ಮಧ್ಯಪ್ರದೇಶದ ಸಿಧಿ ಜಿಲ್ಲೆಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಬಡ ಬುಡಕಟ್ಟು ಬಾಲಕಿಯೊಬ್ಬಳು ಮುಖ್ಯಮಂತ್ರಿಯನ್ನು ಭೇಟಿಯಾಗಲು ಹರಸಾಹಸ ಪಡುತ್ತಿರುವ ಮತ್ತು ಪೊಲೀಸರ ಮುಂದೆ ಕಣ್ಣೀರು ಹಾಕುತ್ತಿರುವ ದೃಶ್ಯ ಇಡೀ ರಾಜ್ಯದ ಗಮನ ಸೆಳೆದಿತ್ತು. ಡಾಕ್ಟರ್ ಆಗುವ ಕನಸು ಹೊತ್ತಿರುವ ಈ ಬಾಲಕಿಯ ಹಠಕ್ಕೆ ಕೊನೆಗೂ ಮುಖ್ಯಮಂತ್ರಿಗಳಿಂದ ಸಿಹಿ ಸುದ್ದಿ ಸಿಕ್ಕಿದೆ.
ನಡೆದಿದ್ದೇನು? ಅನಾಮಿಕಾ ಬೈಗಾ ಎಂಬ ಬಾಲಕಿ ತನ್ನ ತಂದೆ ದಿನಗೂಲಿ ಕಾರ್ಮಿಕರಾಗಿದ್ದು, ಓದಿಗೆ ಹಣವಿಲ್ಲದ ಕಾರಣ ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಹಾಯ ಯಾಚಿಸಲು ಬಂದಿದ್ದಳು. ಆದರೆ ಭದ್ರತಾ ಸಿಬ್ಬಂದಿ ಆಕೆಯನ್ನು ತಡೆದಿದ್ದರು. “ನಾನು ಬೈಗಾ ಬುಡಕಟ್ಟು ಸಮುದಾಯದವಳು, ನನಗೆ ಡಾಕ್ಟರ್ ಆಗಬೇಕೆಂಬ ಆಸೆಯಿದೆ, ಆದರೆ ನಮ್ಮ ತಂದೆಯ ಬಳಿ ಹಣವಿಲ್ಲ” ಎಂದು ಕಣ್ಣೀರಿಡುತ್ತಾ ಬೇಡಿಕೊಳ್ಳುತ್ತಿರುವ ವಿಡಿಯೋ ವೈರಲ್ ಆಗಿತ್ತು. ಈ ಹಿಂದೆ ಆಕೆ ಜಿಲ್ಲಾಧಿಕಾರಿ ಮತ್ತು ಸ್ಥಳೀಯ ಶಾಸಕರನ್ನು ಭೇಟಿಯಾಗಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಸಿಎಂ ಮೋಹನ್ ಯಾದವ್ ಪ್ರತಿಕ್ರಿಯೆ: ಈ ವಿಷಯ ತಿಳಿಯುತ್ತಿದ್ದಂತೆಯೇ ಮುಖ್ಯಮಂತ್ರಿ ಮೋಹನ್ ಯಾದವ್ ಅವರು ಕೂಡಲೇ ಸ್ಪಂದಿಸಿದ್ದಾರೆ. ಅನಾಮಿಕಾ ಪ್ರಸ್ತುತ ‘ನೀಟ್’ (NEET) ಪರೀಕ್ಷೆಗೆ ತಯಾರಿ ನಡೆಸುತ್ತಿರುವುದನ್ನು ಅರಿತ ಸಿಎಂ, ಆಕೆಯ ಕೋಚಿಂಗ್ ಮತ್ತು ಹಾಸ್ಟೆಲ್ ವೆಚ್ಚಕ್ಕೆ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಆದೇಶಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಸಿಎಂ ಭರವಸೆ: ಟ್ವಿಟರ್ (X) ಮೂಲಕ ಮಾಹಿತಿ ಹಂಚಿಕೊಂಡ ಮುಖ್ಯಮಂತ್ರಿಗಳು, “ಅನಾಮಿಕಾ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದು, ಆಕೆಗೆ ಬೇಕಾದ ಕೋಚಿಂಗ್ ಮತ್ತು ಹಾಸ್ಟೆಲ್ ಸೌಲಭ್ಯಗಳನ್ನು ಒದಗಿಸಲು ಸೂಚಿಸಿದ್ದೇನೆ. ಆಕೆ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದ ನಂತರ ರಾಜ್ಯ ಸರ್ಕಾರವು ಸಂಪೂರ್ಣ ನೆರವು ನೀಡಲಿದೆ. ಅನಾಮಿಕಾ ವೈದ್ಯೆಯಾಗಿ ಮಧ್ಯಪ್ರದೇಶಕ್ಕೆ ಕೀರ್ತಿ ತರುತ್ತಾರೆ ಎಂಬ ವಿಶ್ವಾಸ ನನಗಿದೆ” ಎಂದು ತಿಳಿಸಿದ್ದಾರೆ.
ಒಬ್ಬ ಬಡ ವಿದ್ಯಾರ್ಥಿನಿಯ ಕನಸಿಗೆ ಮುಖ್ಯಮಂತ್ರಿಗಳೇ ಬೆನ್ನೆಲುಬಾಗಿ ನಿಂತಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

