ಶಾಲಾ ಶಿಕ್ಷಣ ಇಲಾಖೆ ಆಯುಕ್ತರ ಕಛೇರಿ ಶಿಕ್ಷಕರ ವರ್ಗಾವಣೆ ಸಂಬಂಧ ಜ್ಞಾಪನಾ ಪತ್ರವನ್ನು ಹೊರಡಿಸಿದೆ. ಈ ಪತ್ರ 2025-26ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ಪೂರ್ವಭಾವಿ ಚಟುವಟಿಕೆಗಳ ಭಾಗವಾಗಿ ಡಿಸೆಂಬರ್ 2025ರ ಅಂತ್ಯಕ್ಕೆ ಶಿಕ್ಷಕರ ದೇಯಟೇಜ್ ಅಂಕಗಳನ್ನು (Weighted score) ತಂತ್ರಾಂಶದಲ್ಲಿ ಪ್ರಕಟಿಸಿರುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ 2025-26ನೇ ಸಾಲಿನ ಶಿಕ್ಷಕರ ಸಾಮಾನ್ಯ ವರ್ಗಾವಣೆ ಸಂಬಂಧ ದತ್ತಾಂಶಗಳ ಇಂಡೀಕರಣ, ಶಿಕ್ಷಕರ ವೇಟೆಡ್ ಅಂಕಗಳ ಪ್ರಕಟಣೆ, ಆಕ್ಷೇಪಣೆ ಸ್ವೀಕಾರ, ಸದರಿ ಅಕ್ಷೇವಣೆಗಳನ್ನು ಡಿ.ಡಿ.ಒ ರವರು ದಾಖಲೆಗಳೊಂದಿಗೆ ಪರಿಶೀಲನೆ ಮತ್ತು ಸರಿಯಾದ ಮಾಹಿತಿಯನ್ನು ತಂತ್ರಾಂಶದಲ್ಲಿ ಇಂದೀಕರಣ ಮಾಡಬೇಕಾಗಿರುತ್ತದೆ.
ತದನಂತರ ದತ್ತಾಂಶಗಳನ್ನು ಸ್ಥಿರೀಕರಿಸಿ ಮುಂದಿನ ಚಟುವಟಿಕೆಗಳಾದ ನಿರ್ದಿಷ್ಟಪಡಿಸಿದ ಹುದ್ದೆಗಳಿಗೆ ಒಳಬರುವವರಿಗೆ ಆಯ್ಕೆ ಪ್ರಕ್ರಿಯೆ, ವಲಯ ವರ್ಗಾವಣೆ (Zonal Transfer), ತದನಂತರ ಸಾಮಾನ್ಯ ವರ್ಗಾವಣೆಗೆ ವೇಳಾಪಟ್ಟಿ ಬಿಡುಗಡೆ ಮಾಡಬೇಕಾಗಿರುತ್ತದೆ.
ಇದರ ಭಾಗವಾಗಿ ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ನಿಯಮಗಳು, 2020ರ ನಿಯಮ 4ರಂತೆ, ಶಾಲಾ ಶಿಕ್ಷಣ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ/ ಪ್ರೌಢಶಾಲಾ ಸಹಶಿಕ್ಷಕರ ಮತ್ತು ತತ್ಸಮಾನ ವೃಂದಗಳ ಹಾಗೂ ಮುಖ್ಯ ಶಿಕ್ಷಕರ ಮತ್ತು ತತ್ಸಮಾನ ವೃಂದಗಳ ಡಿಸೆಂಬರ್ ತಿಂಗಳವರೆಗೂ ನವೀಕರಿಸಿದ ಶಿಕ್ಷಕರ ಸೇವಾ ವಿವರದ ಆಧಾರದ ಮೇಲೆ ಗಣನೆಗೆ ತೆಗೆದುಕೊಂಡು ಕರಡು ವೇಟೆಡ್ ಅಂಕಗಳನ್ನು ಪ್ರಕಟಿಸಬೇಕಾಗಿರುತ್ತದೆ.
ಅದರಂತೆ ದಿಸಂಬರ್ 2025ರ ಅಂತ್ಯಕ್ಕೆ ಶಿಕ್ಷಕರ ಕರಡು ಸೇವಾ ಅಂಕಗಳನ್ನು (wighted score) ಇ.ಇ.ಡಿ.ಎಸ್. ತಂತ್ರಾಂಶದಲ್ಲಿನ ಶಿಕ್ಷಕರ ಲಾಗಿನ್, ಶಿಕ್ಷಕರ ವರ್ಗಾವಣಾ ತಂತ್ರಾಂಶದ BEO ರವರ ಲಾಗಿನ್ ಹಾಗೂ ಇಲಾಖಾ ವೆಬ್‌ಸೈಟ್ ನಲ್ಲಿ ಪ್ರಕಟಿಸಲಾಗಿದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದ ಎಲ್ಲಾ ಉಪನಿರ್ದೇಶಕರಿಗೆ ಸೂಚನೆಗಳನ್ನು ನೀಡಬಹುದಾಗಿರುತ್ತದೆ.
- ಪ್ರಕಟಿತ ಸೇವಾ ಅಂಶಗಳನ್ನು (Weighted Score) ಪರಿಶೀಲಿಸಿಕೊಳ್ಳಲು ಎಲ್ಲಾ ಶಿಕ್ಷಕರುಗಳಿಗೆ ಸಂಬಂಧಿತ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಡಿ.ಡಿ.ಒ ರವರು ಮಾಹಿತಿ ನೀಡುವುದು. ಎಲ್ಲಾ ಶಿಕ್ಷಕರು ತಮ್ಮ ಸೇವಾ ಅಂಕಗಳನ್ನು ಪರಿಶೀಲಿಸಿಕೊಂಡು ಯಾವುದೇ ವ್ಯತ್ಯಾಸಗಳು ಇದ್ದಲ್ಲಿ ಪೂರಕ ದಾಖಲೆಗಳೊಂದಿಗೆ ಸಂಬಂಧಪಟ್ಟ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ/ ವೇತನ ಬಟವಾಡೆ ಮಾಡುವ ಅಧಿಕಾರಿಗಳಿಗೆ (DOC) ಸೇವಾ ಅಂಶಗಳನ್ನು ಸರಿಪಡಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಸಲ್ಲಿಸಲು ತಿಳಿಸಿದೆ.
- ಕ್ಷೇತ್ರ ಶಿಕ್ಷಣಾಧಿಕಾರಿಗಳು/ ವೇತನ ಬಟವಾಡೆ ಮಾಡುವ ಅಧಿಕಾರಿಗಳು (DDO) ಶಿಕ್ಷಕರು ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಅಗತ್ಯವಿದ್ದಲ್ಲಿ ತಿದ್ದುಪಡಿ ಮಾಡುವುದು ಮತ್ತು ಶಿಕ್ಷಕರು ಸಲ್ಲಿಸಿದ ದಾಖಲೆಗಳನ್ನು ಹಾಗೂ ತಿದ್ದುಪಡಿ ಮಾಡಿ ಸರಿಪಡಿಸಿದ ಮಾಹಿತಿಯನ್ನು ತಮ್ಮಲ್ಲಿ ಕಾಯ್ದಿರಿಸಿಕೊಂಡು ಮುಂದಿನ ದಿನಗಳಲ್ಲಿ ಅಗತ್ಯವಿದ್ದಲ್ಲಿ ಹಾಜರುಪಡಿಸಲು ಸೂಚಿಸಿದೆ.
ಮುಂದುವರೆದು, ಕರ್ನಾಟಕ ರಾಜ್ಯ ಸಿವಿಲ್ ಸೇವೆಗಳು (ಶಿಕ್ಷಕರ ವರ್ಗಾವಣೆ ನಿಯಂತ್ರಣ) ಅಧಿನಿಯಮ, 2020 ರ ಸೆಕ್ಷನ್ 5 ರಂತೆ 2025-26 ನೇ ಸಾಲಿನಲ್ಲಿ ವಲಯ ವರ್ಗಾವಣೆಯನ್ನು ಕೈಗೊಳ್ಳಬೇಕಿರುತ್ತದೆ. ವಲಯ ವರ್ಗಾವಣೆಗೆ ಶಾಲಾ ವಲಯದ ಮಾಹಿತಿ ಅತ್ಯಗತ್ಯವಾಗಿರುತ್ತದೆ.
ಈ ಸಂಬಂಧ ಶಿಕ್ಷಕರು ಕರ್ತವ್ಯ ನಿರ್ವಹಿಸುತ್ತಿರುವ ಸ್ಥಳಗಳ ವಲಯದಲ್ಲಿ ಸ್ಥಳೀಯವಾಗಿ ಸರ್ಕಾರವು ಕಾಲಕಾಲಕ್ಕೆ ಪುನರ್‌ವಿಂಗಡನೆ/ ಮೇಲ್ದರ್ಜೆಗೆ ಏರಿಸಿದ ಪ್ರಕರಣಗಳಿದ್ದಲ್ಲಿ ಶಾಲೆಗಳ ವಲಯ ಬದಲಾವಣೆಯಾಗಿರುವ ಸಾಧ್ಯತೆಗಳಿರುತ್ತವೆ.
ಇಂತಹ ಸಂದರ್ಭದಲ್ಲಿ ಸದರಿ ಬದಲಾವಣೆಗಳಿಗೆ ಸಂಬಂಧಿಸಿದ ಸರ್ಕಾರದ ಆದೇಶಗಳನ್ನು ಪರಿಶೀಲಿಸಿ ಖಚಿತಪಡಿಸಿಕೊಂಡು ಅಗತ್ಯವಿದ್ದಲ್ಲಿ ಮಾತ್ರ ತಂತ್ರಾಂಶದಲ್ಲಿ ವಲಯ ಬದಲಾವಣೆಯನ್ನು ಇಂದೀಕರಿಸುವುದು.
ಈ ಸಂಬಂಧ ಯಾವುದೇ ಲೋಪದೋಷ ಉಂಟಾದಲ್ಲಿ ಸಂಬಂಧಿಸಿದ ವೇತನ ಬಟವಾಡೆ ಅಧಿಕಾರಿಗಳು (DDO) ಜವಾಬ್ದಾರರಾಗಿರುತ್ತಾರೆ. ಸದರಿ ತಿದ್ದುಪಡಿಗಳಿಗೆ ತಂತ್ರಾಂಶದಲ್ಲಿ ಕಾಲಾವಕಾಶ ಕಲ್ಪಿಸಲಾಗಿದ್ದು, ತದನಂತರ ತಂತ್ರಾಂಶದಲ್ಲಿ ಯಾವುದೇ ಬದಲಾವಣೆಗೆ ಅವಕಾಶವಿರುವುದಿಲ್ಲ ಎಂದು ತಿಳಿಸಿದೆ.

