ಮಂಗಳೂರು ನಗರದಲ್ಲಿ ದಿನದಿಂದ ದಿನಕ್ಕ ಸಂಚಾರ ಸಮಸ್ಯೆ ಹೆಚ್ಚಾಗುತ್ತಿದೆ. ಆದರೆ ಖಾಲಿ ಗೂಡ್ಸ್ ರೈಲುಗಳಿಂದ ದಿನನಿತ್ಯ ಸಂಚಾರ ನಡೆಸುವ ಜನರಿಗೆ ಕಿರಿಕಿರಿಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಶಾಸಕರು, ಸಂಸದರು, ಜಿಲ್ಲಾಧಿಕಾರಿಗಳ ಜೊತೆ ಸಭೆ ನಡೆಸಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜನಪ್ರತಿನಿಧಿಗಳು, ಅಧಿಕಾರಿಗಳು, ಸಾರ್ವಜನಿಕರ ಸಭೆ ನಡೆಯಿತು. ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕ ವೇದವ್ಯಾಸ ಕಾಮತ್, ಪಾಲಿಕೆ ಆಯುಕ್ತ ರವಿಚಂದ್ರ ನಾಯಕ್, ಮಾಜಿ ಮೇಯರ್ ದಿವಾಕರ್ ಪಾಂಡೇಶ್ವರ, ಪ್ರೇಮಾನಂದ ಶೆಟ್ಟಿ, ಪಾಲಿಕೆ ಹಿರಿಯ ಅಭಿಯಂತರರು ಸಭೆಯಲ್ಲಿ ಉಪಸ್ಥಿತರಿದ್ದರು.
ಮಂಗಳೂರು ಸೆಂಟ್ರಲ್‌ನಿಂದ ಬಂದರು ಗೂಡ್ಸ್ ಶೆಡ್‌ಗೆ ಹೋಗುವ ಖಾಲಿ ರೈಲುಗಳ ಓಡಾಟದಿಂದಾಗಿ ದಿನನಿತ್ಯ ಟ್ರಾಫಿಕ್ ಜಾಮ್ ಉಂಟಾಗುವುದು ಸೇರಿದಂತೆ ನಗರದ ವಿವಿಧ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ಗೇಟ್ ಮೂಲಕ ದಿನಕ್ಕೆ ಕನಿಷ್ಠ 16 ಸಲವಾದರೂ ಖಾಲಿ ಪ್ಯಾಸೆಂಜರ್ ಮತ್ತು ಗೂಡ್ಸ್ ರೈಲುಗಳು ಬಂದರ್ ಯಾರ್ಡ್‌ಗೆ ಹೋಗುವುದರಿಂದ ಪ್ರತಿ ಬಾರಿ ಕನಿಷ್ಠ 15 ರಿಂದ 20 ನಿಮಿಷ ಟ್ರಾಫಿಕ್ ಜಾಮ್ ಉಂಟಾಗುತ್ತದೆ ಎಂದು ಸಭೆಯಲ್ಲಿ ಚರ್ಚೆ ನಡೆಯಿತು.
ಶಾಲಾ-ಕಾಲೇಜು ವಿದ್ಯಾರ್ಥಿಗಳು, ಕೆಲಸಕ್ಕೆ ತೆರಳುವ ಉದ್ಯೋಗಿಗಳು, ಆಂಬುಲೆನ್ಸ್, ಅಗ್ನಿಶಾಮಕ ವಾಹನಗಳಿಗೆ ಇದರಿಂದ ತೊಂದರೆ ಆಗುತ್ತಿದೆ. ಈ ಬಗ್ಗೆ ಸ್ಥಳೀಯರು ಹಲವು ಬಾರಿ ನನಗೆ ದೂರು ನೀಡಿದ್ದು, ಅದನ್ನು ಖುದ್ದು ಪರಿಶೀಲಿಸಿ ಸಂಸದರ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವ ಪ್ರಯತ್ನ ನಡೆಸಲಾಗಿದೆ ಎಂದು ವೇದವ್ಯಾಸ ಕಾಮತ್ ಹೇಳಿದ್ದಾರೆ.
ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಮಾತನಾಡಿ, “ರೈಲು ಬರುವ ಸಮಯವನ್ನು ಆಯಾ ಪ್ರದೇಶಗಳಲ್ಲಿ ದೊಡ್ಡ ಪರದೆಯಲ್ಲಿ ಪ್ರದರ್ಶಿಸಿದರೆ ಸಾರ್ವಜನಿಕರಿಗೆ ಪರ್ಯಾಯ ಮಾರ್ಗ ಬಳಸಿಕೊಳ್ಳಲು ಅನುಕೂಲವಾಗುತ್ತದೆ. ಆ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ” ಎಂದು ರೈಲ್ವೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಸದ ಕ್ಯಾ. ಬ್ರಿಜೇಶ್ ಚೌಟ ಮಾತನಾಡಿ, “ಸದ್ಯಕ್ಕೆ ತಾತ್ಕಾಲಿಕವಾಗಿ ಬೆಳಗ್ಗೆ ಮತ್ತು ಸಂಜೆಯ ಪೀಕ್ ಸಮಯದಲ್ಲಿ ರೈಲು ಸಂಚಾರ ತಪ್ಪಿಸಬೇಕು. ಮುಂದಿನ ದಿನಗಳಲ್ಲಿ ಈ ಎಲ್ಲಾ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪಾಲಿಕೆ ಹಾಗೂ ರೈಲ್ವೆ ಅಧಿಕಾರಿಗಳು ಸಮನ್ವಯತೆಯಿಂದ ಸಮಗ್ರ ವರದಿ ತಯಾರಿಸಬೇಕು ಹಾಗೂ ಅದನ್ನು ಪರಿಶೀಲನೆ ನಡೆಸುತ್ತೇನೆ” ಎಂದರು.
ಹೊಯಿಗೆ ಬಜಾರ್ ಲೆವೆಲ್ ಕ್ರಾಸಿಂಗ್ ಬಳಿಯೂ ಇದೇ ಪರಿಸ್ಥಿತಿಯಿದ್ದು ಇಲ್ಲಿರುವ ಯಾರ್ಡ್ ಅನ್ನು ಸ್ಥಳಾಂತರಿಸುವ ಬಗ್ಗೆ, ಬೇರೆಡೆ ಸೂಕ್ತ ಪ್ರದೇಶ ನಿಗದಿಗೊಳಿಸುವ ಬಗ್ಗೆ, ಡಿಆರ್‌ಎಂ ಜೊತೆ ಮಾತುಕತೆ ನಡೆಸಿ ರಸ್ತೆ ಅಗಲ ಮಾಡಿ ಡಬಲ್ ಗೇಟ್ ನಿರ್ಮಿಸುವ ಬಗ್ಗೆಯೂ ಚರ್ಚೆ ನಡೆಯಿತು.
ಇದೇ ವೇಳೆ ನೂಜಿ ಅಂಡರ್ ಪಾಸ್, ಕಂಡೇವು ಹಾಗೂ ಅಳಪೆ ಮಠದ ಬಳಿ ಓವರ್ ಪಾಸ್, ಎಕ್ಕೂರು ಡ್ರೈನೇಜ್ ಸಮಸ್ಯೆ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಸಭೆಯಲ್ಲಿ ವಿಷಯ ಪ್ರಸ್ತಾಪವಾಯಿತು, ಅಧಿಕಾರಿಗಳ ಜೊತೆ ಚರ್ಚೆ ನಡೆಯಿತು.

