ಶಿವಮೊಗ್ಗ: ಕಮಿಷನ್ ಆಸೆ ತೋರಿಸಿ ಬ್ಯಾಂಕ್ ಖಾತೆ ಪಡೆದು ಲಕ್ಷಾಂತರ ರೂ. ಹಣ ವರ್ಗಾವಣೆ, ವಂಚನೆ ಪ್ರಕರಣದಲ್ಲಿ ಶಿವಮೊಗ್ಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಫೆ. 9 ರಂದು ಫಿರ್ಯಾದುದಾರ ವಿಲ್ಸನ್ ವಿ. ಎಂಬುವವರು ನೀಡಿದ ದೂರಿನ ಅನ್ವಯ ಆರೋಪಿ ಜಗದೀಶ ಬ್ಯಾಂಕ್ ಖಾತೆಗಳನ್ನು ಓಪನ್ ಮಾಡಿ ಕೊಟ್ಟಲ್ಲಿ ಕಮಿಷನ್ ನೀಡುವುದಾಗಿ ನಂಬಿಸಿ, ವಿಲ್ಸನ್ ಅವರ ಖಾತೆಯನ್ನು ಪಡೆದುಕೊಂಡಿದ್ದ, ವಿಲ್ಸನ್ ರಂತೆ ನಟಿಸಿ ವಂಚನೆಯ ಲಕ್ಷಾಂತರ ರೂ. ಹಣವನ್ನು ವರ್ಗಾವಣೆ ಮಾಡಲು ದುರುಪಯೋಗಪಡಿಸಿಕೊಂಡಿದ್ದು, ಈತನ ಮೇಲೆ ಕಾನೂನು ಕ್ರಮ ಕೈಗೊಳ್ಳಲು ನೀಡಿದ ದೂರಿನ ಮೇರೆಗೆ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು.
ಪ್ರಕರಣದಲ್ಲಿ ಆರೋಪಿ ಪತ್ತೆ ಬಗ್ಗೆ ಎಸ್ಪಿ ನಿಖಿಲ್ ಬಿ., ಎಎಸ್ಪಿಗಳಾದ ಕಾರಿಯಪ್ಪ ಎ.ಜಿ., ರಮೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಸೈಬರ್ ಕ್ರೈಂ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು ಮಂಜುನಾಥ್ ನೇತೃತ್ವದ ಸಿಬ್ಬಂದಿಗಳಾದ ಶೇಖರ ಎನ್. ಎಎಸ್ಐ, ಕಿರಣ್ ಕುಮಾರ್, ಚಂದ್ರಶೇಖರ ಸಿಹೆಚ್‌ಸಿ, ಗಿರೀಶ ಸ್ವಾಮಿ, ಆಂಡ್ರ್ಯೂಸ್ ಮತ್ತು ಗೌತಮ್ ಜಿ.ಎನ್. ಸಿಪಿಸಿ ಅವರುಗಳನ್ನು ಒಳಗೊಂಡ ತಂಡ ರಚಿಸಲಾಗಿತ್ತು.
ತನಿಖಾ ತಂಡವು ಪ್ರಕರಣದ ಆರೋಪಿಗಳಾದ ಶಿವಮೊಗ್ಗ ಶರಾವತಿ ನಗರದ. ಜಗದೀಶ್ ಆರ್.(43), ಚಿಕ್ಕಮಗಳೂರು ಶಂಕರಪುರ 3ನೇ ಕ್ರಾಸ್ ನಿವಾಸಿ ಅರ್ಷಾದ್(39), ಶಿವಮೊಗ್ಗ ಹೊಸಮನೆಯ ಅನಂತ ಟಿ.(34) ಅವರನ್ನು ಬಂಧಿಸಿದೆ.
ಆರೋಪಿತರ ಬಳಿ ವಿವಿಧ ಹೆಸರಿನಲ್ಲಿರುವ 15 Mule accounts ಪತ್ತೆಯಾಗಿರುತ್ತವೆ. ಈ ಖಾತೆಗಳ ಮೇಲೆ ದೇಶಾದ್ಯಂತ ಒಟ್ಟು 352ಕ್ಕೂ ಹೆಚ್ಚು ಪ್ರಕರಣಗಳಿದ್ದು, ಅವುಗಳಲ್ಲಿ ಸುಮಾರು 82,00,15,712 ರೂ. ಗೂ ಹೆಚ್ಚು ಹಣ ವಂಚನೆಯಾಗಿರುತ್ತದೆ.
ಸದರಿ ಆರೋಪಿತರು ವಂಚನೆಗೆ ಬಳಿಸಿದ 15 Mule accounts ಗಳಲ್ಲಿ ಒಟ್ಟು 14,71,91,174 ರೂ.ಗೂ ಹೆಚ್ಚು ಹಣ ವರ್ಗಾವಣೆಯಾಗಿರುತ್ತದೆ.
ಅಲ್ಲದೆ ಸದರಿ ಆರೋಪಿಗಳಿಂದ ಒಟ್ಟು ಕೃತ್ಯಕ್ಕೆ ಬಳಸಿದ 2 Mobiles, 11 ATM card, 9 QR Code Scanner, 15 Airtel SIM cards, 15 Mule Bank Accounts ವಶಪಡಿಸಿಕೊಳ್ಳಲಾಗಿದೆ.
ನಂತರ ಸದರಿ ಆರೋಪಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ನ್ಯಾಯಾಲಯವು ಆರೋಪಿಗಳನ್ನು ನ್ಯಾಯಾಂಗ ಬಂದನಕ್ಕೆ ನೀಡಿದೆ. ತಲೆಮರೆಸಿಕೊಂಡಿರುವ ಇನ್ನುಳಿದ ಆರೋಪಿತರ ಪತ್ತೆ ಕ್ರಮಕೈಗೊಂಡಿದ್ದು, ತನಿಖೆ ಮುಂದುವರಿದಿದೆ.

