ಮುಂಬೈ: ಬಾಲಿವುಡ್ನ ಸ್ಟಾರ್ ನಟಿ, ಯಶಸ್ವಿ ಉದ್ಯಮಿ ಶಿಲ್ಪಾ ಶೆಟ್ಟಿ ಕುಂದ್ರಾ ಅವರು ತಮ್ಮ ಮಣ್ಣಿನ ಮೇಲಿನ ಪ್ರೀತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮುಂಬೈನ ಪ್ರತಿಷ್ಠಿತ ಬಾಂದ್ರಾ ಪ್ರದೇಶದಲ್ಲಿ ಶಿಲ್ಪಾ ಶೆಟ್ಟಿ ಹೊಸದಾಗಿ ಆರಂಭಿಸಿರುವ ಬಾಸ್ಟಿಯನ್ ಅಮ್ಮ ಕೈ (Bastian Amma Kai) ರೆಸ್ಟೋರೆಂಟ್ ಈಗ ಕನ್ನಡಿಗರ ಹೆಮ್ಮೆಯ ಕೇಂದ್ರಬಿಂದುವಾಗಿದೆ.ತಮ್ಮ ತಾಯ್ನಾಡಾದ ಕರ್ನಾಟಕದ ರುಚಿಯನ್ನು ಜಾಗತಿಕ ಮಟ್ಟದ ವೇದಿಕೆಯಲ್ಲಿ ಪರಿಚಯಿಸಲು ಶಿಲ್ಪಾ ಶೆಟ್ಟಿ ಈ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ.
ಹೆಸರಿನಲ್ಲೇ ಇದೆ ಅಮ್ಮನ ಪ್ರೀತಿ
ಬಾಸ್ಟಿಯನ್ ಹೋಟೆಲ್ ಸರಣಿಯು ಸಾಮಾನ್ಯವಾಗಿ ಶ್ರೀಮಂತರ ಮತ್ತು ಸೆಲೆಬ್ರಿಟಿಗಳ ನೆಚ್ಚಿನ ತಾಣ. ಆದರೆ, ಬಾಸ್ಟಿಯನ್ ಅಮ್ಮ ಕೈ ಹೆಸರಿನ ಈ ಹೊಸ ರೆಸ್ಟೋರೆಂಟ್ ಮಧ್ಯಮ ಮತ್ತು ಮೇಲ್ಮಧ್ಯಮ ವರ್ಗದವರಿಗೂ ಎಟುಕುವಂತೆ ರೂಪಿಸಲಾಗಿದೆ. ಅಮ್ಮ ಕೈ ಎಂದರೆ ತಾಯಿಯ ಕೈರುಚಿ ಎಂದರ್ಥ. ಕರಾವಳಿ ಭಾಗದ ಮನೆಗಳಲ್ಲಿ ಸವಿಯುವ ಅಪ್ಪಟ ದೇಸಿ ರುಚಿಯನ್ನು ಇಲ್ಲಿ ನೀಡಲಾಗುತ್ತಿದೆ.
ಮೆನುವಿನಲ್ಲಿ ಕರ್ನಾಟಕದ ಮ್ಯಾಪ್ ಕನ್ನಡಕ್ಕೇ ಪ್ರಥಮ ಆದ್ಯತೆ
ಈ ಹೋಟೆಲ್ನ ಅತ್ಯಂತ ಆಕರ್ಷಕ ವಿಷಯವೆಂದರೆ ಅದರ ಮೆನು ಕಾರ್ಡ್. ಮೆನು ಕಾರ್ಡ್ನಲ್ಲಿ ವಿಶೇಷವಾಗಿ ಕರ್ನಾಟಕದ ಮ್ಯಾಪ್ (Map) ಅನ್ನು ಮುದ್ರಿಸುವ ಮೂಲಕ ತಮ್ಮ ಮೂಲವನ್ನು ಹೆಮ್ಮೆಯಿಂದ ಪ್ರದರ್ಶಿಸಿದ್ದಾರೆ ಅಷ್ಟೇ ಅಲ್ಲದೆ, ಪ್ರತಿಯೊಂದು ಖಾದ್ಯದ ಹೆಸರನ್ನು ಹಿಂದಿ ಅಥವಾ ಇಂಗ್ಲಿಷ್ಗಿಂತ ಹೆಚ್ಚಾಗಿ ಅಚ್ಚ ಕನ್ನಡದಲ್ಲೇ ಬರೆಯಲಾಗಿದೆ.
ಮುಂಬೈನಲ್ಲಿ ಸಾಮಾನ್ಯವಾಗಿ ಮಿರ್ಚಿ ಬಜಿ ಎನ್ನುವ ಖಾದ್ಯಕ್ಕೆ ಇಲ್ಲಿ ಮೆಣಸಿನಕಾಯಿ ಬಜ್ಜಿ ಎಂದೇ ಹೆಸರಿಡಲಾಗಿದೆ.
ಸಾಬೂದಾನ ವಡಾ ಬದಲಿಗೆ ಸಬ್ಬಕ್ಕಿ ವಡೆ ಎಂದು ಬರೆಯುವ ಮೂಲಕ ಕನ್ನಡ ಭಾಷೆಯ ಸೊಗಡನ್ನು ಎತ್ತಿ ಹಿಡಿಯಲಾಗಿದೆ.
ಕರಾವಳಿಯಿಂದ ಮಲೆನಾಡಿನವರೆಗೆ ವೈವಿಧ್ಯಮಯ ರುಚಿ
ಕರ್ನಾಟಕದ ವಿವಿಧ ಜಿಲ್ಲೆಗಳ ಜನಪ್ರಿಯ ಖಾದ್ಯಗಳನ್ನು ಒಂದೇ ಸೂರಿನಡಿ ತರಲಾಗಿದೆ. ಇಲ್ಲಿನ ಪ್ರಮುಖ ಆಕರ್ಷಣೆಗಳೆಂದರೆ:
ದೋಸೆ ವೈವಿಧ್ಯ: ಮೈಸೂರು ಮಸಾಲೆ ದೋಸೆ ಮತ್ತು ದಾವಣಗೆರೆ ಬೆಣ್ಣೆ ದೋಸೆ.
ನಾನ್-ವೆಜ್ ಪ್ರಿಯರಿಗೆ: ಮಂಗಳೂರು ಚಿಕನ್ ಘೀ ರೋಸ್ಟ್, ಬಂಗುಡೆ ಪುಳಿಮುಂಚಿ, ಕೂರ್ಗಿ ಪಂದಿ ಕರಿ (Pork Curry) ಮತ್ತು ಮಂಗಳೂರು ಚಿಕನ್ ಸುಕ್ಕಾ.
ಸಸ್ಯಾಹಾರಿಗಳಿಗೆ: ಬಿಸಿಬೇಳೆ ಬಾತ್, ನೀರ್ ದೋಸೆ ಮತ್ತು ಮೈಸೂರು ಮಸಾಲ ಮೊಟ್ಟೆ ಬುರ್ಜಿ.
ಮುಂಬೈನಲ್ಲಿ ಕನ್ನಡಿಗರ ಹೆಮ್ಮೆ
ಶಿಲ್ಪಾ ಶೆಟ್ಟಿ ಮಂಗಳೂರು ಮೂಲದವರಾಗಿದ್ದರೂ ಬೆಳೆದಿದ್ದೆಲ್ಲ ಮುಂಬೈನಲ್ಲೇ. ಆದರೂ ತಮ್ಮ ಬೇರನ್ನು ಮರೆಯದ ಅವರು, ಮುಂಬೈನ ಹೃದಯಭಾಗದಲ್ಲಿ ಕರ್ನಾಟಕದ ಸಂಸ್ಕೃತಿ ಮತ್ತು ಆಹಾರವನ್ನು ಪ್ರಚಾರ ಮಾಡುತ್ತಿರುವುದು ಶ್ಲಾಘನೀಯ. ಈ ರೆಸ್ಟೋರೆಂಟ್ ಕೇವಲ ಆಹಾರಕ್ಕಷ್ಟೇ ಸೀಮಿತವಾಗದೆ, ಕರ್ನಾಟಕದ ಪ್ರವಾಸೋದ್ಯಮ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಒಂದು ಕಿರು ಮಾದರಿಯಂತೆ ಕಾಣಿಸುತ್ತಿದೆ.ಈಗಾಗಲೇ ಐಶಾರಾಮಿ ಹೋಟೆಲ್ಗಳನ್ನು ಹೊಂದಿರುವ ಶಿಲ್ಪಾ, ಈ ರೆಸ್ಟೋರೆಂಟ್ ಅನ್ನು ಮೇಲ್ಮಧ್ಯಮ ವರ್ಗದವರಿಗೂ ಎಟುಕುವಂತೆ ರೂಪಿಸಿದ್ದಾರೆ

