ತಿರುಮಲ: ಬೇಸಿಗೆ ರಜೆ ಹಾಗೂ ವಾರಾಂತ್ಯದ ಹಿನ್ನೆಲೆಯಲ್ಲಿ ಕಲಿಯುಗದ ಪ್ರತ್ಯಕ್ಷ ದೈವ ತಿರುಪತಿ ಶ್ರೀ ವೆಂಕಟೇಶ್ವರ ಸ್ವಾಮಿಯ ಸನ್ನಿಧಿಗೆ ಭಕ್ತರ ದಂಡೇ ಹರಿದುಬಂದಿದೆ. ಭಾನುವಾರ ಒಂದೇ ದಿನ ಬರೋಬ್ಬರಿ 98,058 ಯಾತ್ರಾರ್ಥಿಗಳು ಶ್ರೀವಾರಿ ದರ್ಶನ ಪಡೆದು ದಾಖಲೆ ಬರೆದಿದ್ದಾರೆ.
ವಿಶೇಷವೆಂದರೆ ದೇವಸ್ಥಾನದ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ (ICCC) ನಲ್ಲಿ ಅಳವಡಿಸಲಾಗಿರುವ ಕೃತಕ ಬುದ್ಧಿಮತ್ತೆ (AI) ಚಾಲಿತ ‘ಮುಖ ಗುರುತಿಸುವ ತಂತ್ರಜ್ಞಾನ’ (Face Identification Technology) ಬಳಸಿ ಪ್ರತಿ ಭಕ್ತನ ಫೋಟೋ ರೆಕಾರ್ಡ್ ಮಾಡಲಾಗಿದೆ. ಹೀಗಾಗಿ ಈ ಬಾರಿ ಪ್ರತಿಯೊಬ್ಬರ ನಿಖರವಾದ (ಹೆಡ್-ಟು-ಹೆಡ್) ಎಣಿಕೆ ಲಭ್ಯವಾಗಿದೆ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಈ ಮೂಲಕ ತಿರುಮಲ ತಿರುಪತಿ ದೇವಸ್ಥಾನಂ (TTD) ಮಂಡಳಿಯು ಅತ್ಯಂತ ನಿಖರವಾದ ದತ್ತಾಂಶವನ್ನು ಕಲೆಹಾಕಿದೆ.
ಅಂದಾಜು ಲೆಕ್ಕಕ್ಕೆ ಬಿದ್ದ ಬ್ರೇಕ್: ಈ ಬಾರಿಯದ್ದು ನೈಜ ದಾಖಲೆ
ದೇವಸ್ಥಾನದ ಇತಿಹಾಸದಲ್ಲೇ 2016-17ರ ಅವಧಿಯಲ್ಲಿ ಒಂದೇ ದಿನದಲ್ಲಿ ಗರಿಷ್ಠ 1,01,256 ಭಕ್ತರು ದರ್ಶನ ಪಡೆದಿದ್ದು ಇದುವರೆಗಿನ ದಾಖಲೆಯಾಗಿತ್ತು. ಆದರೆ, ಆ ಅಂಕಿ-ಅಂಶವು ಕೇವಲ ಕಂಪಾರ್ಟ್‌ಮೆಂಟ್‌ಗಳ ಸಾಮರ್ಥ್ಯದ ಆಧಾರದ ಮೇಲೆ ಸಿದ್ಧಪಡಿಸಿದ ಅಂದಾಜು ಲೆಕ್ಕಾಚಾರವಾಗಿತ್ತೇ ಹೊರತು ವೈಯಕ್ತಿಕ ಎಣಿಕೆಯಾಗಿರಲಿಲ್ಲ. ಆದರೆ ಪ್ರಸ್ತುತ ಜಾರಿಯಲ್ಲಿರುವ ಎಐ ತಂತ್ರಜ್ಞಾನದಿಂದಾಗಿ ಈಗ ವರದಿಯಾಯಾಗುತ್ತಿರುವ ಸಂಖ್ಯೆಯು ಸಂಪೂರ್ಣ ನಿಖರ ಹಾಗೂ ಪರಿಶೀಲಿಸಬಹುದಾದ ನೈಜ ದಾಖಲೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತಿರುಮಲದಲ್ಲಿ ಭಕ್ತ ಸಾಗರ:
ತಿರುಮಲದಲ್ಲಿದ್ದ ಒಟ್ಟು ಜನಸಂದಣಿ: ದೇವಸ್ಥಾನದ ಕೊಠಡಿಗಳು, ಲಾಕರ್ ಹಾಲ್‌ಗಳು, ಪಿಎಸಿ ಕಾಂಪ್ಲೆಕ್ಸ್‌ಗಳು ಹಾಗೂ ರಸ್ತೆಗಳು ಸೇರಿದಂತೆ ಭಾನುವಾರ ತಿರುಮಲದಲ್ಲಿ ಒಟ್ಟು ಸುಮಾರು 1.75 ಲಕ್ಷ ಜನರು ಉಪಸ್ಥಿತರಿದ್ದರು.
ಕೊನೆ ಕ್ಷಣದವರೆಗೂ ಕಾಯುವಿಕೆ: ಸೋಮವಾರ ಮುಂಜಾನೆ 2 ಗಂಟೆಗೆ ದರ್ಶನದ ಸಮಯ ಮುಕ್ತಾಯಗೊಳ್ಳುವ ವೇಳೆಯಲ್ಲೂ ಇನ್ನೂ 26,000 ಭಕ್ತರು ಕ್ಯೂ ಲೈನ್‌ಗಳಲ್ಲಿ ಹೊರಗೆ ಕಾಯುತ್ತಿದ್ದರು.
ದಾಖಲೆಯ ಮುಂಡನ ಸೇವೆ: ಭಾನುವಾರ ಒಂದೇ ದಿನ ಕಲ್ಯಾಣಕಟ್ಟೆಯಲ್ಲಿ ಬರೋಬ್ಬರಿ 49,234 ಭಕ್ತರು ಮುಂಡನ ಸೇವೆ ಸಲ್ಲಿಸಿ ಶ್ರೀವಾರಿಗೆ ತಲೆಕೂದಲು ಸಮರ್ಪಿಸಿದ್ದಾರೆ.
ಲಕ್ಷ ಲಕ್ಷ ಲಾಡು ಮಾರಾಟ: ವಾರಾಂತ್ಯದ ರಶ್ ಹಿನ್ನೆಲೆಯಲ್ಲಿ ತಿರುಪತಿ ಲಾಡು ಮಾರಾಟವು ಬರೋಬ್ಬರಿ 4.2 ಲಕ್ಷದ ಗಡಿ ಮುಟ್ಟಿದೆ.
ಕೋಟಿ ಕೋಟಿ ಹರಿದುಬಂದ ಕಾಣಿಕೆ: ಭಕ್ತರ ಭಾರಿ ಭಾಗವಹಿಸುವಿಕೆಯಿಂದಾಗಿ ಭಾನುವಾರ ಒಂದೇ ದಿನ ಶ್ರೀವಾರಿ ಹುಂಡಿಗೆ ಬರೋಬ್ಬರಿ ₹4.09 ಕೋಟಿ ರೂಪಾಯಿ ನಗದು ಆದಾಯ ಸಂಗ್ರಹವಾಗಿದೆ.
ಯಶಸ್ವಿ ನಿರ್ವಹಣೆ
ಈ ಭಾರಿ ಜನಸ್ತೋಮದ ನಿರ್ವಹಣೆ ಕುರಿತು ವ್ಯವಸ್ಥೆಯ ಉಸ್ತುವಾರಿ ನೋಡಿಕೊಂಡಿದ್ದ ಹೆಚ್ಚುವರಿ ಕಾರ್ಯನಿರ್ವಾಹಕ ಅಧಿಕಾರಿ ಸಿಹೆಚ್ ವೆಂಕಯ್ಯ ಚೌದರಿ ಮಾತನಾಡಿದ್ದಾರೆ. “ದೇವಸ್ಥಾನ, ಅನ್ನದಾನ, ರಿಸೆಪ್ಷನ್, ಪರಕಾಮಣಿ ಸೇರಿದಂತೆ ವಿವಿಧ ವಿಭಾಗಗಳ ಡೆಪ್ಯುಟಿ ಇಒಗಳು ಹಾಗೂ ಸಿಬ್ಬಂದಿಯ ಅಚ್ಚುಕಟ್ಟಾದ ಸಂಘಟಿತ ಪ್ರಯತ್ನದಿಂದಾಗಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಈ ದಾಖಲೆಯ ಜನಸಂದಣಿಯನ್ನು ಯಶಸ್ವಿಯಾಗಿ ನಿರ್ವಹಿಸಲಾಗಿದೆ” ಎಂದು ಅವರು ಶ್ಲಾಘಿಸಿದ್ದಾರೆ. ಸೋಮವಾರ ಬೆಳಿಗ್ಗೆ ಭಕ್ತರ ಸಂಖ್ಯೆಯಲ್ಲಿ ಕೊಂಚ ಇಳಿಮುಖ ಕಂಡುಬಂದಿದ್ದರೂ, ವಾರಾಂತ್ಯದ ಭಾರಿ ರಶ್ ಅನ್ನು ಸುಧಾರಿತ ತಂತ್ರಜ್ಞಾನದ ಮೂಲಕ ನಿಭಾಯಿಸುವಲ್ಲಿ ಟಿಟಿಡಿ ಆಡಳಿತ ಮಂಡಳಿ ಯಶಸ್ವಿಯಾಗಿದೆ.

