ನವದೆಹಲಿ: ಮಹಿಳೆಯ ಬಟ್ಟೆ (ಸಲ್ವಾರ್) ತೆಗೆಯಲು ಯತ್ನಿಸಿ, ಎದೆ ಒತ್ತಿದರೂ ಅದನ್ನು ಅತ್ಯಾಚಾರ ಯತ್ನ ಎಂದು ಪರಿಗಣಿಸಲಾಗುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿನ ಬಗ್ಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ತೀರ್ಪುಗಳನ್ನು ನೀಡುವ ಮುನ್ನ ಸಮಗ್ರ ಅಧ್ಯಯನ ಮತ್ತು ಕಾನೂನು ಪರಿಶೀಲನೆ ಅಗತ್ಯ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.
ಹೌದು. ಮಹಿಳೆಯ ಸಲ್ವಾರ್ ತೆಗೆಯಲು ಯತ್ನಿಸುವುದು ಹಾಗೂ ಎದೆ ಒತ್ತುವುದು ಅತ್ಯಾಚಾರ ಯತ್ನದ ವ್ಯಾಪ್ತಿಗೆ ಬರುವುದಿಲ್ಲ ಎಂದು ಪಾಟ್ನಾ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಇಂತಹ ಮಹತ್ವದ ಪ್ರಕರಣಗಳಲ್ಲಿ ತೀರ್ಪು ನೀಡುವ ಮುನ್ನ ಸಮಗ್ರ ಕಾನೂನು ಅಧ್ಯಯನ ಮತ್ತು ಸಂವೇದನಾಶೀಲತೆ ಅಗತ್ಯ ಎಂದು ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ.
ಲೈಂಗಿಕ ಅಪರಾಧಗಳಿಗೆ ಸಂಬಂಧಿಸಿದ ನ್ಯಾಯಾಂಗದ ದೃಷ್ಟಿಕೋನವನ್ನು ಪರಿಶೀಲಿಸುತ್ತಿರುವ ಸ್ವಯಂಪ್ರೇರಿತ (Suo Motu) ಪ್ರಕರಣದ ವಿಚಾರಣೆ ವೇಳೆ ಈ ವಿಷಯವನ್ನು ಹಿರಿಯ ವಕೀಲೆ ಶೋಭಾ ಗುಪ್ತಾ ಸುಪ್ರೀಂ ಕೋರ್ಟ್ ಗಮನಕ್ಕೆ ತಂದರು.ಈ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿ ಜಾಯಮಾಲ್ಯ ಬಾಗ್ಚಿ ಹಾಗೂ ನ್ಯಾಯಮೂರ್ತಿ ವಿ. ಮೋಹನ್ ಅವರಿದ್ದ ಪೀಠ, ಪಾಟ್ನಾ ಹೈಕೋರ್ಟ್ ನೀಡಿದ ತೀರ್ಪಿನ ಕುರಿತು ಕಳವಳ ವ್ಯಕ್ತಪಡಿಸಿತು. “ಇಂತಹ ತೀರ್ಪುಗಳನ್ನು ನೀಡುವ ಮೊದಲು ಸಮಗ್ರ ಸಂಶೋಧನೆ ನಡೆಯುತ್ತಿಲ್ಲ. ಸಿಬ್ಬಂದಿಯೂ ಸಮರ್ಪಕವಾಗಿ ಕೆಲಸ ಮಾಡುತ್ತಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಹೇಳಿದರು.ಈ ವಿಚಾರದ ಬಗ್ಗೆ ವಿವರವಾದ ಆದೇಶ ಹೊರಡಿಸಲಾಗುವುದು ಎಂದು ಸುಪ್ರೀಂ ಕೋರ್ಟ್ ತಿಳಿಸಿತು.
ಲೈಂಗಿಕ ಅಪರಾಧ ಪ್ರಕರಣಗಳಿಗೆ ಹೊಸ ಮಾರ್ಗಸೂಚಿ
ವಿಚಾರಣೆ ವೇಳೆ ರಾಷ್ಟ್ರೀಯ ನ್ಯಾಯಾಂಗ ಅಕಾಡೆಮಿಯ ತಜ್ಞರ ಸಮಿತಿ ಸಿದ್ಧಪಡಿಸಿರುವ ಲೈಂಗಿಕ ಅಪರಾಧ ಪ್ರಕರಣಗಳ ನ್ಯಾಯಾಂಗ ಸಂವೇದನಾಶೀಲತೆ ಕುರಿತ ಮಾರ್ಗಸೂಚಿ ವರದಿಯನ್ನು ಸುಪ್ರೀಂ ಕೋರ್ಟ್ ಅನುಮೋದಿಸಿತು.ದೇಶದ ಎಲ್ಲಾ ನ್ಯಾಯಾಲಯಗಳು ಈ ಕೈಪಿಡಿಯಲ್ಲಿರುವ ಪದಪ್ರಯೋಗ ಮತ್ತು ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಅನುಸರಿಸಬೇಕು ಎಂದು ಆದೇಶಿಸಿತು. ಜೊತೆಗೆ, ಎಫ್‌ಐಆರ್ ದಾಖಲಿಸುವಾಗ ಮತ್ತು ಚಾರ್ಜ್‌ಶೀಟ್ ಸಲ್ಲಿಸುವಾಗ ಪೊಲೀಸರು ಕೂಡ ಇದೇ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡುವಂತೆ ನಿರ್ದೇಶನ ನೀಡಿತು.
ಪಾಟ್ನಾ ಹೈಕೋರ್ಟ್ ಏನು ಹೇಳಿತ್ತು?
2008ರ ಪ್ರಕರಣವೊಂದರಲ್ಲಿ ಅತ್ಯಾಚಾರ ಯತ್ನ ಆರೋಪದಡಿ ಶಿಕ್ಷೆಗೊಳಗಾಗಿದ್ದ ವ್ಯಕ್ತಿಯನ್ನು ಪಾಟ್ನಾ ಹೈಕೋರ್ಟ್ ಖುಲಾಸೆಗೊಳಿಸಿತ್ತು.ಪ್ರಾಸಿಕ್ಯೂಷನ್ ಪ್ರಕಾರ, ಸಂತ್ರಸ್ತೆ ತನ್ನ ತಂದೆಯೊಂದಿಗೆ ಬಿಹಾರದ ಅಮರ್‌ಪುರದ ಫೋಟೋ ಸ್ಟುಡಿಯೊಗೆ ಹೋಗಿದ್ದಳು. ಫೋಟೋ ತೆಗೆದ ಬಳಿಕ ಸ್ಟುಡಿಯೊ ಮಾಲೀಕ ಆಕೆಯ ತಂದೆಯನ್ನು ಹೊರಗೆ ಕಾಯಲು ಹೇಳಿ, ಒಳಗಿನಿಂದ ಬಾಗಿಲು ಹಾಕಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ ಎಂದು ಆರೋಪಿಸಲಾಗಿತ್ತು. ಮಹಿಳೆಯ ಕಿರುಚಾಟ ಕೇಳಿ ತಂದೆ ಒಳಗೆ ಬಂದಾಗ ಆರೋಪಿ ಸ್ಥಳದಿಂದ ಪರಾರಿಯಾಗಿದ್ದನು.
ವಿಚಾರಣಾ ನ್ಯಾಯಾಲಯ ಆರೋಪಿಯನ್ನು ಅತ್ಯಾಚಾರ ಯತ್ನ ಹಾಗೂ ಅಕ್ರಮ ಬಂಧನದ ಅಪರಾಧಕ್ಕೆ ದೋಷಿ ಎಂದು ತೀರ್ಪು ನೀಡಿತ್ತು. ಆದರೆ ಮೇಲ್ಮನವಿ ವಿಚಾರಣೆ ನಡೆಸಿದ ಪಾಟ್ನಾ ಹೈಕೋರ್ಟ್, ಅತ್ಯಾಚಾರ ಯತ್ನ ನಡೆದಿದೆ ಎಂಬುದನ್ನು ಪ್ರಾಸಿಕ್ಯೂಷನ್ ಸಮರ್ಪಕವಾಗಿ ಸಾಬೀತುಪಡಿಸಲು ವಿಫಲವಾಗಿದೆ ಎಂದು ಹೇಳಿ ಶಿಕ್ಷೆಯನ್ನು ರದ್ದುಪಡಿಸಿತು.ನ್ಯಾಯಾಲಯ, ವೈದ್ಯಕೀಯ ಸಾಕ್ಷ್ಯಗಳಲ್ಲಿ ಅತ್ಯಾಚಾರ ಯತ್ನಕ್ಕೆ ಪೂರಕವಾದ ಯಾವುದೇ ದೃಢವಾದ ಮಾಹಿತಿ ಇಲ್ಲ ಎಂದು ಹೇಳಿತು. ಜೊತೆಗೆ ತನಿಖಾಧಿಕಾರಿಯನ್ನು ವಿಚಾರಣೆಯಲ್ಲಿ ಪರೀಕ್ಷಿಸಿಲ್ಲ ಎಂಬುದನ್ನೂ ಉಲ್ಲೇಖಿಸಿತು.
“ನುಗ್ಗುವಿಕೆ (penetration) ನಡೆದಿರುವ ಯಾವುದೇ ಸಾಕ್ಷ್ಯ ಇಲ್ಲದಿರುವುದು ಹಾಗೂ ಅತ್ಯಾಚಾರಕ್ಕೆ ಸ್ಪಷ್ಟವಾದ ಪ್ರಯತ್ನವನ್ನು ತೋರಿಸುವ ದೃಢವಾದ ಕೃತ್ಯ ಸಾಬೀತಾಗದಿರುವುದರಿಂದ ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 375ರ ಅಂಶಗಳು ಈ ಪ್ರಕರಣದಲ್ಲಿ ಅನ್ವಯಿಸುವುದಿಲ್ಲ” ಎಂದು ಪಾಟ್ನಾ ಹೈಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿತ್ತು.

