HomeLatest Newsಚಿನ್ನಾಭರಣ ಕದ್ದು ಮಹಿಳೆಯನ್ನು ಬಾವಿಗೆ ತಳ್ಳಿದ ಕಳ್ಳ: ಆಸರೆಗೆ ಇದ್ದ ಹಗ್ಗವನ್ನು ಕತ್ತರಿಸಿದ ಪಾಪಿ: 21...

ಚಿನ್ನಾಭರಣ ಕದ್ದು ಮಹಿಳೆಯನ್ನು ಬಾವಿಗೆ ತಳ್ಳಿದ ಕಳ್ಳ: ಆಸರೆಗೆ ಇದ್ದ ಹಗ್ಗವನ್ನು ಕತ್ತರಿಸಿದ ಪಾಪಿ: 21 ಗಂಟೆಗಳ ಕಾಲ ಹೋರಾಟ ನಡೆಸಿ ಬದುಕಿ ಬಂದ ಸಾಹಸಿ ಮಹಿಳೆ

ಕರಿಂನಗರ: ಕಳ್ಳನೊಬ್ಬ ಒಡವೆ, ಹಣ ದೋಚಿ ಸಾಕ್ಷಿ ನಾಶಪಡಿಸಲು 55 ವರ್ಷದ ಮಹಿಳೆಯೊಬ್ಬರನ್ನು ಬಾವಿಗೆ ತಳ್ಳಿದ ಘಟನೆ ತೆಲಂಗಾಣದ ಕರೀಂನಗರ ಜಿಲ್ಲೆಯಲ್ಲಿ ನಡೆದಿದೆ.

ಮಹಿಳೆಯನ್ನು ಬಾವಿಗೆ ತಳ್ಲಿದರೂ ಆಕೆ ೨೧ ಗಂಟೆಗಳ ಕಾಲ ಹೋರಾಡಿ ಸಾವಿನ ದವಡೆಯಿಂದ ಪಾರಾಗಿ ಬದುಕಿ ಬಂದಿದ್ದಾಲೆ. ಆಕೆಯ ಧೈರ್ಯ, ಸಾಹಸಕ್ಕೆ ಪೊಲೀಸರೇ ಅಚ್ಚರಿಗೊಂಡಿದ್ದು, 21 ವರ್ಷದ ಕಳ್ಳ ವಿದ್ಯಾರ್ಥಿಯನ್ನು ಬಂಧಿಸಿದ್ದಾರೆ.

ದಿನಗೂಲಿ ಕಾರ್ಮಿಕರಾದ ತಂಗರಾಲ ಲಕ್ಷ್ಮೀ ಎಂಬುವವರು ಜುಲೈ 1 ರಂದು ಕೆಲಸಕ್ಕೆ ಹೋಗಿ ಮನೆಗೆ ಮರಳದಿದ್ದಾಗ, ಅವರ ಮಗ ಪೊಲೀಸರಿಗೆ ನಾಪತ್ತೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಕರಾಳ ಸತ್ಯ ಹೊರಬಿದ್ದಿದೆ. ಆರೋಪಿ ಧಮ್ಮ ದಿನೇಶ್ ರೆಡ್ಡಿ (21) ಎಂಬಾತ ಲಕ್ಷ್ಮೀಗೆ ತನ್ನ ಜಮೀನಿನಲ್ಲಿ ಕೆಲಸ ಕೊಡುವುದಾಗಿ ನಂಬಿಸಿ, ಮೊದಲು ರಾಪಿಡೋ ಬೈಕ್‌ನಲ್ಲಿ ಹಾಗೂ ನಂತರ ತನ್ನದೇ ಬೈಕ್‌ನಲ್ಲಿ ಜನರಿಲ್ಲದ ನಿರ್ಜನ ಪ್ರದೇಶಕ್ಕೆ ಕರೆದೊಯ್ದಿದ್ದ. ಅಲ್ಲಿ ಲಕ್ಷ್ಮೀಯನ್ನು ಹೆದರಿಸಿ ಅವರಲ್ಲಿದ್ದ 5 ಗ್ರಾಂ ಚಿನ್ನ, 20 ಗ್ರಾಂ ಬೆಳ್ಳಿಯ ಕಾಲ್ಗೆಜ್ಜೆ ಹಾಗೂ ನಗದನ್ನು ದೋಚಿದ್ದ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದರೋಡೆ ಮಾಡಿದ ಬಳಿಕ ಯಾರೂ ತನ್ನನ್ನು ಕಂಡುಹಿಡಿಯಬಾರದೆಂದು ಆರೋಪಿ ದಿನೇಶ್ ರೆಡ್ಡಿ ಮಹಿಳೆಯನ್ನು ಆಳವಾದ ಕೃಷಿ ಬಾವಿಗೆ ತಳ್ಳಿದ್ದಾನೆ. ಬಾವಿಗೆ ಬಿದ್ದ ತಕ್ಷಣ ಲಕ್ಷ್ಮೀ ಅಲ್ಲಿದ್ದ ಹಗ್ಗವೊಂದನ್ನು ಗಟ್ಟಿಯಾಗಿ ಹಿಡಿದುಕೊಂಡಿದ್ದರು. ಇದನ್ನು ಗಮನಿಸಿದ ಕ್ರೂರಿ ಆರೋಪಿ, ಆಕೆ ಹೇಗೊ ಬದುಕುಳಿಯಬಾರದು ಎಂದು ಆ ಹಗ್ಗವನ್ನೂ ಕತ್ತರಿಸಿ ಅಲ್ಲಿಂದ ಪರಾರಿಯಾಗಿದ್ದ.

ಲಕ್ಷ್ಮೀ ಅವರಿಗೆ ಈಜು ಬರುತ್ತಿದ್ದ ಕಾರಣ ಬಾವಿಯ ನೀರಿನಲ್ಲಿ ತೇಲುತ್ತಾ, ಮೋಟಾರ್ ಪೈಪ್‌ಲೈನ್‌ಗೆ ಜೋಡಿಸಲಾಗಿದ್ದ ಮತ್ತೊಂದು ಕೇಬಲ್ ವೈರ್ ಅನ್ನು ಗಟ್ಟಿಯಾಗಿ ಹಿಡಿದುಕೊಂಡರು. ನಿರ್ಜನ ಪ್ರದೇಶವಾದ್ದರಿಂದ ಆಕೆಯ ಕಿರುಚಾಟ ಯಾರಿಗೂ ಕೇಳಿಸಲಿಲ್ಲ. ಹಾಗಾಗಿ ಇಡೀ ರಾತ್ರಿ ಕತ್ತಲಲ್ಲಿ, ಕೇವಲ ಆ ಕೇಬಲ್ ವೈರ್ ಆಸರೆಯಲ್ಲಿ ಸುಮಾರು 20 ರಿಂದ 21 ಗಂಟೆಗಳ ಕಾಲ ಸಾವಿನೊಂದಿಗೆ ಹೋರಾಡಿದರು. ಮರುದಿನ ಬೆಳಗ್ಗೆ ಸ್ಥಳೀಯ ರೈತರು ಬಾವಿಯಿಂದ ಶಬ್ದ ಕೇಳಿ ಆಕೆಯನ್ನು ರಕ್ಷಿಸಿ, ಪೊಲೀಸರಿಗೆ ಮಾಹಿತಿ ನೀಡಿದರು.

ಕರೀಂನಗರ ಪೊಲೀಸ್ ಆಯುಕ್ತ ಗೌಸ್ ಆಲಂ ನೇತೃತ್ವದ ವಿಶೇಷ ತಂಡವು ರಾಪಿಡೋ ಬುಕಿಂಗ್, ಸಿಸಿಟಿವಿ ದೃಶ್ಯಾವಳಿ ಹಾಗೂ ಮೊಬೈಲ್ ಕರೆಗಳ ತಾಂತ್ರಿಕ ತನಿಖೆ ನಡೆಸಿ ಆರೋಪಿ ಧಮ್ಮ ದಿನೇಶ್ ರೆಡ್ಡಿಯನ್ನು ಬಂಧಿಸಿದೆ. 21 ವರ್ಷದ ಈ ಕಾಲೇಜು ವಿದ್ಯಾರ್ಥಿ ಆನ್‌ಲೈನ್ ಜೂಜು ಹಾಗೂ ಬೆಟ್ಟಿಂಗ್ ಆ್ಯಪ್‌ಗಳಲ್ಲಿ ಬರೋಬ್ಬರಿ 4 ಲಕ್ಷ ರೂಪಾಯಿ ಕಳೆದುಕೊಂಡು ಸಾಲದ ಸುಳಿಗೆ ಸಿಲುಕಿದ್ದ. ಆ ಸಾಲ ತೀರಿಸಲು ಈ ದರೋಡೆ ಹಾಗೂ ಕೊಲೆ ಯತ್ನದ ಸಂಚು ರೂಪಿಸಿದ್ದಾಗಿ ಒಪ್ಪಿಕೊಂಡಿದ್ದಾನೆ. ಆರೋಪಿಯಿಂದ ಕದ್ದ ಒಡವೆಗಳನ್ನು ಖರೀದಿಸಿದ ಆಭರಣ ವ್ಯಾಪಾರಿಯನ್ನೂ ಪೊಲೀಸರು ಬಂಧಿಸಿದ್ದು, ಇಬ್ಬರನ್ನೂ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular