HomeLatest NewsShocking News: ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಕಳ್ಳತನ

Shocking News: ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಕಳ್ಳತನ

ಕಾರ್ಕಳದ ಪರಶುರಾಮ ಥೀಂ ಪಾರ್ಕ್‌ನಲ್ಲಿ ಕಳ್ಳತನ ನಡೆದಿದೆ. 2023ರ ವಿಧಾನಸಭೆ ಚುನಾವಣೆಗೂ ಮೊದಲು ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲಿರುವ ಥೀಂ ಪಾರ್ಕ್‌ ಉದ್ಘಾಟಿಸಿದ್ದರು. ಬಳಿಕ ವಿವಿಧ ಕಾರಣಕ್ಕೆ ಇದು ಭಾರೀ ಸುದ್ದಿಯಾಗಿತ್ತು.

ಕಾರ್ಕಳದ ಬಿಜೆಪಿ ಶಾಸಕ ಸುನೀಲ್ ಕುಮಾರ್ ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ನೀಡಿದ್ದಾರೆ. ಥೀಂ ಪಾರ್ಕ್‌ನ ಬಾಗಿಲನ್ನು ಒಡೆದು ಒಳನುಗ್ಗಿದ ದುಷ್ಕರ್ಮಿಗಳು ಮೇಲ್ಛಾವಣಿಗೆ ಹಾಕಿದ್ದ ತಾಮ್ರದ ಹೊದಿಕೆಗಳನ್ನು ಕಿತ್ತು ಕಳ್ಳತನ ಮಾಡಿದ್ದಾರೆ.

ಕಾರ್ಕಳದ ಇತಿಹಾಸದಲ್ಲಿ ಇದೊಂದು ದುರ್ದಿನ ಎಂದು ನಾನು ಭಾವಿಸುತ್ತೇನೆ. ನಮ್ಮ ಕ್ಷೇತ್ರವನ್ನು ರಾಜ್ಯದ ಶ್ರೇಷ್ಠ ಪ್ರವಾಸಿ ತಾಣವಾಗಿ ರೂಪಿಸಬೇಕೆಂಬ ಕನಸಿನೊಂದಿಗೆ ಪ್ರಾರಂಭಿಸಿದ ಈ ಮಹತ್ವಾಕಾಂಕ್ಷಿ ಯೋಜನೆ ಸ್ಥಳೀಯ ಕಾಂಗ್ರೆಸ್ ಮುಖಂಡ ಉದಯಕುಮಾರ್ ಶೆಟ್ಟಿಯವರ ದ್ವೇಷ ಹಾಗೂ ಅಸೂಯೆಯ ರಾಜಕಾರಣಕ್ಕೆ ಬಲಿಯಾಗಿ ಹೋಯ್ತು ಎಂದು ಶಾಸಕರು ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕಳೆದ ಎರಡು ವರ್ಷದಿಂದ ಈ ಯೋಜನೆಯ ಅಭಿವೃದ್ಧಿಗೆ ಬಿಡಿಕಾಸು ಬಿಡುಗಡೆಯಾಗದಂತೆ ಮಾಡಿ ಪರಶುರಾಮ ಥೀಂ ಪಾರ್ಕ್ ಅಕ್ಷರಶಃ ಪಾಳು ಬಿದ್ದು ಹೋಗುವಂತೆ ಮಾಡಿದರು. ಪ್ರವಾಸಿಗರು, ವಿದ್ಯಾರ್ಥಿಗಳು ಭೇಟಿಕೊಟ್ಟು ನಳನಳಿಸಬೇಕಿದ್ದ ಈ ಪ್ರವಾಸಿ ತಾಣ ಕಾಂಗ್ರೆಸ್ ನಾಯಕರ ರಾಜಕೀಯದಾಟದಿಂದಾಗಿ ಇಂದು ಕಳ್ಳರು ನುಗ್ಗಿ ಮೇಲ್ಛಾವಣಿಯನ್ನೇ ಕದ್ದೊಯ್ಯುವ ಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕರು ದೂರಿದ್ದಾರೆ.

ಬಹುಶಃ ಡಿಸಿಎಂ ಡಿ.ಕೆ.ಶಿವಕುಮಾರ್ ಹಾಗೂ ಉದಯ್ ಕುಮಾರ್ ಶೆಟ್ಟಿಯವರ ಹೊಟ್ಟೆ ಇಂದು ತಣ್ಣಗಾಗಿರಬಹುದು. ಮುಂದಿನ ಚುನಾವಣೆಯವರೆಗೂ ಪರಶುರಾಮ ಥೀಂ ಪಾರ್ಕ್ ಯೋಜನೆಯನ್ನು ಜೀವಂತವಾಗಿ ಇಡಬೇಕೆಂದು ಕಾರ್ಕಳಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಡಿ.ಕೆ.ಶಿವಕುಮಾರ್ ಅವರು ಕಾರ್ಕಳ ಕಾಂಗ್ರೆಸ್ ಪಟಾಲಂಗೆ ಫತ್ವಾ ಕೊಟ್ಟಿದ್ದರು. ಅದರ ಫಲವಾಗಿ ಘಜ್ನಿ, ಘೋರಿಗಳು ಹಿಂದು ಶ್ರದ್ಧಾ ಕೇಂದ್ರಗಳನ್ನು ಧ್ವಂಸ ಮಾಡಿದ ರೀತಿ ಥೀಂ ಪಾರ್ಕ್ ನಲ್ಲಿ ಕಳ್ಳತನವನ್ನೂ ನಡೆಸಿ ಪಾಳುಬೀಳಿಸಿದರು ಎಂದು ಶಾಸಕರು ಪೋಸ್ಟ್ ಹಾಕಿದ್ದಾರೆ.

ಅಷ್ಟಕ್ಕೂ ಈ ಪ್ರಕರಣದಲ್ಲಿ ಜಿಲ್ಲಾಡಳಿತದ ವೈಫಲ್ಯ ಎದ್ದು ಕಾಣುತ್ತಿದೆ. ಥೀಂ ಪಾರ್ಕ್‌ಗೆ ಸಾರ್ವಜನಿಕ ಪ್ರವೇಶವನ್ನು ನಿರಾಕರಿಸಿ ( ಸೆಪ್ಟೆಂಬರ್ 2023 ) ಸ್ಥಳೀಯ ಆಡಳಿತ ಆದೇಶ ಹೊರಡಿಸಿದ್ದರೂ ಕೆಲವರು ಕಾನೂನು ಬಾಹಿರವಾಗಿ ಇಲ್ಲಿಗೆ ಒಳನುಗ್ಗಿ ವಿಡಿಯೋ ಚಿತ್ರೀಕರಣ ನಡೆಸಿದ್ದರು. ‌ಇದೆಲ್ಲದರ ಮಧ್ಯೆಯೇ ಕಳ್ಳತನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಡಿಯೋ ಮಾಡಿದವರನ್ನೂ ವಿಚಾರಣೆಗೆ ಒಳಪಡಿಸುವ ಜತೆಗೆ ಕಳ್ಳತನ ನಡೆಸಿದ ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸುತ್ತೇನೆ. ಕಾರ್ಕಳದ ಪ್ರವಾಸೋದ್ಯಮಕ್ಕೆ ಕೊಳ್ಳಿ ಇಟ್ಟ ಕಾಂಗ್ರೆಸ್ ನಾಯಕರನ್ನು ಇತಿಹಾಸ ಕ್ಷಮಿಸದು ಎಂದು ಶಾಸಕರು ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಏನಿದು ಥೀಮ್ ಪಾರ್ಕ್: ಕಾರ್ಕಳವನ್ನು ಪ್ರಸಿದ್ಧ ಪ್ರವಾಸಿ ತಾಣವಾಗಿ ಮಾಡಬೇಕು ಎನ್ನುವ ಶಾಸಕ ಸುನೀಲ್ ಕುಮಾರ್ ಅವರ ಕನಸಿನ ಯೋಜನೆ ಪರಶುರಾಮ ಥೀಂ ಪಾರ್ಕ್. ಇದು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಬೈಲೂರಿನ ಉಮ್ಮಿಕಲ್ ಬೆಟ್ಟದ ಮೇಲಿದೆ.

ವಿಷ್ಣುವಿನ ಅವತಾರವಾದ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯನ್ನು ಪಾರ್ಕ್‌ ಹೊಂದಿದೆ ಮತ್ತು ಇದು ಭಜನಾ ಮಂದಿರ, ಮ್ಯೂಸಿಯಂ, ಆಂಫಿಥಿಯೇಟರ್ ಹಾಗೂ ಸುಂದರ ನೋಟಗಳನ್ನು ನೀಡುವ ಪ್ರವಾಸಿ ತಾಣ ಇದಾಗಿದೆ. ಆದರೆ ಪರಶುರಾಮನ 33 ಅಡಿ ಎತ್ತರದ ಕಂಚಿನ ಪ್ರತಿಮೆಯೇ ಇಲ್ಲಿ ವಿವಾದಕ್ಕೆ ಕಾರಣವಾಗಿತ್ತು. ಇದಕ್ಕೆ ಬಳಕೆ ಮಾಡಿರುವ ಕಂಚು ನಕಲಿ ಎಂದು ದೊಡ್ಡ ಜಟಾಪಟಿಯೇ ನಡೆದಿತ್ತು.

2023ರ ಚುನಾವಣೆ ಬಳಿಕ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಈ ಕುರಿತು ತನಿಖೆ ನಡೆಸಲು ಆದೇಶಿಸಲಾಗಿತ್ತು. ಪ್ರವಾಸಿ ತಾಣವಾಗಿ ಜನರನ್ನು ಸೆಳೆಯಬೇಕಿದ್ದ ಪಾರ್ಕ್ ವಿವಿಧ ಕಾರಣಕ್ಕೆ ಸುದ್ದಿಯಾಗುತ್ತಲೇ ಇದೆ. ಕಳ್ಳತನ ಪ್ರಕರಣದ ಕುರಿತು ಪೊಲೀಸರು ಇದುವರೆಗೂ ಯಾವುದೇ ಹೇಳಿಕೆ ನೀಡಿಲ್ಲ.

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular