ಬೆಂಗಳೂರು: ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ 15,000 ಶಿಕ್ಷಕರ ನೇಮಕಾತಿಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳಿಗೆ ನೇಮಕಾತಿ ಪ್ರಕ್ರಿಯೆ ಬಗ್ಗೆ ಉಂಟಾದ ಗೊಂದಲ ನಿವಾರಣೆಗೆ ಪದೇಪದೇ ಕೇಳಲಾಗುವ ಪ್ರಶ್ನೆಗಳಿಗೆ ಉತ್ತರಗಳ ಪಟ್ಟಿ(ಎಫ್ಎಕ್ಯೂ) ಪ್ರಕಟಿಸಲಾಗಿದೆ ಎಂದು ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
ಜಿಲ್ಲಾವಾರು ಪ್ರತ್ಯೇಕ ಅಧಿಸೂಚನೆ ಪ್ರಕಟಿಸಲಾಗಿದೆ. ನೇಮಕಾತಿಗೆ ಸಂಬಂಧಿಸಿದ ಸಂಪೂರ್ಣ ಮಾಹಿತಿ ನೀಡಲಾಗಿದೆ. ಮೀಸಲಾತಿ, ವಿದ್ಯಾರ್ಹತೆ ವಯೋಮಿತಿ ಸೇರಿ ವಿವಿಧ ವಿಷಯಗಳ ಬಗ್ಗೆ ಅನೇಕ ಅಭ್ಯರ್ಥಿಗಳಿಗೆ ಗೊಂದಲ ಇರುವುದನ್ನು ಗಮನಿಸಿ ಅವರ ಅನುಕೂಲಕ್ಕಾಗಿ ಪ್ರಶ್ನೋತ್ತರ ಪ್ರಕಟಿಸಲಾಗಿದೆ. ಇದರಿಂದ ಬಹುತೇಕ ಅಭ್ಯರ್ಥಿಗಳ ಗೊಂದಲ ನಿವಾರಣೆಯಾಗುವ ವಿಶ್ವಾಸವಿದೆ ಎಂದು ಹೇಳಿದ್ದಾರೆ.
ಅಭ್ಯರ್ಥಿಗಳು ಅರ್ಜಿ ಸಲ್ಲಿಸುವ ಮುನ್ನ ಸಂಬಂಧಿಸಿದ ಅಧಿಸೂಚನೆ ಸಂಪೂರ್ಣ ಓದಿಕೊಂಡು ಅರ್ಹತೆ ಖಚಿತಪಡಿಸಿಕೊಂಡು ಅರ್ಜಿ ಸಲ್ಲಿಸಬೇಕು. ಅರ್ಜಿಯೊಂದಿಗೆ ಅಗತ್ಯವಿರುವ ಸರಿಯಾದ ದಾಖಲೆಗಳನ್ನು ಮಾತ್ರ ಒದಗಿಸಬೇಕು ಎಂದು ಹೇಳಿದ್ದಾರೆ.
ಅಧಿಸೂಚನೆ ಮತ್ತು ಪ್ರಶ್ನೋತ್ತರ ಓದಿದ ನಂತರವೂ ಯಾವುದೇ ಗೊಂದಲ ಅಥವಾ ಅನುಮಾನ ಬಗೆಹರಿಯದಿದ್ದಲ್ಲಿ ಅಭ್ಯರ್ಥಿಗಳು ಸಹಾಯವಾಣಿ ಸಂಖ್ಯೆ 080 22483145. 22483140, ಮೊ. 94495 88020 ಸಂಪರ್ಕಿಸಬಹುದಾಗಿದೆ.

