HomeKarnatakaಇದು ಜನಸೇವೆಗೆ ಸಿಕ್ಕಿದ ಅವಕಾಶ, ದಾಖಲೆ ದೃಷ್ಟಿಯಿಂದ ನೋಡಬಾರದು: ಸಿಎಂ ಸಿದ್ಧರಾಮಯ್ಯ

ಇದು ಜನಸೇವೆಗೆ ಸಿಕ್ಕಿದ ಅವಕಾಶ, ದಾಖಲೆ ದೃಷ್ಟಿಯಿಂದ ನೋಡಬಾರದು: ಸಿಎಂ ಸಿದ್ಧರಾಮಯ್ಯ

ಡಿ.ದೇವರಾಜ ಅರಸರು ಅವರು ಮುಖ್ಯಮಂತ್ರಿಗಳಾಗಿ ಏಳು ವರ್ಷ ಏಳು ತಿಂಗಳು ಇಪ್ಪತ್ತಮೂರು ದಿನಗಳ ಕಾಲ ಈ ರಾಜ್ಯದ ಜನರ ಸೇವೆ ಮಾಡಿದ್ದಾರೆ. ಅದಕ್ಕಿಂತಲೂ ಹೆಚ್ಚಿನ ಅವಧಿಗೆ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸುವ ಅವಕಾಶವನ್ನು ರಾಜ್ಯದ ಜನತೆ ನನಗೆ ನೀಡಿದ್ದಾರೆ. ಇದನ್ನೆಲ್ಲ ದಾಖಲೆಗಳ ದೃಷ್ಟಿಯಿಂದ ನಾನು ನೋಡುವುದಿಲ್ಲ, ಯಾರೂ ನೋಡಬಾರದು ಕೂಡಾ. ಇದು ಜನರ ಸೇವೆಗೆ ಸಿಕ್ಕಿರುವ ಅವಕಾಶದ ಭಾಗ್ಯ ಎಂದು ತಿಳಿದುಕೊಂಡಿದ್ದೇನೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.

ನನ್ನ ರಾಜಕೀಯ ಜೀವನಕ್ಕೆ ಹಲವು ಹಿರಿಯರ ಚಿಂತನೆ ಮತ್ತು ಸಾಧನೆಗಳು ಪ್ರೇರಣೆ ಮತ್ತು ಮಾರ್ಗದರ್ಶನ ನೀಡಿವೆ. ಆ ಹಿರಿಯರ ಸಾಲಿನಲ್ಲಿ ದೇವರಾಜ ಅರಸು ಪ್ರಮುಖರು. ನಮ್ಮಿಬ್ಬರ ನಡುವಿನ ಸೈದ್ಧಾಂತಿಕ ಸಹಮತ ಮತ್ತು ನಾನು ಕೂಡಾ ಅವರಂತೆ ಮೈಸೂರಿನ ಮಣ್ಣಿನ ಮಗ ಎನ್ನುವ ಕಾರಣಕ್ಕೆ ನನ್ನ ಹೃದಯದಲ್ಲಿ ಅವರಿಗೆ ವಿಶೇಷವಾದ ಸ್ಥಾನ ಇದೆ ಎಂದು ಹೇಳಿದ್ದಾರೆ.

ಸಾಮಾಜಿಕ ನ್ಯಾಯದ ಬಂಡಿಯ ಪಯಣಕ್ಕೆ ಕರ್ನಾಟಕದಲ್ಲಿ ದೀರ್ಘ ಪರಂಪರೆ ಇದೆ. ಬಸವಣ್ಣನವರಿಂದ ಪ್ರಾರಂಭಗೊಂಡು ನಾಲ್ವಡಿ ಕೃಷ್ಣರಾಜ ಒಡೆಯರ್ ಮತ್ತು ಡಿ.ದೇವರಾಜ ಅರಸು ವರೆಗೆ ಹಲವಾರು ಮಹನೀಯರು ಈ ಬಂಡಿಯನ್ನು ಎಳೆದುಕೊಂಡು ಬಂದಿದ್ದಾರೆ. ಇದನ್ನು ಇನ್ನಷ್ಟು ಮುಂದಕ್ಕೆ ಎಳೆದುಕೊಂಡು ಹೋಗುವ ಅವಕಾಶ ನನಗೆ ಸಿಕ್ಕಿದೆ. ಈ ಅವಕಾಶವನ್ನು ಬದಲಾಗಿರುವ ಸಾಮಾಜಿಕ ಮತ್ತು ರಾಜಕೀಯದ ಸ್ಥಿತ್ಯಂತರಗಳ ಇತಿ-ಮಿತಿಯಲ್ಲಿ ಜವಾಬ್ದಾರಿಯಾಗಿ ನಾನು ಸ್ವೀಕರಿಸಿ, ಮುನ್ನಡೆಯುತ್ತಿದ್ದೇನೆ ಎಂದು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅಧಿಕಾರ, ಸಂಪತ್ತು ಮತ್ತು ಅವಕಾಶಗಳ ಹೆಬ್ಬಾಗಿಲನ್ನು ಸರ್ವರಿಗೂ ತೆರೆದು ಸಮಾನವಾಗಿ ಹಂಚಿಕೆ ಮಾಡದ ಹೊರತು ಸುಸ್ಥಿರವಾದ ಅಭಿವೃದ್ದಿಯನ್ನು ಕಾಣಲು ಸಾಧ್ಯ ಇಲ್ಲ ಎನ್ನುವುದು ಅರಸರ ಅಚಲ ನಂಬಿಕೆಯಾಗಿತ್ತು. ಇದಕ್ಕಾಗಿಯೇ ಅವಕಾಶ ವಂಚಿತ ಸಮುದಾಯಗಳಿಗೆ ಸೇರಿರುವ ನಾಯಕರನ್ನು ಗುರುತಿಸಿ ರಾಜಕೀಯವಾಗಿ ಬೆಳೆಸಿದರು. ಭೂಸುಧಾರಣೆಯ ಮೂಲಕ ಸಂಪತ್ತಿನ ಸಮಾನ‌ ಹಂಚಿಕೆಯ ಪ್ರಕ್ರಿಯೆ ಪ್ರಾರಂಭಿಸಿದರು. ಮೀಸಲಾತಿಯ ಮೂಲಕ ವಂಚಿತ ಸಮುದಾಯಕ್ಕೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಕೂಡಾ ಹೆಚ್ಚಿನ ಪ್ರಾತಿನಿಧ್ಯ ಸಿಗುವಂತೆ ಮಾಡಿದರು. ಜನಪ್ರತಿನಿಧಿಗಳೆಲ್ಲರಿಗೂ ಈ ಸಾಧನೆ ಪ್ರೇರಣೆಯಾಗಬೇಕು ಎಂದು ಹೇಳಿದ್ದಾರೆ

ಇಂದಿನ ದಿನದ ವಿಶೇಷ ಸಂದರ್ಭದಲ್ಲಿ ನಮಗೆಲ್ಲ ಪ್ರೇರಣಾದಾಯಿಗಳು ಮತ್ತು ಪೂಜನೀಯರೂ ಆಗಿರುವ ಡಿ.ದೇವರಾಜ ಅರಸು ಅವರಿಗೆ ನಾನು ಗೌರವದ ನಮನಗಳನ್ನು ಸಲ್ಲಿಸುತ್ತೇನೆ ಎಂದು ಸಿಎಂ ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular