ಪ್ರತಿಯೊಬ್ಬರ ಮನೆಯಲ್ಲೂ ಹಾಲಿಗೆ ಹೆಪ್ಪುಹಾಕಿ ಮೊಸರು ಮಾಡುವುದು ತೀರಾ ಸಾಮಾನ್ಯ ಸಂಗತಿ. ಹಾಲು ಕಾಯಿಸಿ, ಉಗುರುಬೆಚ್ಚಗಾದ ಮೇಲೆ ಸ್ವಲ್ಪ ಮೊಸರು ಸೇರಿಸಿ ಮುಚ್ಚಿಟ್ಟರೆ ಬೆಳಿಗ್ಗೆಗೆ ಗಟ್ಟಿ ಮೊಸರು ಸಿದ್ಧವಾಗಿರುತ್ತದೆ ಎಂಬುದು ಎಲ್ಲರ ನಂಬಿಕೆ. ಆದರೆ ಹಲವು ಬಾರಿಗೆ ಬೆಳಿಗ್ಗೆ ಎದ್ದು ನೋಡಿದಾಗ ಮೊಸರು ಅತಿಯಾಗಿ ಹುಳಿಯಾಗಿರುತ್ತದೆ, ಇಲ್ಲವೇ ಸರಿಯಾಗಿ ಹೆಪ್ಪುಗಟ್ಟದೆ ತೆಳ್ಳಗಿರುತ್ತದೆ. ವಾತಾವರಣದ ತಾಪಮಾನ ಮತ್ತು ಹೆಪ್ಪುಹಾಕುವ ವಿಧಾನವೇ ಇದಕ್ಕೆ ಮುಖ್ಯ ಕಾರಣ. ಮನೆಯಲ್ಲೇ ರುಚಿಯಾದ ಮತ್ತು ಹದವಾದ ಮೊಸರು ತಯಾರಿಸಲು ಕೆಲವು ಪ್ರಮುಖ ಪ್ರಯೋಗಗಳು ಹಾಗೂ ಸೂಕ್ತ ಪರಿಹಾರಗಳು ಇಲ್ಲಿವೆ.
ಸಾಮಾನ್ಯವಾಗಿ ಹಾಲಿನಲ್ಲಿರುವ ಬ್ಯಾಕ್ಟೀರಿಯಾಗಳು ಲ್ಯಾಕ್ಟೋಸ್ ಅನ್ನು ಲ್ಯಾಕ್ಟಿಕ್ ಆಮ್ಲವಾಗಿ ಪರಿವರ್ತಿಸಿದಾಗ ಹಾಲು ಮೊಸರಾಗುತ್ತದೆ. ಹಾಲು ಹೆಚ್ಚು ಹೊತ್ತು ಬೆಚ್ಚಗಿನ ವಾತಾವರಣದಲ್ಲಿದ್ದರೆ ಕಿಣ್ವಗಳ ಪ್ರಕ್ರಿಯೆ ಹೆಚ್ಚಾಗಿ ಹುಳಿ ಪ್ರಮಾಣ ಜಾಸ್ತಿಯಾಗುತ್ತದೆ. ರಾತ್ರಿಯಿಡೀ ಹೊರಗಡೆ ಇಡುವುದರಿಂದ ತಾಪಮಾನಕ್ಕೆ ತಕ್ಕಂತೆ ಮೊಸರು ಬೇಗ ಹುಳಿಯಾಗುತ್ತದೆ.
ಮೊಸರು ಬೇಗ ಹೆಪ್ಪುಗಟ್ಟಲಿ ಎಂದು ಕೆಲವರು ಹೆಚ್ಚಿನ ಪ್ರಮಾಣದ ಹೆಪ್ಪು ಅಂದರೆ ಹಳೆಯ ಮೊಸರನ್ನು ಸೇರಿಸುತ್ತಾರೆ. ಆದರೆ ಹೀಗೆ ಮಾಡುವುದರಿಂದ ಹುಳಿ ಬೇಗ ಹೆಚ್ಚಾಗುತ್ತದೆಯೇ ಹೊರತು ಮೊಸರು ಗಟ್ಟಿಯಾಗುವುದಿಲ್ಲ. ಇನ್ನು ತೀರಾ ತಣ್ಣಗಿರುವ ವಾತಾವರಣದಲ್ಲಿ ಓವನ್ ಅಥವಾ ಕ್ಯಾಸರೋಲ್ ಬಳಸಿ ಮೊಸರು ಹೆಪ್ಪುಹಾಕುವುದು ಉತ್ತಮ. ಕ್ಯಾಸರೋಲ್‌ನಲ್ಲಿ ಶಾಖ ಸಮಾನವಾಗಿ ಉಳಿಯುವುದರಿಂದ ಮೊಸರು ಹದವಾಗಿ ರೂಪುಗೊಳ್ಳುತ್ತದೆ.
ಗಟ್ಟಿ ಮೊಸರು ಪಡೆಯಲು ಅನುಸರಿಸಬೇಕಾದ ಸುಲಭ ಮಾರ್ಗಗಳು
-
ಹಾಲು ಅತಿಯಾಗಿ ಕಾಯಿಸಿರಬಾರದು, ಕೈಬೆರಳು ಇಡಲು ಸಾಧ್ಯವಾಗುವಷ್ಟು ಉಗುರುಬೆಚ್ಚಗಿರಬೇಕು.
-
ಸಣ್ಣ ಚಮಚದಷ್ಟು ಹದವಾದ ಹೆಪ್ಪು ಸೇರಿಸಿ ಚೆನ್ನಾಗಿ ಬೆರೆಸಿ ಮುಚ್ಚಿಡಬೇಕು.
-
ಶೀತ ವಾತಾವರಣವಿದ್ದರೆ ಕ್ಯಾಸರೋಲ್ ಬಳಸುವುದು ಸೂಕ್ತ.
-
ಮೊಸರು ಗಟ್ಟಿಯಾದ ತಕ್ಷಣವೇ ಅದನ್ನು ಫ್ರಿಡ್ಜ್‌ನಲ್ಲಿಡಬೇಕು. ಫ್ರಿಡ್ಜ್‌ನಲ್ಲಿಟ್ಟಾಗ ಬ್ಯಾಕ್ಟೀರಿಯಾಗಳ ಚಟುವಟಿಕೆ ಕಡಿಮೆಯಾಗಿ ಹುಳಿಯಾಗುವುದು ತಡೆಯಲ್ಪಡುತ್ತದೆ.
ರಾತ್ರಿಯಿಡೀ ಮೊಸರನ್ನು ಹೊರಗೆ ಇಡುವ ಬದಲು, ಅದು ಗಟ್ಟಿಯಾದ ತಕ್ಷಣ ಫ್ರಿಡ್ಜ್‌ಗೆ ವರ್ಗಾಯಿಸುವುದೇ ಮೃದುವಾದ ಮತ್ತು ಸಿಹಿಯಾದ ಮೊಸರು ಪಡೆಯಲು ಅತ್ಯುತ್ತಮ ಮಾರ್ಗ.

