ಭಾರತಿಯರ ಅಡುಗೆಮನೆಯಲ್ಲಿ ಉಪ್ಪಿನಕಾಯಿ ಜಾಡಿ ಇರದಿದ್ದರೆ ಆ ಊಟವೇ ಅಪೂರ್ಣ. ಮಾವು, ನಿಂಬೆ, ಮೆಣಸಿನಕಾಯಿ, ಬೆಳ್ಳುಳ್ಳಿ ಹೀಗೆ ಹಲವು ನಮೂನೆಯ ಉಪ್ಪಿನಕಾಯಿಗಳನ್ನು ಪ್ರತಿಯೊಂದು ಮನೆಯಲ್ಲೂ ಬಳಸಲಾಗುತ್ತದೆ. ಪ್ರತಿ ಪ್ರಾಂತ್ಯದಲ್ಲೂ ಉಪ್ಪಿನಕಾಯಿ ತಯಾರಿಸುವ ಶೈಲಿ ವಿಭಿನ್ನವಾಗಿದ್ದರೂ, ಹರಿಯಾಣ ರಾಜ್ಯದ ಪ್ರಸಿದ್ಧ ನಗರವೊಂದು ದೇಶದಲ್ಲೇ ಅತ್ಯಧಿಕ ಪ್ರಮಾಣದಲ್ಲಿ ಉಪ್ಪಿನಕಾಯಿ ಉತ್ಪಾದಿಸಿ ‘ಅಚಾರ್ ಕ್ಯಾಪಿಟಲ್ ಆಫ್ ಇಂಡಿಯಾ’ (ಭಾರತದ ಉಪ್ಪಿನಕಾಯಿ ರಾಜಧಾನಿ) ಎಂಬ ವಿಶೇಷ ಹೆಸರು ಪಡೆದುಕೊಂಡಿದೆ.
ಹೌದು, ಹರಿಯಾಣದ ಪಾಣಿಪತ್ ನಗರವನ್ನು ‘ಭಾರತದ ಉಪ್ಪಿನಕಾಯಿ ರಾಜಧಾನಿ’ ಎಂದು ಕರೆಯಲಾಗುತ್ತದೆ. ಜವಳಿ ಮತ್ತು ಕೈಮಗ್ಗ ಉದ್ಯಮಕ್ಕೆ ಹೆಸರುವಾಸಿಯಾಗಿರುವ ಈ ನಗರ, ಉಪ್ಪಿನಕಾಯಿ ಉತ್ಪಾದನೆಯಲ್ಲಿ ಇಡೀ ದೇಶದಲ್ಲೇ ಮುಂಚೂಣಿಯಲ್ಲಿದೆ. ಇಲ್ಲಿ ತಯಾರಾಗುವ ವೈವಿಧ್ಯಮಯ ಉಪ್ಪಿನಕಾಯಿಗಳು ಭಾರತ ಮಾತ್ರವಲ್ಲದೆ ವಿದೇಶಗಳಿಗೂ ರಫ್ತಾಗುತ್ತವೆ.
ಪಚರಂಗ ಉಪ್ಪಿನಕಾಯಿಯ ರೋಚಕ ಇತಿಹಾಸ ಪಾಣಿಪತ್ ನಗರದ ಉಪ್ಪಿನಕಾಯಿ ಉದ್ಯಮ ಎಂದ ತಕ್ಷಣ ನೆನಪಾಗುವುದು ‘ಪಚರಂಗಿ’ ಬ್ರ್ಯಾಂಡ್. 1943 ರಲ್ಲಿ ಕೇವಲ ಮೂರು ಬಗೆಯ ಉಪ್ಪಿನಕಾಯಿ ಪಾಕವಿಧಾನಗಳೊಂದಿಗೆ ಪ್ರಾರಂಭವಾದ ಈ ಸಂಸ್ಥೆ, ಇಂದು ವಿಶ್ವದ 25 ಕ್ಕೂ ಹೆಚ್ಚು ದೇಶಗಳಿಗೆ ತನ್ನ ಉತ್ಪನ್ನಗಳನ್ನು ಸರಬರಾಜು ಮಾಡುತ್ತಿದೆ. ಪಾಣಿಪತ್ ಒಂದರಲ್ಲೇ ನೂರಕ್ಕೂ ಹೆಚ್ಚು ಉಪ್ಪಿನಕಾಯಿ ಮಾರಾಟ ಮಳಿಗೆಗಳು ಹಾಗೂ ಹತ್ತಾರು ಪ್ರಸಿದ್ಧ ಕಾರ್ಖಾನೆಗಳಿವೆ.
ಸಾಂಪ್ರದಾಯಿಕ ಉಪ್ಪಿನಕಾಯಿ ತಯಾರಿಕೆ ಹೇಗೆ? ತಾಜಾ ಹಣ್ಣು ಅಥವಾ ತರಕಾರಿಗಳನ್ನು ಕತ್ತರಿಸಿ, ಉಪ್ಪು ಹಾಕಿ ಬಿಸಿಲಿನಲ್ಲಿ ಒಣಗಿಸುವುದು ಸಾಂಪ್ರದಾಯಿಕ ಶೈಲಿ. ನಂತರ ಸಾಸಿವೆ, ಸೋಂಪು, ಮೆಂತ್ಯ, ಅರಿಶಿನ ಹಾಗೂ ಕಾರದ ಪುಡಿಯನ್ನು ಎಣ್ಣೆಯೊಂದಿಗೆ ಬೆರೆಸಿ ಜಾಡಿಗಳಲ್ಲಿ ಶೇಖರಿಸಿಡಲಾಗುತ್ತದೆ. ಕನಿಷ್ಠ ಕೆಲವು ದಿನಗಳ ಕಾಲ ನೆನೆಯಲು ಬಿಡುವುದರಿಂದ ಮಸಾಲೆಗಳು ತರಕಾರಿಯೊಳಗೆ ಇಳಿದು ವಿಶಿಷ್ಟ ರುಚಿ ನೀಡುತ್ತವೆ.
ಪಾಣಿಪತ್‌ನಲ್ಲಿ ತಯಾರಾಗುವ ಉಪ್ಪಿನಕಾಯಿಗೆ ದೇಶ-ವಿದೇಶಗಳಲ್ಲಿ ಅಪಾರ ಬೇಡಿಕೆಯಿದ್ದು, ಸ್ಥಳೀಯ ಜನರಿಗೆ ದೊಡ್ಡ ಮಟ್ಟದ ಉದ್ಯೋಗಾವಕಾಶವನ್ನೂ ಕಲ್ಪಿಸಿಕೊಟ್ಟಿದೆ.

