ಉತ್ತರ ಪ್ರದೇಶದ ಕನ್ನೌಜ್ ಜಿಲ್ಲೆಯ ಸರ್ಕಾರಿ ಶಾಲೆಯ ಇಬ್ಬರು ಶಿಕ್ಷಕರ ವಿರುದ್ಧ ಅನೈತಿಕ ಸಂಬಂಧ ಹೊಂದಿದ್ದಾರೆಯೆಂಬ ಆರೋಪ ಕೇಳಿಬಂದಿದ್ದು, ಶಾಲೆಯೊಳಗೆ ಅಳವಡಿಸಲಾಗಿದ್ದ ಹಿಡನ್ ಕ್ಯಾಮೆರಾದಲ್ಲಿ ಇಬ್ಬರೂ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎನ್ನಲಾಗಿದೆ. ಈ ಘಟನೆ ಬೆಳಕಿಗೆ ಬಂದ ಬಳಿಕ ಶಾಲಾ ಆಡಳಿತ ಇಬ್ಬರನ್ನೂ ಅಮಾನತುಗೊಳಿಸಿದ್ದು, ಶಿಕ್ಷಣ ಇಲಾಖೆ ತನಿಖೆಗೆ ಆದೇಶಿಸಿದೆ.
ವರದಿಗಳ ಪ್ರಕಾರ, ಪುರುಷ ಶಿಕ್ಷಕರ ಪತ್ನಿಗೆ ತನ್ನ ಪತಿಯ ವರ್ತನೆಯ ಬಗ್ಗೆ ಅನುಮಾನ ಮೂಡಿತ್ತು. ಪ್ರತೀ ಭಾನುವಾರ ಹಾಗೂ ರಜೆ ದಿನಗಳಲ್ಲಿಯೂ “ಹೆಚ್ಚುವರಿ ತರಗತಿ” ಅಥವಾ “ಕಚೇರಿ ಕೆಲಸ” ಇದೆ ಎಂದು ಹೇಳಿ ಶಾಲೆಗೆ ತೆರಳುತ್ತಿದ್ದ ಪತಿಯನ್ನು ಪ್ರಶ್ನಿಸಿದಾಗ, ಆತ ಕೋಪಗೊಂಡು ಆರೋಪಗಳನ್ನು ತಳ್ಳಿಹಾಕುತ್ತಿದ್ದನೆಂದು ತಿಳಿದುಬಂದಿದೆ.
ಶಾಲಾ ಸಿಬ್ಬಂದಿಯಿಂದ ಸಿಕ್ಕ ಸುಳಿವು
ಕೆಲವು ಶಾಲಾ ಸಿಬ್ಬಂದಿ, ಪತಿ ಮತ್ತು ಸಹೋದ್ಯೋಗಿ ಮಹಿಳಾ ಶಿಕ್ಷಕಿ ನಡುವೆ ಅನೈತಿಕ ಸಂಬಂಧವಿದೆ ಎಂದು ಪತ್ನಿಗೆ ಮಾಹಿತಿ ನೀಡಿದರೆಂದು ವರದಿಯಾಗಿದೆ. ಆದರೆ ಯಾವುದೇ ಸಾಕ್ಷ್ಯ ಇಲ್ಲದ ಕಾರಣ ಆರೋಪ ಸಾಬೀತುಪಡಿಸಲು ಸಾಧ್ಯವಾಗಿರಲಿಲ್ಲ.
ಹಿಡನ್ ಕ್ಯಾಮೆರಾ ಅಳವಡಿಸಿದ ಪತ್ನಿ
ಸತ್ಯ ತಿಳಿದುಕೊಳ್ಳಲು ಪತ್ನಿ ಆನ್‌ಲೈನ್‌ನಲ್ಲಿ ಹಿಡನ್ ಕ್ಯಾಮೆರಾ ಕುರಿತು ಮಾಹಿತಿ ಸಂಗ್ರಹಿಸಿ, ಒಂದು ಕ್ಯಾಮೆರಾವನ್ನು ಖರೀದಿಸಿದಳು. ಬಳಿಕ ಶಾಲೆಯ ಸಿಬ್ಬಂದಿಯೊಬ್ಬರ ಸಹಾಯದಿಂದ ತರಗತಿ ಕೊಠಡಿ ಹಾಗೂ ಸಿಬ್ಬಂದಿ ಕೊಠಡಿಯಲ್ಲಿ ರಹಸ್ಯ ಕ್ಯಾಮೆರಾಗಳನ್ನು ಅಳವಡಿಸಿದ್ದಾಳೆ ಎನ್ನಲಾಗಿದೆ.ಒಂದು ವಾರದ ಬಳಿಕ ಕ್ಯಾಮೆರಾಗಳನ್ನು ತೆಗೆದುಕೊಂಡು ಅದರಲ್ಲಿದ್ದ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ವಿದ್ಯಾರ್ಥಿಗಳಿಲ್ಲದ ವೇಳೆ ಇಬ್ಬರು ಶಿಕ್ಷಕರು ತರಗತಿ ಕೊಠಡಿಯಲ್ಲಿ ಆಕ್ಷೇಪಾರ್ಹ ಸ್ಥಿತಿಯಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.
ದೂರು ಸಲ್ಲಿಕೆ, ಅಮಾನತು
ಪತ್ನಿ ಆ ವಿಡಿಯೋಗಳನ್ನು ಶಾಲಾ ಆಡಳಿತ ಹಾಗೂ ಜಿಲ್ಲಾ ಶಿಕ್ಷಣಾಧಿಕಾರಿಗೆ ಸಲ್ಲಿಸಿ ದೂರು ನೀಡಿದ್ದಾಳೆ. ಈ ವಿಚಾರ ತಿಳಿಯುತ್ತಿದ್ದಂತೆಯೇ ಪೋಷಕರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಶಾಲೆಗೆ ಆಗಮಿಸಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.ಪ್ರಾಥಮಿಕ ಪರಿಶೀಲನೆಯ ಬಳಿಕ ಶಾಲಾ ಆಡಳಿತ ಇಬ್ಬರು ಶಿಕ್ಷಕರನ್ನೂ ಅಮಾನತುಗೊಳಿಸಿದೆ. ಘಟನೆಯ ಸತ್ಯಾಸತ್ಯತೆ ತಿಳಿಯಲು ಜಿಲ್ಲಾ ಶಿಕ್ಷಣಾಧಿಕಾರಿ ಅಧಿಕೃತ ತನಿಖೆಗೆ ಆದೇಶಿಸಿದ್ದಾರೆ. ವರದಿಗಳ ಪ್ರಕಾರ, ಈ ಘಟನೆ ಬಳಿಕ ಪತ್ನಿ ತನ್ನ ಪತಿಯನ್ನು ಮನೆಯಿಂದ ಹೊರಹೋಗುವಂತೆ ಸೂಚಿಸಿದ್ದಾಳೆ.

