ಭಾರತದ ಐಟಿ ಕ್ಷೇತ್ರವು ಇಷ್ಟು ದಿನ “ಔಟ್ಸೋರ್ಸಿಂಗ್” (Outsourcing) ಮಾದರಿಯ ಮೇಲೆ ಬೆಳೆದಿತ್ತು. ಅಂದರೆ, ವಿದೇಶಿ ಕಂಪನಿಗಳ ಸಣ್ಣಪುಟ್ಟ ತಾಂತ್ರಿಕ ಕೆಲಸಗಳನ್ನು ಭಾರತೀಯರು ಮಾಡುತ್ತಿದ್ದರು. ಈಗ Generative AI (ChatGPT, Claude, ಇತ್ಯಾದಿ) ತಂತ್ರಜ್ಞಾನಗಳು ಕೋಡಿಂಗ್ ಮಾಡುವುದು, ಡೇಟಾ ಎಂಟ್ರಿ ಮತ್ತು ವರದಿ ಸಿದ್ಧಪಡಿಸುವ ಕೆಲಸವನ್ನು ಮನುಷ್ಯರಿಗಿಂತ ವೇಗವಾಗಿ ಮಾಡುತ್ತಿವೆ. ಇದರಿಂದ ಕಂಪನಿಗಳು ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ಬದಲು AI ಮೊರೆ ಹೋಗುತ್ತಿವೆ. 2025-26ರ ಆರ್ಥಿಕ ಸಮೀಕ್ಷೆಯು ಭಾರತದ ಐಟಿ ವಲಯ ಮತ್ತು ‘ವೈಟ್ ಕಾಲರ್’ ಉದ್ಯೋಗಗಳ ಕುರಿತು ಗಂಭೀರ ಎಚ್ಚರಿಕೆಯನ್ನು ನೀಡಿದೆ.
ಜೆನೆರೇಟಿವ್ ಎಐ (Generative AI) ತಂತ್ರಜ್ಞಾನದ ಬೆಳವಣಿಗೆಯಿಂದಾಗಿ ಭಾರತೀಯ ಐಟಿ ಉದ್ಯೋಗಿಗಳು ಹೆಚ್ಚಿನ ಅಪಾಯ ಎದುರಿಸುತ್ತಿದ್ದಾರೆ. ಇಲ್ಲಿಯವರೆಗೆ ವಿದೇಶಿ ಕಂಪನಿಗಳು ಸಾಮಾನ್ಯ ಕೆಲಸಗಳಿಗಾಗಿ ಭಾರತೀಯರನ್ನು ಔಟ್ಸೋರ್ಸಿಂಗ್ ಮೂಲಕ ಬಳಸಿಕೊಳ್ಳುತ್ತಿದ್ದವು. ಆದರೆ ಈಗ ಅಂತಹ ಕೆಲಸಗಳನ್ನು ಎಐ ಮೂಲಕ ಮಾಡಲಾಗುತ್ತಿರುವುದರಿಂದ ಒಂದು “ನಿಶ್ಯಬ್ದ ಬದಲಾವಣೆ” ನಡೆಯುತ್ತಿದೆ ಎಂದು ಸಮೀಕ್ಷೆ ತಿಳಿಸಿದೆ
* ಆರ್ಥಿಕ ವೃದ್ಧಿ ಇದೆ, ಆದರೆ ಉದ್ಯೋಗಗಳಿಲ್ಲ
ಅಮೆರಿಕದ ಉದ್ಯೋಗ ಮಾರುಕಟ್ಟೆಯನ್ನು ಉದಾಹರಣೆಯಾಗಿ ನೀಡಿರುವ ಸಮೀಕ್ಷೆಯು, 2022ರ ನಂತರ ಎಐ ಪರಿಕರಗಳ ಬಳಕೆ ಹೆಚ್ಚಾದಂತೆ ಜಿಡಿಪಿ (GDP) ಬೆಳೆಯುತ್ತಿದ್ದರೂ, ಅದಕ್ಕೆ ಪೂರಕವಾಗಿ ಉದ್ಯೋಗಗಳ ಸಂಖ್ಯೆ ಹೆಚ್ಚುತ್ತಿಲ್ಲ ಎಂದು ಗಮನಿಸಿದೆ. ಇದನ್ನು “ವೀಕನ್ಡ್ ಮಾರ್ಜಿನಲ್ ರಸ್ಪಾನ್ಸಿವ್ನೆಸ್” (Weakened Marginal Responsiveness) ಎಂದು ಕರೆಯಲಾಗಿದೆ. ಅಂದರೆ, ಆರ್ಥಿಕತೆ ಬೆಳೆದ ತಕ್ಷಣ ಉದ್ಯೋಗಗಳು ಬೆಳೆಯುತ್ತವೆ ಎಂಬ ಹಳೆಯ ಲೆಕ್ಕಾಚಾರ ಈಗ ತಪ್ಪುತ್ತಿದೆ.
* ಬ್ಯಾಕ್-ಆಫೀಸ್ ಮಾಡೆಲ್’ಗೆ ಸಂಚಕಾರ
ಭಾರತವು ಕಳೆದ ಹಲವು ದಶಕಗಳಿಂದ ಕಡಿಮೆ ವೆಚ್ಚದಲ್ಲಿ ಉತ್ತಮ ಐಟಿ ಸೇವೆಗಳನ್ನು (Back-office services) ನೀಡುವ ಮೂಲಕ ಲಾಭ ಗಳಿಸಿತ್ತು. ಆದರೆ ಈಗ ಎಐ ಇದೇ ಕೆಲಸವನ್ನು ಇನ್ನೂ ವೇಗವಾಗಿ ಮತ್ತು ಕಡಿಮೆ ವೆಚ್ಚದಲ್ಲಿ ಮಾಡುತ್ತಿದೆ. ಇದರಿಂದಾಗಿ ಭಾರತವು ನಂಬಿಕೊಂಡಿರುವ ಸಾಂಪ್ರದಾಯಿಕ ಐಟಿ ಮಾದರಿಯು ತೀವ್ರ ಸಂಕಷ್ಟಕ್ಕೆ ಸಿಲುಕಿದೆ.
ಯಾವ ಉದ್ಯೋಗಗಳಿಗೆ ಹೆಚ್ಚು ಅಪಾಯ?
• ಮಾಹಿತಿ ಸಂಗ್ರಹಣೆ (Information Retrieval)
• ವಿಷಯಗಳ ಸಾರಾಂಶ ಸಿದ್ಧಪಡಿಸುವುದು (Summarization)
• ಪದೇ ಪದೇ ಮಾಡುವ ವ್ಯವಹಾರದ ಕೆಲಸಗಳು (Repetitive Business Tasks)
• ವೈಟ್ ಕಾಲರ್ ಉದ್ಯೋಗಗಳು
ಸರ್ಕಾರದ ಹಸ್ತಕ್ಷೇಪದ ಅಗತ್ಯ
ಈ ಪರಿಸ್ಥಿತಿಯನ್ನು ಎದುರಿಸಲು ಸರ್ಕಾರವು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸಮೀಕ್ಷೆ ಸೂಚಿಸಿದೆ. ಇದಕ್ಕಾಗಿ “ಎಐ ಎಕನಾಮಿಕ್ ಕೌನ್ಸಿಲ್” (AI Economic Council) ಸ್ಥಾಪಿಸಲು ಪ್ರಸ್ತಾಪಿಸಲಾಗಿದೆ. ಈ ಕೌನ್ಸಿಲ್ ಎಐನಿಂದ ಉದ್ಯೋಗಗಳ ಮೇಲೆ ಆಗುವ ಪರಿಣಾಮವನ್ನು ಅಂದಾಜಿಸಿ, ಉದ್ಯೋಗ ರಕ್ಷಣೆಗಾಗಿ ಮಾರ್ಗಸೂಚಿಗಳನ್ನು ಸಿದ್ಧಪಡಿಸಬೇಕು ಎಂದು ವರದಿ ತಿಳಿಸಿದೆ.
ಐಟಿ ಉದ್ಯೋಗಗಳು ಸಂಪೂರ್ಣವಾಗಿ ಮಾಯವಾಗುವುದಿಲ್ಲ, ಆದರೆ ಅವುಗಳ ಸ್ವರೂಪ ಬದಲಾಗುತ್ತಿದೆ. ಹಳೆಯ ತಂತ್ರಜ್ಞಾನಕ್ಕೆ ಅಂಟಿಕೊಂಡಿರುವವರಿಗೆ ಅಪಾಯ ಹೆಚ್ಚು, ಹೊಸತನ್ನು ಕಲಿಯುವವರಿಗೆ ಅವಕಾಶಗಳು ಹೆಚ್ಚು.ಐಟಿ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಇದು ಒಂದು ಎಚ್ಚರಿಕೆಯ ಗಂಟೆಯಾಗಿದ್ದು, ಹೊಸ ಕೌಶಲ್ಯಗಳನ್ನು ಕಲಿಯುವುದು ಅನಿವಾರ್ಯವಾಗಿದೆ.

