ತುಮಕೂರು: ಕೆರೆಯಲ್ಲಿ ನೀರು ಕುಡಿಯಲು ಹೋಗಿದ್ದ ಇಬ್ಬರು ಮಕ್ಕಳು ಸಾವನ್ನಪ್ಪಿದ್ದಾರೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಮಿಡಿಗೇಶಿ ಕೆರೆಯಲ್ಲಿ ಘಟನೆ ನಡೆದಿದೆ.
ರವೀಂದ್ರ(9), ಸುಚಿತ್ರಾ(11) ಕೆರೆಯಲ್ಲಿ ಮುಳುಗಿ ಮೃತಪಟ್ಟ ಮಕ್ಕಳು. ಕೆರೆಗೆ ಬಿದ್ದಿದ್ದ ತಮ್ಮನನ್ನು ರಕ್ಷಿಸಲು ಹೋಗಿದ್ದ ಅಕ್ಕ ಸುಚಿತ್ರಾ ಕೂಡ ಮೃತಪಟ್ಟಿದ್ದಾಳೆ. ಕಸಾಪುರ ಗ್ರಾಮದ ಮಂಜುನಾಥ್ ಎಂಬುವರ ಇಬ್ಬರು ಮಕ್ಕಳು ರಜೆ ಹಿನ್ನೆಲೆ ಮೇಕೆ ಮೇಯಿಸಲು ಕೆರೆಯ ಅಂಗಳಕ್ಕೆ ಹೋಗಿದ್ದರು.
ಮತ್ತೊಬ್ಬ ಸಹೋದರಿ ರೇಖಾ ಜೊತೆಗೆ ಸುಚಿತ್ರಾ ಮತ್ತು ರವೀಂದ್ರ ತೆರಳಿದ್ದರು. ಕೆರೆಯ ಅಂಗಳದ ಕಲ್ಯಾಣಿಯಲ್ಲಿ ನೀರು ಕುಡಿಯುವ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ರವೀಂದ್ರ ನೀರಿಗೆ ಬಿದ್ದಿದ್ದ. ತಮ್ಮ ರವೀಂದ್ರರನ್ನು ರಕ್ಷಿಸಲು ಸುಚಿತ್ರಾ ಕೂಡ ಕೆರೆಗೆ ಹಾರಿದ್ದು, ಇಬ್ಬರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಮಿಡಿಗೇಶಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

