ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಬಿಡುಗಡೆಗೂ ಮುನ್ನವೇ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ.
ಚಿತ್ರ ನಾಳೆ ( ಆಗಸ್ಟ್ 26 ) ವಿಶ್ವದಾದ್ಯಂತ ಬಿಡುಗಡೆಯಾಗಲಿದ್ದು, ಚಿತ್ರದ ಪ್ರೀ-ಬುಕಿಂಗ್ ಭರ್ಜರಿ ಪ್ರತಿಕ್ರಿಯೆ ಪಡೆದುಕೊಂಡಿದ್ದು, 50 ಕೋಟಿ ರೂ ಗಡಿ ದಾಟಿದೆ ಎಂಬ ವರದಿಗಳು ಅಭಿಮಾನಿಗಳಲ್ಲಿ ಮತ್ತಷ್ಟು ಉತ್ಸಾಹ ಮೂಡಿಸಿವೆ. ಸದ್ಯ 50 ಕೋಟಿ ಗಳಿಕೆ ಮಾಡಿರುವ ಟಾಕ್ಸಿಕ್ ಅಬ್ಬರಿಸುತ್ತಿದ್ದು, ಇನ್ನೂ ತೆಲುಗು ರಾಜ್ಯಗಳಲ್ಲಿ ಬುಕಿಂಗ್ ಆರಂಭವಾಗುವುದು ಬಾಕಿ ಇದೆ. ಅಲ್ಲಿಗೆ ತೆಲುಗು ರಾಜ್ಯಗಳ ಬುಕಿಂಗ್ ತೆರೆದರೆ ಚಿತ್ರದ ಗಳಿಕೆ ಇನ್ನಷ್ಟು ಏರಿಕೆಯಾಗಲಿದೆ. ಈ ಮೂಲಕ ಮೊದಲ ದಿನ ನೂರು ಕೋಟಿ ಗಳಿಕೆಯಾಗುವುದು ಖಚಿತ ಎನ್ನಬಹುದು.
‘ಕೆಜಿಎಫ್’ ಸರಣಿಯ ಬಳಿಕ ಯಶ್ ಅವರ ಮುಂದಿನ ಚಿತ್ರವಾಗಿರುವುದರಿಂದ ‘ಟಾಕ್ಸಿಕ್’ ಬಗ್ಗೆ ದೇಶಾದ್ಯಂತ ಮಾತ್ರವಲ್ಲದೆ ವಿದೇಶಗಳಲ್ಲಿಯೂ ಭಾರೀ ಕುತೂಹಲವಿದೆ. ಬೆಂಗಳೂರಿನಿಂದ ಮುಂಬೈವರೆಗೆ ಹಲವು ನಗರಗಳಲ್ಲಿ ಹೆಚ್ಚುವರಿ ಶೋಗಳನ್ನು ಸೇರಿಸಲಾಗುತ್ತಿದ್ದು, ಬೆಳಗಿನ ಜಾವದ ಶೋಗಳಿಗೂ ಬೇಡಿಕೆ ಹೆಚ್ಚಿದೆ. ಚಿತ್ರವನ್ನು ವಿಶ್ವದಾದ್ಯಂತ 12,000ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಿಡುಗಡೆ ಮಾಡುವ ಗುರಿಯಿದೆ.
ಗೀತು ಮೋಹನ್‌ದಾಸ್ ನಿರ್ದೇಶನದ ಈ ಚಿತ್ರದಲ್ಲಿ ಯಶ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಕಿಯಾರಾ ಅಡ್ವಾಣಿ, ನಯನತಾರಾ, ಹ್ಯೂಮಾ ಖುರೇಷಿ, ತಾರಾ ಸುತಾರಿಯಾ ಮತ್ತು ರುಕ್ಮಿಣಿ ವಸಂತ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಯಶ್ ಅವರ ಪ್ಯಾನ್-ಇಂಡಿಯಾ ಸ್ಟಾರ್‌ಡಮ್, ವಿಭಿನ್ನ ಕಥಾಹಂದರ, ಅದ್ದೂರಿ ಮೇಕಿಂಗ್ ಹಾಗೂ ಸ್ಟಾರ್ ಕಾಸ್ಟ್‌ನಿಂದ ‘ಟಾಕ್ಸಿಕ್’ ಈಗಾಗಲೇ ಸಿನಿಪ್ರೇಮಿಗಳಲ್ಲಿ ದೊಡ್ಡ ನಿರೀಕ್ಷೆ ಹುಟ್ಟುಹಾಕಿದೆ. ಬಿಡುಗಡೆಯ ಮುನ್ನವೇ ಕಂಡುಬರುತ್ತಿರುವ ಈ ಕ್ರೇಜ್, ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಆರಂಭ ಪಡೆಯುವ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ.

