HomeIndiaVideo: ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಪ್ರಕರಣ; ನೃತ್ಯ ಮಾಡುವಾಗಲೇ ಕುಸಿದು ಬಿದ್ದ ಶಿಕ್ಷಕ....!

Video: ಇದ್ದಕ್ಕಿದ್ದಂತೆ ಸಾವನ್ನಪ್ಪಿದ ಮತ್ತೊಂದು ಪ್ರಕರಣ; ನೃತ್ಯ ಮಾಡುವಾಗಲೇ ಕುಸಿದು ಬಿದ್ದ ಶಿಕ್ಷಕ….!

ಇತ್ತೀಚಿನ ದಿನಗಳಲ್ಲಿ ಇದ್ದಕ್ಕಿದ್ದಂತೆ ಸಾವನ್ನಪ್ಪುತ್ತಿರುವ ಹಲವು ಪ್ರಕರಣಗಳು ವರದಿಯಾಗುತ್ತಿವೆ. ಕೋವಿಡ್ ಸಾಂಕ್ರಾಮಿಕದ ಬಳಿಕ ಇಂತಹ ಪ್ರಕರಣಗಳ ಸಂಖ್ಯೆಯಲ್ಲಿ ಹೆಚ್ಚಳವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿದ್ದರೂ ಇದಕ್ಕೆ ಈವರೆಗೆ ಸ್ಪಷ್ಟ ಕಾರಣ ತಿಳಿದುಬಂದಿಲ್ಲ. ಆದರೆ ಚಿಕ್ಕ ಪ್ರಾಯದವರಿಂದ ಹಿಡಿದು ವಯೋ ವೃದ್ಧರವರೆಗೆ ಹಲವರು ಇದ್ದಕ್ಕಿದ್ದಂತೆ ಕುಸಿದು ಬಿದ್ದು ಸಾವನ್ನಪ್ಪಿರುವ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಇದಕ್ಕೆ ಈಗ ಮತ್ತೊಂದು ಸೇರ್ಪಡೆಯಾಗಿದೆ.

ಈ ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಅಲ್ಲಿನ ಜೈಪುರ್ ಜಿಲ್ಲೆಯ ಗ್ರಾಮ ಒಂದರಲ್ಲಿ ಆಯೋಜಿಸಲಾಗಿದ್ದ ಭಜನೆ ಕಾರ್ಯಕ್ರಮದ ವೇಳೆ ನೃತ್ಯ ಮಾಡುತ್ತಿದ್ದ ಶಿಕ್ಷಕರೊಬ್ಬರು ಇದ್ದಕ್ಕಿದ್ದ ಹಾಗೆ ಕುಸಿದು ಬಿದ್ದು ಸಾವಿಗೀಡಾಗಿದ್ದಾರೆ. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಮನ್ನಾ ರಾಮ್ ಸಾವನ್ನಪ್ಪಿದವರಾಗಿದ್ದು, ಇವರು ಇತ್ತೀಚಿಗೆ ನಿವೃತ್ತರಾದ ತಮ್ಮ ಹಿರಿಯ ಸಹೋದರನ ಗೌರವಾರ್ಥ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮಂಗಳಮುಖಿ ಜೊತೆ ಡಾನ್ಸ್ ಮಾಡುತ್ತಿದ್ದರು.

ಆರಂಭದಲ್ಲಿ ದೊಡ್ಡ ಜೋಶ್ ನಲ್ಲಿ ನೃತ್ಯ ಮಾಡಿದ ಮನ್ನಾ ರಾಮ್, ಬಳಿಕ ಒಂದಷ್ಟು ಕಾಲ ವಿಶ್ರಾಂತಿ ಪಡೆದಿದ್ದಾರೆ. ನಂತರ ಅವರು ಮತ್ತೆ ನೃತ್ಯ ಮಾಡಲು ಮುಂದಾಗಿದ್ದು, ಈ ವೇಳೆ ಅಸ್ವಸ್ಥಗೊಂಡು ಏಕಾಏಕಿ ಕುಸಿದು ಬಿದ್ದಿದ್ದಾರೆ. ಕೂಡಲೇ ಸ್ಥಳದಲ್ಲಿದ್ದವರು ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಬಳಿಕ ಸಮೀಪದ ಆಸ್ಪತ್ರೆಗೆ ಕರೆದೊಯ್ದರಾದರು ಅಷ್ಟರಲ್ಲಾಗಲೇ ಅವರು ಮೃತಪಟ್ಟಿದ್ದರು ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಸಂಭ್ರಮದಿಂದ ಪಾಲ್ಗೊಂಡಿದ್ದ ಮನ್ನಾರಾಮ್ ಬಂಧು – ಮಿತ್ರರು ಹಠಾತ್ ಸಂಭವಿಸಿದ ಈ ಆಘಾತದಿಂದ ದಿಗ್ಭ್ರಾಂತರಾಗಿ ಶೋಕ ತಪ್ತರಾಗಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular