ನವದೆಹಲಿ: ವಿಚಾರಣಾ ನ್ಯಾಯಾಲಯಗಳು(ಸೆಷನ್ಸ್ ಕೋರ್ಟ್) ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸುವಂತಿಲ್ಲ ಎಂದು ಸುಪ್ರೀಂಕೋರ್ಟ್ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಅಹಸಾನುದ್ದೀನ್ ಅಮಾನುಲ್ಲಾ ಮತ್ತು ಕೆ. ವಿನೋದ್ ಚಂದ್ರನ್ ಅವರಿದ್ದ ಸುಪ್ರೀಂಕೋರ್ಟ್ ನ್ಯಾಯಪೀಠ ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸುವ ಅಧಿಕಾರ ಸಾಂವಿಧಾನಿಕ ನ್ಯಾಯಾಲಯಗಳಿಗೆ ಮಾತ್ರ ಇರುತ್ತದೆ. ಸೆಷನ್ಸ್ ಕೋರ್ಟ್ ಗಳಿಗೆ ಅಧಿಕಾರ ಇರುವುದಿಲ್ಲ ಎಂದು ತಿಳಿಸಿದೆ.
ಅಪರಾಧಿ ಕಿರಣ್ 2014ರಲ್ಲಿ ಲೈಂಗಿಕವಾಗಿ ಸಹಕರಿಸದ ವಿಧವೆಯೊಬ್ಬರಿಗೆ ಬೆಂಕಿ ಹಚ್ಚಿದ್ದ. 10 ದಿನಗಳ ನಂತರ ಅವರು ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ ವಿಚಾರಣಾ ನ್ಯಾಯಾಲಯ ಕಿರಣ್ ಗೆ ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕಿರಣ್ ತಪ್ಪಿತಸ್ಥ ಎಂಬ ತೀರ್ಪು ಎತ್ತಿಹಿಡಿದಿದೆ. ಶಿಕ್ಷೆಯನ್ನು ಪರಿಷ್ಕರಿಸಿದ್ದು, 14 ವರ್ಷಗಳ ಜೀವಾವಧಿ ಶಿಕ್ಷೆಗೆ ಇಳಿಕೆ ಮಾಡಿದೆ. ವಿಚಾರಣಾ ನ್ಯಾಯಾಲಯವು ಒಬ್ಬ ವ್ಯಕ್ತಿಯ ಸ್ವಾಭಾವಿಕ ಜೀವಿತಾವಧಿಯವರೆಗೆ ಜೀವಾವಧಿ ಶಿಕ್ಷೆಯನ್ನು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ತಿಳಿಸಿದೆ.

