ಶಿವಮೊಗ್ಗ: ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಬಳೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕ ಧನಂಜಯ(51) ಶಾಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮಂಗಳವಾರ ಬೆಳಿಗ್ಗೆ ಗ್ರಾಮಕ್ಕೆ ಆಗಮಿಸಿದ್ದ ಶಿಕ್ಷಕ ನಂಜಯ್ಯ ಮತದಾರರ ಪಟ್ಟಿ ಪರಿಷ್ಕರಣೆ ಕಾರ್ಯದಲ್ಲಿ ತೊಡಗಿಕೊಂಡಿದ್ದರು. ನಂತರ ಶಾಲೆಗೆ ಆಗಮಿಸಿದ ಅವರು ಮಕ್ಕಳಿಗೆ ಪಾಠ ಮಾಡಿದ್ದಾರೆ. ವಿರಾಮದ ವೇಳೆಯಲ್ಲಿ ಶಾಲಾ ಕೊಠಡಿಯಲ್ಲಿದ್ದ ವಿದ್ಯಾರ್ಥಿಗಳಿಗೆ ದಾಖಲೆ ಬರೆಯಬೇಕಿದೆ ಎಂದು ಹೇಳಿ ಹೊರಗೆ ಕಳುಹಿಸಿ ಬಾಗಿಲು, ಕಿಟಕಿ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ವಿದ್ಯಾರ್ಥಿಗಳು ಶಾಲೆಯ ಕಟ್ಟೆಯ ಮೇಲೆ ಕುಳಿತಿರುವುದನ್ನು ಗಮನಿಸಿದ ಉಳಿದ ಇತರೆ ಶಿಕ್ಷಕರು ವಿಚಾರಿಸಿದ್ದಾರೆ. ಈ ವೇಳೆ ಅನುಮಾನ ಬಂದು ಕಿಟಕಿ ತೆಗೆದು ನೋಡಿದಾಗ ಶಿಕ್ಷಕ ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಗ್ರಾಮಸ್ಥರೊಂದಿಗೆ ಸೇರಿ ಬಾಗಿಲು ಒಡೆದು ಪ್ರಥಮ ಚಿಕಿತ್ಸೆ ನೀಡಿ ಧನಂಜಯ ಅವರನ್ನು ಬದುಕಿಸುವ ಪ್ರಯತ್ನ ಮಾಡಲಾಗಿದೆ. ಆದರೆ ಪ್ರಯೋಜನವಾಗಿಲ್ಲ.
ಧನಂಜಯ ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಮೂಲತಃ ಹೊನ್ನಾಳಿ ತಾಲೂಕಿನ ಜೇನಹಳ್ಳಿ ಗ್ರಾಮದವರಾದ ಧನಂಜಯ ಹೊನ್ನಾಳಿಯಲ್ಲಿ ನೆಲೆಸಿದ್ದರು. ಶಿಕಾರಿಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

