ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ವಿರುದ್ಧ ಜೆನ್ಝೀ ವಿದ್ಯಾರ್ಥಿಗಳು ನಡೆಸಿದ ಪ್ರತಿಭಟನೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರೇ ಸ್ವತಃ ಪ್ರತಿಕ್ರಿಯಿಸುವಂತೆ ಮಾಡಿದೆ. ನಿನ್ನೆ ತಡರಾತ್ರಿ ಈ ಕುರಿತು ಲೈವ್ ವಿಡಿಯೊ ಹಂಚಿಕೊಳ್ಳುವ ಮೂಲಕ ನರೇಂದ್ರ ಮೋದಿ ತಪ್ಪಿತಸ್ಥರು ಯಾರೇ ಆದರೂ ಬಿಡುವುದಿಲ್ಲ, ಕಠಿಣ ಕ್ರಮ ಖಚಿತ ಎಂದಿದ್ದು, ವಿದ್ಯಾರ್ಥಿಗಳ ಭವಿಷ್ಯಕ್ಕಿಂತ ಮಿಗಿಲಾದದ್ದು ಇನ್ನೇನೂ ಇಲ್ಲ ಎಂದಿದ್ದಾರೆ.
ಹೀಗೆ ಕೆಲ ದಿನಗಳ ಹಿಂದೆ ಸುಮ್ಮನಿದ್ದ ಕೇಂದ್ರ ಸರ್ಕಾರವೇ ತಮ್ಮ ಹೋರಾಟಕ್ಕೆ ಪ್ರತಿಕ್ರಿಯಿಸುವ ಹಾಗೆ ಮಾಡಿದ ಪ್ರತಿಭಟನಾನಿರತ ವಿದ್ಯಾರ್ಥಿಗಳು ತಮ್ಮ ಹಠ ಸಾಧಿಸಿದ್ದು, ಅವರ ಹೋರಾಟಕ್ಕೆ ಎಲ್ಲೆಡೆ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದೆ.
ಕೇವಲ ದೆಹಲಿ ಮಾತ್ರವಲ್ಲದೇ ದೇಶದ ಇತರೆ ನಗರಗಳಲ್ಲೂ ಸಹ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದು, ಮಹಾ ನಗರ ಮುಂಬೈನಲ್ಲಿಯೂ ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ನಡೆದಿದೆ. ಈ ವೇಳೆ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿ ಕರೆದೊಯ್ಯುತ್ತಿದ್ದ ವಾಹನವನ್ನು ಯುವತಿಯೋರ್ವಳು ಏಕಾಂಗಿಯಾಗಿ ತಡೆದು ನಿಲ್ಲಿಸಿದ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.
ಏಕಾಂಗಿಯಾಗಿ ವಾಹನ ತಡೆದು ನಿಲ್ಲಿಸಿ ಪ್ರತಿಭಟನಾಕಾರರನ್ನು ಕೆಳಗಿಳಿಸುವವರೆಗೂ ಸ್ಥಳದಿಂದ ಹೋಗದೇ ವಾಹನದ ಮೇಲೆ ಕೈ ಇಟ್ಟೇ ನಿಂತಿದ್ದ ಈಕೆಯನ್ನು ವೀರ ಯುವತಿ ಎಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಮಾಡಲಾಯಿತು. ಅಲ್ಲದೇ ಈಕೆ ಯಾರು ಎಂಬ ಹುಡುಕಾಟವೂ ಆರಂಭವಾಯಿತು.
ಇನ್ನು ಯುವತಿಯನ್ನು ಸುದ್ದಿ ವಾಹಿನಿಯೊಂದು ಮಾತನಾಡಿಸಿದ್ದು, ಆಕೆಯ ಹೆಸರು ರಿಯಾ ಅಯಿರ್ ಎಂಬುದು ತಿಳಿದುಬಂದಿದೆ. ರಿಯಾ ಓರ್ವ ಮಾಡೆಲ್ ಹಾಗೂ ಸೋಷಿಯಲ್ ಮೀಡಿಯಾ ಇನ್ಫ್ಲುಯೆನ್ಸರ್ ಆಗಿದ್ದು, ಆಕೆಗೆ ಒಂದು ಲಕ್ಷ ಅನುಯಾಯಿಗಳು ಇನ್ಸ್ಟಾಗ್ರಾಮ್ ಖಾತೆಯಲ್ಲಿದ್ದರು. ಈ ಘಟನೆ ಬಳಿಕ ಆಕೆ ವೈರಲ್ ಆಗಿದ್ದು, ಈಗ ಆಕೆಯ ಫಾಲೋವರ್ಸ್ ಸಂಖ್ಯೆ ಒಂದು ಲಕ್ಷದ ಅರವತ್ತು ಸಾವಿರ ತಲುಪಿದೆ.

