ರಾಕಿಂಗ್ ಸ್ಟಾರ್ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್: ಎ ಫೇರಿ ಟೇಲ್ ಫಾರ್ ಗ್ರೋನ್-ಅಪ್ಸ್’ ಚಿತ್ರದ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಿದ್ದು, ಅಭಿಮಾನಿಗಳಲ್ಲಿ ಸಿನಿಮಾ ಕ್ರೇಜ್ ಮತ್ತಷ್ಟು ಹೆಚ್ಚಿದೆ. ಬಹುಕಾಲದಿಂದ ಭಾರೀ ನಿರೀಕ್ಷೆ ಮೂಡಿಸಿರುವ ಈ ಚಿತ್ರವನ್ನು ಥಿಯೇಟರ್‌ನಲ್ಲಿ ಕಣ್ತುಂಬಿಕೊಳ್ಳಲು ಯಶ್ ಅಭಿಮಾನಿಗಳು ಕಾತರರಾಗಿದ್ದಾರೆ.
‘KGF’ ಸರಣಿಯ ಬಳಿಕ ಯಶ್ ನಟಿಸುತ್ತಿರುವ ಹೊಸ ಸಿನಿಮಾ ಎಂಬ ಕಾರಣಕ್ಕೆ ‘ಟಾಕ್ಸಿಕ್’ ಈಗಾಗಲೇ ದೇಶಾದ್ಯಂತ ಭಾರೀ ಹೈಪ್ ಸೃಷ್ಟಿಸಿದೆ. ಚಿತ್ರದ ಟೈಟಲ್, ವಿಭಿನ್ನ ಲುಕ್, ಸ್ಟೈಲಿಶ್ ಪ್ರಚಾರ ಹಾಗೂ ಭರ್ಜರಿ ಮೇಕಿಂಗ್ ಕುತೂಹಲವನ್ನು ಹೆಚ್ಚಿಸಿವೆ. ವಿಶೇಷವಾಗಿ ಯಶ್ ಅವರ ಮಾಸ್ ಸ್ಕ್ರೀನ್ ಪ್ರೆಸೆನ್ಸ್ ಮತ್ತೊಮ್ಮೆ ಪ್ರೇಕ್ಷಕರಿಗೆ ದೊಡ್ಡ ಥಿಯೇಟ್ರಿಕಲ್ ಅನುಭವ ನೀಡಲಿದೆ ಎಂಬ ನಿರೀಕ್ಷೆ ಮೂಡಿಸಿದೆ.
ಚಿತ್ರದ ಟ್ರೈಲರ್ ಅಭಿಮಾನಿಗಳು ಹಾಗೂ ಸಿನಿ ರಸಿಕರಲ್ಲಿ ಭಾರೀ ನಿರೀಕ್ಷೆಯನ್ನು ಹುಟ್ಟುಹಾಕಿದ್ದು, ಅಡ್ವಾನ್ಸ್ ಬುಕಿಂಗ್ ಇಂದು ( ಆಗಸ್ಟ್ 21 ) ಆರಂಭವಾಗಲಿದೆ ಎಂಬ ಸುದ್ದಿ ಹೊರಬೀಳುತ್ತಿದ್ದಂತೆ ಈ ದಿನಕ್ಕಾಗಿ ಕಾಯುತ್ತಿದ್ದ ಅವರು ಬುಕಿಂಗ್ ಆರಂಭವಾಗುತ್ತಿದ್ದಂತೆ ಖರೀದಿಗಾಗಿ ಮುಗಿಬಿದ್ದಿದ್ದಾರೆ.
ಇನ್ನು ವರಮಹಾಲಕ್ಷ್ಮಿ ಹಬ್ಬದ ದಿನವಾದ ಇಂದು ಬೆಳ್ಳೆಂಬೆಳಗ್ಗೆಯೇ ಟಾಕ್ಸಿಕ್ ಬುಕಿಂಗ್ ಬೆಂಗಳೂರಿನ ಕೆಲ ಆಯ್ದ ಸಿಂಗಲ್ ಸ್ಕ್ರೀನ್ ಹಾಗೂ ಮಲ್ಟಿಪ್ಲೆಕ್ಸ್‌ಗಳಲ್ಲಿ ತೆರೆಯಲಾಗಿದೆ. ಮಾಗಡಿ ರಸ್ತೆಯ ಜಿಟಿ ಮಾಲ್, ಕೋರಮಂಗಲದ ನೆಕ್ಸಸ್, ರಾಜ್‌ಕುಮಾರ್ ರಸ್ತೆಯ ಒರಾಯನ್, ಮಾಲ್ ಆಫ್ ಏಷ್ಯಾ, ಕನಕಪುರ ರಸ್ತೆಯ ಫೋರಂ, ಬನ್ನೇರಘಟ್ಟದ ವೆಗಾ ಸಿಟಿ, ವೈಟ್‌ಫೀಲ್ಡ್‌ನ್ ಫೀನಿಕ್ಸ್, ಸೇರಿದಂತೆ ಇನ್ನೂ ಹತ್ತಾರು ಮಲ್ಟಿಪ್ಲೆಕ್ಸ್ ಸೇರಿದಂತೆ ಸಿಂಗಲ್ ಸ್ಕ್ರೀನ್‌ಗಳಾದ ವೀರೇಶ್ ಹಾಗೂ ಗೋವರ್ಧನ್ ಚಿತ್ರಮಂದಿರಗಳಲ್ಲಿ ಬುಕಿಂಗ್ ಆರಂಭಗೊಂಡಿದೆ.
ಬಹುತೇಕ ಎಲ್ಲ ಮಲ್ಟಿಪ್ಲೆಕ್ಸ್‌ಗಳಲ್ಲಿ ಬೆಳಗಿನ ಪ್ರದರ್ಶನಗಳ ಟಿಕೆಟ್ ದರ ರಿಕ್ಲೈನರ್‌ಗಳಿಗೆ 1000ದಿಂದ 1400ರವರೆಗೆ, ಪ್ರೈಮ್ ಪ್ಲಸ್ ರೋಗಳ ದರ 650ರಿಂದ 800, ಪ್ರೈಮ್ ರೋಗಳ ದರ 450ರಿಂದ 600, ಕ್ಲಾಸಿಕ್ ರೋಗಳ ದರ 400ರಿಂದ 600ರಷ್ಟಿದ್ದು ದುಬಾರಿಯಾಗಿದೆ. ಮಧ್ಯಾಹ್ನದ ನಂತರದ ಪ್ರದರ್ಶನಗಳ ದರ ಇಷ್ಟಿಲ್ಲದಿದ್ದರೂ ಸಾಮಾನ್ಯ ಚಿತ್ರಗಳ ಟಿಕೆಟ್ ದರಕ್ಕಿಂತ ಹೆಚ್ಚಂತೂ ಇದೆ. ಇನ್ನು ವೀರೇಶ್ ಚಿತ್ರಮಂದಿರದ 6 ಗಂಟೆ ದರ 400 ರೂ ಇದ್ದು, ಉಳಿದ ಪ್ರದರ್ಶನಗಳ ಟಿಕೆಟ್ ದರ ಬಾಲ್ಕನಿ 250 ಹಾಗೂ ಸೆಕೆಂಡ್ ಕ್ಲಾಸ್ ದರ 200 ಇದೆ.
ಹೀಗೆ ಟಿಕೆಟ್ ದರ 1400, 700 ರೂಗಳಷ್ಟಿದ್ದರೂ ಈಗಾಗಲೇ ಒರಾಯನ್ ಮಾಲ್, ಕೋರಮಂಗಲದ ನೆಕ್ಸಸ್ ಮಾಲ್, ಜಿಟಿ ಮಾಲ್, ವೈಷ್ಣವಿ ಸಫೈರ್ ಮಾಲ್ ಸೇರಿದಂತೆ ಹಲವು ಮಾಲ್‌ಗಳಲ್ಲಿನ ಮಲ್ಟಿಪ್ಲೆಕ್ಸ್‌ಗಳಲ್ಲಿನ ಟಿಕೆಟ್‌ಗಳು ಸೋಲ್ಡ್‌ಔಟ್ ಆಗಿವೆ.

