ಬೆಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಕಾರ್ಯದಲ್ಲಿ ಬೂತ್ ಮಟ್ಟದ ಅಧಿಕಾರಿ (BLO) ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸರ್ಕಾರಿ ಶಾಲೆಯ ಶಿಕ್ಷಕರೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದು, ಅತಿಯಾದ ಕೆಲಸದ ಒತ್ತಡವೇ ಸಾವಿಗೆ ಕಾರಣ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಮೃತರನ್ನು ಕುರುಬರಹಳ್ಳಿಯ ಸರ್ಕಾರಿ ಶಾಲಾ ಶಿಕ್ಷಕಿ ಶಮಂತ ಕುಮಾರಿ (44) ಎಂದು ಗುರುತಿಸಲಾಗಿದೆ. ಇತ್ತೀಚೆಗೆ ಬಿಎಲ್ ಒ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದರು. ಗುರುವಾರ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಮೃತ ಶಿಕ್ಷಕರು ಕಳೆದ ಹಲವು ದಿನಗಳಿಂದ ಮನೆ-ಮನೆಗೆ ತೆರಳಿ ಮತದಾರರ ಪರಿಶೀಲನೆ, ದಾಖಲೆಗಳ ಸಂಗ್ರಹ, ಆನ್‌ಲೈನ್ ಅಪ್‌ಲೋಡ್ ಸೇರಿದಂತೆ ವಿವಿಧ SIR ಸಂಬಂಧಿತ ಕೆಲಸಗಳಲ್ಲಿ ನಿರಂತರವಾಗಿ ತೊಡಗಿಸಿಕೊಂಡಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ನಿಗದಿತ ಗಡುವಿನೊಳಗೆ ಕೆಲಸ ಪೂರ್ಣಗೊಳಿಸುವ ಒತ್ತಡದಿಂದ ಅವರು ತೀವ್ರ ಮಾನಸಿಕ ಹಾಗೂ ದೈಹಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು ಆರೋಪಿಸಲಾಗಿದೆ.
ಕುಟುಂಬಸ್ಥರ ಪ್ರಕಾರ, ಕೆಲಸದ ಒತ್ತಡದ ನಡುವೆಯೇ ಶಿಕ್ಷಕರಿಗೆ ಹೃದಯಾಘಾತ ಉಂಟಾಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರು. ಈ ಹಿನ್ನೆಲೆಯಲ್ಲಿ ಸರ್ಕಾರ ಹಾಗೂ ಚುನಾವಣಾ ಅಧಿಕಾರಿಗಳು ಪ್ರಕರಣದ ಬಗ್ಗೆ ಸೂಕ್ತ ತನಿಖೆ ನಡೆಸಿ, ಕುಟುಂಬಕ್ಕೆ ಪರಿಹಾರ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

