ಶಿವಪುರಿ : ಪ್ರಧಾನಿ ನರೇಂದ್ರ ಮೋದಿ ಅವರ ಮಾತಿನ ಶೈಲಿಯನ್ನು ಅಣಕಿಸಿ, ಅಡುಗೆ ಅನಿಲ (LPG) ಬೆಲೆ ಏರಿಕೆ ಕುರಿತು ವ್ಯಂಗ್ಯಾತ್ಮಕ ವಿಡಿಯೋ ಮಾಡಿದ್ದ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕ ಸಾಕೇತ್ ಪುರೋಹಿತ್ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಘಟನೆಯ ಹಿನ್ನೆಲೆ:
ಶಿವಪುರಿ ಜಿಲ್ಲೆಯ ಪೋಹರಿ ಬ್ಲಾಕ್‌ನ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿರುವ ಸಾಕೇತ್ ಪುರೋಹಿತ್, ಇತ್ತೀಚೆಗೆ ಸಾಮಾಜಿಕ ಸಭೆಯೊಂದರಲ್ಲಿ ಪ್ರಧಾನಿ ಮೋದಿ ಅವರ ಮಿಮಿಕ್ರಿ ಮಾಡಿದ್ದರು. ಈ ವೇಳೆ ಅವರು, “ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದಾಗಿ ಜನರು ಮತ್ತೆ ಹಳೆಯ ಸೌದೆ ಒಲೆಗಳ ಬಳಕೆಗೆ ಮರಳಲಿದ್ದಾರೆ, ಇದು ಶ್ರೀಮಂತರು ಮತ್ತು ಬಡವರ ನಡುವಿನ ಅಂತರವನ್ನು ಕಡಿಮೆ ಮಾಡುತ್ತದೆ” ಎಂಬರ್ಥದಲ್ಲಿ ವ್ಯಂಗ್ಯವಾಡಿದ್ದರು ಎನ್ನಲಾಗಿದೆ. ಈ 58 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿತ್ತು.
https://www.instagram.com/reel/DV-wKDvEheM/?utm_source=ig_web_copy_link&igsh=MzRlODBiNWFlZA==
ಅಮಾನತಿಗೆ ಕಾರಣ:
ವಿಡಿಯೋ ವೈರಲ್ ಬೆನ್ನಲ್ಲೇ ಪಿಚೋರ್ ವಿಧಾನಸಭಾ ಕ್ಷೇತ್ರದ ಬಿಜೆಪಿ ಶಾಸಕ ಪ್ರೀತಂ ಲೋಧಿ ಅವರು ಜಿಲ್ಲಾ ಶಿಕ್ಷಣ ಇಲಾಖೆಗೆ ಲಿಖಿತ ದೂರು ನೀಡಿದ್ದರು. “ಸರ್ಕಾರಿ ನೌಕರರಾಗಿ ದೇಶದ ಪ್ರಧಾನ ಮಂತ್ರಿಯನ್ನು ಸಾರ್ವಜನಿಕವಾಗಿ ಅಣಕಿಸುವುದು ಮತ್ತು ಟೀಕಿಸುವುದು ನಾಗರಿಕ ಸೇವಾ ನಡಾವಳಿ ನಿಯಮಗಳ (Service Conduct Rules) ಉಲ್ಲಂಘನೆಯಾಗಿದೆ” ಎಂದು ಅವರು ದೂರಿದ್ದರು.
ಈ ದೂರಿನ ಅನ್ವಯ ತನಿಖೆ ನಡೆಸಿದ ಜಿಲ್ಲಾ ಶಿಕ್ಷಣಾಧಿಕಾರಿ ವಿವೇಕ್ ಶ್ರೀವಾಸ್ತವ ಅವರು, ಶಿಕ್ಷಕ ಸಾಕೇತ್ ಪುರೋಹಿತ್ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ಅಮಾನತ್ತಿನ ಅವಧಿಯಲ್ಲಿ ಅವರನ್ನು ಬದರ್ವಾಸ್ ಬ್ಲಾಕ್ ಶಿಕ್ಷಣ ಕಚೇರಿಗೆ ನಿಯೋಜಿಸಲಾಗಿದೆ.ಸರ್ಕಾರಿ ನಿಯಮಗಳಿಗೆ ಅನುಸಾರವಾಗಿ, ಮಧ್ಯಪ್ರದೇಶ ನಾಗರಿಕ ಸೇವೆಗಳ ಕಾಯ್ದೆ, 1965ರ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಇಲಾಖೆ ತಿಳಿಸಿದೆ.
ಶಿಕ್ಷಕ ಸಾಕೇತ್ ಪುರೋಹಿತ್ ಪ್ರತಿಕ್ರಿಯೆ:
ಈ ಕ್ರಮದ ಕುರಿತು ಪ್ರತಿಕ್ರಿಯಿಸಿರುವ ಶಿಕ್ಷಕ ಸಾಕೇತ್, “ನಾನು ಕೇವಲ ಜನರ ಮುಖದಲ್ಲಿ ನಗು ತರಿಸಲು ಮಿಮಿಕ್ರಿ ಮಾಡಿದ್ದೆ. ಯಾವುದೇ ದುರುದ್ದೇಶ ನನಗಿರಲಿಲ್ಲ. ನನಗೆ ಯಾವುದೇ ಶೋಕಾಸ್ ನೋಟಿಸ್ ನೀಡದೆ ಅಥವಾ ನನ್ನ ವಿವರಣೆ ಕೇಳದೆ ಏಕಪಕ್ಷೀಯವಾಗಿ ಅಮಾನತು ಮಾಡಿರುವುದು ಸರಿಯಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

