ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಭಾರತ ಹಾಗೂ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ನಡುವೆ ನಡೆಯುತ್ತಿರುವ ಐಸಿಸಿ ಟಿ ಟ್ವೆಂಟಿ ವಿಶ್ವಕಪ್ 2026ರ ಮೂರನೇ ಪಂದ್ಯದಲ್ಲಿ ಭಾರತ ರನ್‌ಗಳ 162 ಗುರಿಯನ್ನು ನೀಡಿದೆ.
ಪಂದ್ಯದಲ್ಲಿ ಟಾಸ್ ಗೆದ್ದ ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕಾ ಫೀಲ್ಡಿಂಗ್ ಆರಿಸಿಕೊಂಡು ಭಾರತವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿದೆ.
ತಂಡದ ಪರ ಆರಂಭಿಕರಾಗಿ ಕಣಕ್ಕಿಳಿದ ಅಭಿಷೇಕ್ ಶರ್ಮಾ ಡಕ್‌ಔಟ್ ಆಗುವ ಮೂಲಕ ಭಾರತ ಆರಂಭಿಕ ಆಘಾತ ಅನುಭವಿಸಿತು. ಮತ್ತೋರ್ವ ಆರಂಭಿಕ ಆಟಗಾರ ಇಶಾನ್ ಕಿಶನ್ ಸಹ 20 ರನ್‌ಗೆ ವಿಕೆಟ್ ಒಪ್ಪಿಸಿದರು. ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ 25 ರನ್‌ಗೆ ಔಟ್ ಆದರು. ಬೆನ್ನಲ್ಲೇ ಶಿವಮ್ ದುಬೆ ಡಕ್‌ಔಟ್ ಆದರು. ಇಪ್ಪತ್ತು ರನ್ ಮುಟ್ಟಿದ್ದ ಇಶನ್, ತಿಲಕ್ ಹಾಗೂ ದುಬೆ ಆರನೇ ಓವರ್‌ನಲ್ಲಿ ವಿಕೆಟ್ ಒಪ್ಪಿಸಿದ್ದು ತಂಡಕ್ಕೆ ಭಾರಿ ಆಘಾತ ಉಂಟುಮಾಡಿತು. ಈ ಮೂಲಕ ಭಾರತ ಕೇವಲ 46 ರನ್‌ಗೆ 4 ವಿಕೆಟ್ ಕಳೆದುಕೊಂಡಿತು. ಬಳಿಕ ಕಣಕ್ಕಿಳಿದ ರಿಂಕು ಸಿಂಗ್ 6 ರನ್, ಹಾರ್ದಿಕ್ ಪಾಂಡ್ಯ 5 ರನ್‌ಗೆ ವಿಕೆಟ್ ಕಳೆದುಕೊಂಡರು. ಅಲ್ಲಿಗೆ ಭಾರತ ಕೇವಲ 77 ರನ್‌ಗೆ 6 ವಿಕೆಟ್ ಕಳೆದುಕೊಂಡು ಹೀನಾಯ ಹಂತ ತಲುಪಿತು. ಈ ಸಮಯದಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಕಣಕ್ಕಿಳಿದು ವಿಕೆಟ್ ಬೀಳುವುದನ್ನು ನೋಡುತ್ತಿದ್ದ ನಾಯಕ ಸೂರ್ಯಕುಮಾರ್ ಯಾದವ್ ಅಂತಿಮ ಹಂತದವರೆಗೂ ಏಕಾಂಗಿ ಹೋರಾಟ ನಡೆಸಿದರು. ಸೂರ್ಯಗೆ ತುಸು ಕಾಲ ಜತೆಯಾದ ಅಕ್ಸರ್ ಪಟೇಲ್ 14 ರನ್ ಬಾರಿಸಿದರೆ, ಅರ್ಷ್‌ದೀಪ್ ಸಿಂಗ್ ಅಜೇಯ 4 ರನ್ ಗಳಿಸಿದರು. ಏಕಾಂಗಿಯಾಗಿ ಹೋರಾಡಿ ಭಾರತವನ್ನು ಭಾರೀ ಮುಖಭಂಗದಿಂದ ಪಾರು ಮಾಡಿದ ಸೂರ್ಯಕುಮಾರ್ ಯಾದವ್ 49 ಎಸೆತಗಳಲ್ಲಿ 10 ಬೌಂಡರಿ ಹಾಗೂ 4 ಸಿಕ್ಸರ್ ಸಹಿತ 84 ರನ್ ಬಾರಿಸಿದರು. ವರುಣ್ ಚಕ್ರವರ್ತಿ ಡಕ್‌ಔಟ್ ಆದರು.
ಅಮೆರಿಕಾ ಪರ ಶಾಡ್ಲಿ ವಾನ್ ಶಾಕ್‌ವಿಕ್ ನಾಲ್ಕು ವಿಕೆಟ್, ಹರ್ಮೀತ್ ಸಿಂಗ್ ಎರಡು ವಿಕೆಟ್, ಅಲಿ ಖಾನ್ ಹಾಗೂ ಮೊಹಮ್ಮದ್ ಮೊಹ್ಸಿನ್ ತಲಾ ಒಂದೊಂದು ವಿಕೆಟ್ ಪಡೆದರು.

