ನಾಳೆ ( ಆಗಸ್ಟ್ 26 ) ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರ ಬಿಡುಗಡೆಯಾಗಲಿದೆ. ಕಳೆದ ಐದಾರು ದಿನಗಳ ಹಿಂದೆಯೇ ಟಿಕೆಟ್ ಬುಕ್ ಮಾಡಿಕೊಂಡಿರುವ ಅಭಿಮಾನಿಗಳು ಚಿತ್ರವನ್ನು ಫಸ್ಟ್ ಡೇ ವೀಕ್ಷಿಸಲು ಕಾತರರಾಗಿದ್ದು, ಬಿಡುಗಡೆಗೂ ಮುನ್ನ ಸಿನಿ ರಸಿಕರಿಗೆ ಯಶ್ ತಮ್ಮ ಅಧಿಕೃತ ಖಾತೆಯಲ್ಲಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.
ಚಿತ್ರವನ್ನು ಚಿತ್ರಮಂದಿರದಲ್ಲಿ ವೀಕ್ಷಿಸುವ ಅನುಭವವನ್ನು ಕಾಪಾಡುವಂತೆ ಹಾಗೂ ಸಿನಿಮಾದ ದೃಶ್ಯಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳದಂತೆ ಮನವಿ ಮಾಡಿದ್ದಾರೆ.
‘ಟಾಕ್ಸಿಕ್’ ಕೇವಲ ಒಂದು ಸಿನಿಮಾ ಅಲ್ಲ. ಹಲವು ವರ್ಷಗಳ ಪರಿಶ್ರಮ, ಕಲಾವಿದರು, ತಂತ್ರಜ್ಞರು ಹಾಗೂ ಇಡೀ ಚಿತ್ರತಂಡದ ಶ್ರಮದಿಂದ ರೂಪುಗೊಂಡ ಜಗತ್ತು ಎಂದು ತಂಡ ತನ್ನ ಸಂದೇಶದಲ್ಲಿ ತಿಳಿಸಿದ್ದಾರೆ. ಚಿತ್ರವನ್ನು ದೊಡ್ಡ ಪರದೆಯಲ್ಲಿ ಸಮೂಹವಾಗಿ ಅನುಭವಿಸುವ ಉದ್ದೇಶದಿಂದ ನಿರ್ಮಿಸಲಾಗಿದ್ದು, ಪ್ರೇಕ್ಷಕರು ನೀಡುತ್ತಿರುವ ಪ್ರೀತಿ, ಉತ್ಸಾಹ ಮತ್ತು ಭರ್ಜರಿ ಅಡ್ವಾನ್ಸ್ ಬುಕ್ಕಿಂಗ್‌ಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ಅದೇ ವೇಳೆ ಚಿತ್ರಮಂದಿರಗಳಲ್ಲಿ ಸಿನಿಮಾದ ದೃಶ್ಯಗಳನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡದಂತೆ ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ. ಕಥೆಯ ಪ್ರಮುಖ ತಿರುವುಗಳು ಹಾಗೂ ಸ್ಪಾಯ್ಲರ್‌ಗಳನ್ನು ಬಹಿರಂಗಪಡಿಸುವುದರಿಂದ ಚಿತ್ರವನ್ನು ನಂತರ ವೀಕ್ಷಿಸುವವರಿಗೆ ಅನುಭವ ಹಾಳಾಗಬಹುದು ಎಂದು ಎಚ್ಚರಿಸಿದ್ದಾರೆ.
“ಮುಂದಿನ ಪ್ರೇಕ್ಷಕರೂ ನೀವು ಅನುಭವಿಸಿದ ರೀತಿಯಲ್ಲೇ ‘ಟಾಕ್ಸಿಕ್’ ಜಗತ್ತಿಗೆ ಕಾಲಿಡಲಿ” ಎಂದು ಸಹ ಬರೆದುಕೊಂಡಿದ್ದಾರೆ. ಟಾಕ್ಸಿಕ್ ಜಗತ್ತು ನಾಳೆಯಿಂದ ನಿಮ್ಮದು ಎಂದು ಯಶ್ ತಮ್ಮ ಮತ್ತೊಂದು ದೊಡ್ಡ ಯೋಜನೆಯನ್ನು ಪ್ರೇಕ್ಷಕರ ಮಡಿಲಿಗೆ ಹಾಕಿದ್ದಾರೆ.

