಟ್ರಕ್ ಗಳನ್ನು ಪ್ರತಿ ವ್ಯಾಗನ್ ಗೆ ಕೇವಲ ರೂ. 21,894ಕ್ಕೆ ಸಾಗಿಸಲಾಗುತ್ತದೆ.
ಡೈರಿ ವಲಯಕ್ಕೆ ಹೆಚ್ಚಿನ ಬೆಂಬಲ ನೀಡಲು, ಹಾಲಿನ ಟ್ಯಾಂಕರ್‌ಗಳ ಮೇಲೆ ಯಾವುದೇ ಜಿ ಎಸ್‌ಟಿ ವಿಧಿಸಲಾಗುವುದಿಲ್ಲ. ಇದು ಈ ಸೇವೆಯನ್ನು ಸಮಯಕ್ಕೆ ತಲುಪಿಸಬೇಕಾದ ಮತ್ತು ಬೇಗನೆ ಹಾಳಾಗುವ ಸರಕುಗಳಿಗೆ ವಿಶೇಷವಾಗಿ ಆಕರ್ಷಕವಾಗಿಸುತ್ತದೆ. ಇದು ಲಾಜಿಸ್ಟಿಕ್ಸ್ ಮೇಲಿನ ವೆಚ್ಚವನ್ನು ಗಮನಾರ್ಹ ಮಾದರಿಯಲ್ಲಿ ಕಡಿಮೆ ಮಾಡಿದೆ.
ಭಾರತೀಯ ರೈಲ್ವೆ 2025ರ ಹಣಕಾಸು ವರ್ಷದ ಅವಧಿಯಲ್ಲಿ (ಏಪ್ರಿಲ್-ಡಿಸೆಂಬರ್) ಟ್ರಕ್ಸ್-ಆನ್-ಟ್ರೈನ್ಸ್ ಸೇವೆಯ ಅಡಿಯಲ್ಲಿ ಒಟ್ಟು 545 ರೇಕ್ ಗಳನ್ನು ನಿರ್ವಹಿಸಿದೆ. 3 ಲಕ್ಷ ಟನ್ ಗಳಿಗಿಂತ ಹೆಚ್ಚು ಸರಕುಗಳನ್ನು ಸಾಗಿಸಿದೆ ಮತ್ತು ರೂ. 36.95 ಕೋಟಿ ಆದಾಯವನ್ನು ಗಳಿಸಿದೆ.
ಸದ್ಯ ‘ಟ್ರಕ್ಸ್-ಆನ್-ಟ್ರೈನ್ಸ್ ಸೇವೆಗಾಗಿಯೇ ಪ್ರತ್ಯೇಕ ಟರ್ಮಿನಲ್ ಮಾಡಲಾಗಿದೆ. ಇದು ಪ್ರಯಾಣಿಕರ ರೈಲು ಸೇವೆಗೆಳಿಗೆ ಯಾವುದೇ ರೀತಿಯ ತೊಂದರೆ ಉಂಟು ಮಾಡುವುದಿಲ್ಲ. ಈ ಟರ್ಮಿನಲ್‌ಗಳು ಲಾಜಿಸ್ಟಿಕ್ಸ್ ಸಾಗಣೆಯ ದಕ್ಷತೆಗೆ ಸಾಕ್ಷಿಯಾಗಿದೆ. ಗುಜರಾತ್ ಕೋ-ಆಪರೇಟಿವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಶನ್ (ಅಮುಲ್) ನಂತಹ ಪ್ರಮುಖ ಗ್ರಾಹಕರಿಂದ ಹಾಲು ಮತ್ತು ಡೈರಿ ಉತ್ಪನ್ನಗಳಿಗೆ, ಜೊತೆಗೆ ಇತರ ಲಾಜಿಸ್ಟಿಕ್ಸ್ ಸೇವಾ ಪೂರೈಕೆದಾರರಿಂದಲೂ ಉತ್ತಮ ಸ್ಪಂದನೆ ಈ ಸೇವೆಗೆ ದೊರೆತಿದೆ.
ಟ್ರಕ್ಸ್-ಆನ್-ಟ್ರೈನ್ಸ್ ಸೇವೆಯ ಅತ್ಯಂತ ಮಹತ್ವದ ಅಂಶ ಎಂದರೆ ದೀರ್ಘಾವಧಿಯ ಸರಕು ಸಾಗಣೆಯು ರಸ್ತೆಯಿಂದ ರೈಲಿಗೆ ವರ್ಗಾವಣೆಯಾಗಿರುವುದು. ಲಾರಿ ಪ್ರಯಾಣದ ಸುದೀರ್ಘ ಮತ್ತು ಅತಿ ಹೆಚ್ಚು ಇಂಧನ ಬಳಸುವ ಭಾಗವನ್ನು ವಿದ್ಯುದೀಕೃತ, ಹೆಚ್ಚಿನ ಸಾಮರ್ಥ್ಯದ ಮೀಸಲಾದ ಸರಕು ಕಾರಿಡಾರ್‌ಗಳಿಗೆ ವರ್ಗಾವಣೆಯಾಗಿದೆ. ಹೆದ್ದಾರಿಗಳ ದಟ್ಟಣೆಯನ್ನು ಕಡಿಮೆ ಮಾಡಿದೆ.

