ಟೊಮೆಟೊ ಬೆಲೆ ದಿಢೀರ್ 1200 ರೂಪಾಯಿಯಿಂದ 80 ರೂಪಾಯಿಗೆ ಕುಸಿತವಾಗಿದ್ದು, ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಟೊಮೆಟೊ ದರ ದಿಢೀರ್ ಕುಸಿತವಾದ ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ರೈತರು ಕಂಗಾಲಾಗಿದ್ದಾರೆ. ಕಳೆದ ವಾರ 1 ಸಾವಿರದಿಂದ 1200 ರೂಪಾಯಿವರೆಗೆ ಇದ್ದ ಒಂದು ಬಾಕ್ಸ್ ಟೊಮೆಟೊ ದರ ಈಗ 80 ರಿಂದ 100 ರೂಪಾಯಿಗೆ ಕುಸಿತವಾಗಿದೆ. ಕೆಜಿಗೆ 20 ರಿಂದ 30 ರೂಪಾಯಿ ಇದ್ದ ದರ ದಿಢೀರನೆ 20 ರೂಪಾಯಿಗೆ ಮೂರು ಕೆಜಿಗೆ ಮಾರಾಟವಾಗುತ್ತಿದೆ. ಇದರಿಂದಾಗಿ ಟೊಮೆಟೊ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಈ ಬಾರಿ ರೈತರು ಹೆಚ್ಚು ಟೊಮೆಟೊ ಬೆಳೆದಿದ್ದು, ಬಿಸಿಲ ವಾತಾವರಣದಿಂದ ಕಾಯಿಗಳು ಬೇಗನೆ ಹಣ್ಣಾಗುತ್ತವೆ. ಹೊರ ರಾಜ್ಯಗಳಲ್ಲಿಯೂ ಟೊಮೆಟೊ ಹೆಚ್ಚಾಗಿ ಬೆಳೆದಿರುವುದರಿಂದ ವಿಜಯನಗರ ಜಿಲ್ಲೆಯ ರೈತರು ಬೆಳೆದ ಟೊಮೆಟೊ ರವಾನೆ ಆಗುತ್ತಿಲ್ಲ. ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಸಾಗಣೆ ವೆಚ್ಚ ಕೂಡ ಸಿಗದಂತಹಾಗಿದೆ. ಬೆಲೆ ಕುಸಿತದಿಂದ ಕಂಗಾಲಾಗಿರುವ ರೈತರು ಹೊಲದಲ್ಲಿಯೇ ಟೊಮೆಟೊ ಬಿಟ್ಟಿದ್ದಾರೆ.

