ಐಸಿಸಿ ಪುರುಷರ ಟಿ ಟ್ವೆಂಟಿ ವಿಶ್ವಕಪ್ 2026ರ ಸೂಪರ್ 8 ಹಂತದಲ್ಲಿ ಭಾರತ ಹಾಗೂ ಜಿಂಬಾಬ್ವೆ ತಂಡಗಳು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಿವೆ.
ಪಂದ್ಯದಲ್ಲಿ ಟಾಸ್ ಗೆದ್ದ ಜಿಂಬಾಬ್ವೆ ಬೌಲಿಂಗ್ ಆರಿಸಿಕೊಂಡು ಭಾರತ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿತು. ಅದರಂತೆ ಭಾರತ ಒಟ್ಟಾರೆ ತಂಡದ ಅದ್ಭುತ ಬ್ಯಾಟಿಂಗ್ ಪ್ರದರ್ಶನದಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 256 ರನ್ ಕಲೆಹಾಕಿ ಜಿಂಬಾಬ್ವೆಗೆ 257 ರನ್‌ಗಳ ಗುರಿಯನ್ನು ನೀಡಿದೆ.
ಈ ಮೂಲಕ ಭಾರತ ಟಿ ಟ್ವೆಂಟಿ ವಿಶ್ವಕಪ್ ಇತಿಹಾಸದಲ್ಲಿ ತಂಡವೊಂದು ಕಲೆಹಾಕಿದ ಎರಡನೇ ಅತಿದೊಡ್ಡ ಮೊತ್ತ ಎಂಬ ದಾಖಲೆ ಬರೆದಿದೆ. ಈ ಹಿಂದೆ 2007ರ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಶ್ರೀಲಂಕಾ ಕೀನ್ಯಾ ವಿರುದ್ಧ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 260 ರನ್ ಕಲೆಹಾಕಿತ್ತು. ಈ ದಾಖಲೆ ಇನ್ನೂ ಸಹ ಹಾಗೆಯೇ ಉಳಿದುಕೊಂಡಿದೆ. ಇನ್ನು ಈ ಬಾರಿಯ ಟೂರ್ನಿಯಲ್ಲಿ ಜಿಂಬಾಬ್ವೆ ವಿರುದ್ಧವೇ ವೆಸ್ಟ್ ಇಂಡೀಸ್ 20 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 254 ರನ್ ಬಾರಿಸಿ ಎರಡನೇ ಸ್ಥಾನಕ್ಕೇರಿತ್ತು. ಇದನ್ನು ಹಿಂದಿಕ್ಕಿರುವ ಭಾರತ ಎರಡನೇ ಸ್ಥಾನದಲ್ಲಿದೆ.
ಭಾರತದ ಇನ್ನಿಂಗ್ಸ್: ತಂಡದ ಪರ ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಬ್ಯಾಟ್‌ನಿಂದ ಶುರುವಾದ ಬೌಂಡರಿ ಹೊಳೆ ಪಂದ್ಯದುದ್ದಕ್ಕೂ ಹರಿದುಬಂದಿದ್ದು, ಫಾರ್ಮ್ ಕಳೆದುಕೊಂಡಿದ್ದ ಅಭಿಷೇಕ್ ಶರ್ಮಾ ಸಹ ಈ ಇನ್ನಿಂಗ್ಸ್‌ನಲ್ಲಿ ಕಂಬ್ಯಾಕ್ ಮಾಡಿದರು. ಇನ್ನು ಟೂರ್ನಿಯುದ್ದಕ್ಕೂ ಕಳಪೆ ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್ ಬೀಸಿದ್ದ ತಿಲಕ್ ವರ್ಮಾ ಸಹ ಅಬ್ಬರಿಸಿದರು. ಸಂಜು ಸ್ಯಾಮ್ಸನ್ 24 (15) ರನ್ ಗಳಿಸಿದರೆ, ಅಭಿಷೇಕ್ ಶರ್ಮಾ 55(30), ಇಶಾನ್ ಕಿಶನ್ 38 (24), ಸೂರ್ಯಕುಮಾರ್ ಯಾದವ್ 33 (13), ಹಾರ್ದಿಕ್ ಪಾಂಡ್ಯ ಅಜೇಯ 50 (23) ರನ್ ಹಾಗೂ ತಿಲಕ್ ವರ್ಮಾ ಅಜೇಯ 44 (16) ರನ್ ಬಾರಿಸಿದರು.
ಜಿಂಬಾಬ್ವೆ ಪರ ಸಿಕಂದರ್ ರಾಜಾ, ಮಪೋಸಾ, ಮುಜರ್‌ಬಾನಿ ಹಾಗೂ ಎನ್‌ಗವಾರಾ ತಲಾ ಒಂದೊಂದು ವಿಕೆಟ್ ಪಡೆದರು.

