ಚಾಮರಾಜನಗರ: ಪತ್ರಕರ್ತರ ಹೆಸರಲ್ಲಿ ಕಾಮಗಾರಿ ನಿರ್ವಹಿಸುತ್ತಿದ್ದ ಮೇಸ್ತ್ರಿ ಬಳಿ ಲಕ್ಷಾಂತರ ರೂಪಾಯಿ ಹಣಕ್ಕೆ ಬೇಡಿಕೆ ಇಟ್ಟು, ಹಣ ಕೊಡಲು ಒಪ್ಪದಿದ್ದಾಗ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಪುನೀತ್, ಶೇಖರ್, ಪುರುಷೋತ್ತಮ್ ಬಂಧಿತ ಆರೋಪಿಗಳು. ಯಳಂದೂರು –ಬಿಆರ್ ಹಿಲ್ಸ್ ಮಾರ್ಗದ ರಸ್ತೆ ಕಾಮಗಾರಿ ನಡೆಯುತ್ತಿದ್ದು, ಕಾಮಗಾರಿ ಕಳಪೆಯಾಗಿದೆ ಎಂದು ಪತ್ರಕರ್ತರ ಸೋಗಿನಲ್ಲಿ ಈ ಮೂವರು ತೆರಳಿದ್ದಾರೆ. ಕಾಮಗಾರಿ ನಿರ್ವಹಿಸುತ್ತಿದ್ದ ಮೇಸ್ತ್ರಿ ಚೆಲುವರಾಜ್ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ. ಹಣ ಕೊಡಲು ಒಪ್ಪದಿದ್ದಾಗ ಹಲ್ಲೆ ನಡೆಸಿದ್ದಾರೆ.
ಕಾಮಗಾರಿ ಕಳಪೆಯಾಗಿದೆ. ಹಣ ಕೊಡದಿದ್ದರೆ ಕಾಮಗಾರಿ ನಡೆಯಲು ಬಿಡುವುದಿಲ್ಲ ಎಂದು ಬೆದರಿಸಿದ್ದಾರೆ. ಈ ವೇಳೆ ಮೇಸ್ತ್ರಿ ಚೆಲುವರಾಜ್, ನೀವು ಗುತ್ತಿಗೆದಾರ ಹಾಗೂ ಇಂಜಿನಿಯರ್ ಸಂಪರ್ಕಿಸಿ ಎಂದು ತಿಳಿಸಿದ್ದಾರೆ. ಈ ವೇಳೆ ಆರೋಪಿಗಳು ಚೆಲುವರಾಜ್ ಮೇಲೆ ಮಾರಣಾಂತಿಕವಾಗಿ ಹಲ್ಲೆ ಮಾಡಿ ಪರಾರಿಯಾಗಿದ್ದಾರೆ. ಯಳಂದೂರು ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮೂವರು ನಕಲಿ ಪತ್ರಕರ್ತರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

