ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (ಟಿಸಿಎಸ್) ಕರ್ನಾಟಕದಲ್ಲಿ 2.9 ಬಿಲಿಯನ್ ಡಾಲರ್ ಮೊತ್ತದ ಹೂಡಿಕೆ ಮಾಡಲಿದೆ. ಇದರ ಭಾಗವಾಗಿ ಬೆಂಗಳೂರು ನಗರದಲ್ಲಿ ಟಿಸಿಎಸ್‌ನ ಹೊಸ ಕ್ಯಾಂಪಸ್ ನಿರ್ಮಾಣವಾಗಲಿದೆ.
ಫೆಬ್ರವರಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಅಧ್ಯಕ್ಷ ಬನ್ಮಾಲಿ ಅಗರ್ವಾಲಾ ನೇತೃತ್ವದ ನಿಯೋಗವು ಭೇಟಿ ಮಾಡಿತ್ತು. ಆಗ ಹೂಡಿಕೆಯ ಕುರಿತು ಚರ್ಚೆಯನ್ನು ಮಾಡಿದೆ.
ಟಿಸಿಎಸ್ ಬೆಂಗಳೂರು ನಗರದ ವೈಟ್‌ಫೀಲ್ಡ್‌ನಲ್ಲಿ ಹೊಸ ಕ್ಯಾಂಪಸ್ ನಿರ್ಮಾಣ ಮಾಡಲಿದೆ. ಇಲ್ಲಿ 25,000 ಉದ್ಯೋಗಿಗಳು ಒಟ್ಟಿಗೆ ಕೆಲಸ ಮಾಡುವಷ್ಟು ಸಾಮರ್ಥ್ಯದ ಮೂಲ ಸೌಕರ್ಯವನ್ನು ಒದಗಿಸಲಾಗುತ್ತದೆ.
ಮುಖ್ಯಮಂತ್ರಿಗಳ ಭೇಟಿ ಸಂದರ್ಭದಲ್ಲಿ ಟಾಟಾ ಸಮೂಹವು ಹೊಂದಿರುವ 1.36 ಲಕ್ಷಕ್ಕೂ ಹೆಚ್ಚು ಉದ್ಯೋಗಿಗಳು ಮತ್ತು ಕರ್ನಾಟಕದಲ್ಲಿ ಮಾಡಲಿರುವ ಹೂಡಿಕೆಯ ಕುರಿತು ವಿವರವಾಗಿ ಚರ್ಚಿಸಿದರು.
ಸೆಮಿಕಂಡಕ್ಟರ್ ವಿಸ್ತರಣೆ, ವೈಟ್‌ಫೀಲ್ಡ್‌ನಲ್ಲಿ ಹೊಸ ಕ್ಯಾಂಪಸ್, ವಾಯುಯಾನ ನಿರ್ವಹಣೆ, ದುರಸ್ತಿ ಮತ್ತು ಕಾರ್ಯಾಚರಣೆ ಹಬ್, ನವೀಕರಿಸಬಹುದಾದ ಇಂಧನ ಯೋಜನೆಗಳು ಮತ್ತು ರಕ್ಷಣಾ ಉತ್ಪಾದನಾ ಉಪಕ್ರಮ ಸೇರಿದಂತೆ ಮುಂಬರುವ ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಕರ್ನಾಟಕದಲ್ಲಿ ಟಿಸಿಎಸ್ ಟಾಟಾ ಕನ್ಸ್ಯೂಮರ್ ಪ್ರಾಡಕ್ಟ್ಸ್ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಅತಿ ಹೆಚ್ಚು ನೇರ ಉದ್ಯೋಗ ನೀಡುವ ಸಂಸ್ಥೆಗಳಾಗಿವೆ. ಟಿಸಿಎಸ್, ಟಾಟಾ ಎಲೆಕ್ಟ್ರಾನಿಕ್ಸ್ ಮತ್ತು ಟಾಟಾ ಮೋಟಾರ್ಸ್ ಸಂಸ್ಥೆಗಳು ಗಣನೀಯ ಪ್ರಮಾಣದಲ್ಲಿ ಪರೋಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತಿವೆ.
ಪ್ರಸ್ತುತ ಈ ಸಮೂಹವು ರಾಜ್ಯದ 27 ಕಂಪನಿಗಳಲ್ಲಿ 1,36,600ಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದ್ದು, ಒಟ್ಟು ಸುಮಾರು $5 ಬಿಲಿಯನ್ ಹೂಡಿಕೆಯನ್ನು ಮಾಡಿದೆ. ಮುಂದಿನ ದಿನಗಳಲ್ಲಿ ಟಾಟಾ ಸಮೂಹವು ಕರ್ನಾಟಕದಲ್ಲಿ ತನ್ನ ಹೂಡಿಕೆಯನ್ನು ಮತ್ತಷ್ಟು ವಿಸ್ತರಿಸಲು ಹೊಸ ಯೋಜನೆಗಳನ್ನು ಘೋಷಿಸಿದೆ.
ಹೊಸ ಪ್ರಸ್ತಾವನೆಗಳಲ್ಲಿ ಭಾರತದ ದಕ್ಷಿಣ ಭಾಗದ ಮೊದಲ ವಾಯುಯಾನ ಮತ್ತು ಎಂಆರ್‌ಒ ಹಬ್, ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್ ಅಸೆಂಬ್ಲಿ ಹಾಗೂ ಪ್ಯಾಕೇಜಿಂಗ್ ಘಟಕಗಳು ಮತ್ತು ಮುಂದಿನ ಐದು ವರ್ಷಗಳಲ್ಲಿ 2,500 ಮೆಗಾವ್ಯಾಟ್‌ಗೂ ಅಧಿಕ ನವೀಕರಿಸಬಹುದಾದ ಇಂಧನ ಸಾಮರ್ಥ್ಯದ ಸೇರ್ಪಡೆಗಳು ಸೇರಿವೆ.
ಟಿಸಿಎಸ್ ವೈಟ್‌ಫೀಲ್ಡ್‌ನಲ್ಲಿ 25,000 ಆಸನಗಳ ಸಾಮರ್ಥ್ಯದ ಹೊಸ ಕ್ಯಾಂಪಸ್ ನಿರ್ಮಿಸಲು ಯೋಜಿಸಿದೆ. ಟಾಟಾ ಎಲೆಕ್ಟ್ರಾನಿಕ್ಸ್ ತನ್ನ ಎಲೆಕ್ಟ್ರಾನಿಕ್ಸ್ ಮ್ಯಾನುಫ್ಯಾಕ್ಚರಿಂಗ್ ಸರ್ವಿಸಸ್ ಮತ್ತು ಸೆಮಿಕಂಡಕ್ಟರ್ ಅಸೆಂಬ್ಲಿ ಹಾಗೂ ಪರೀಕ್ಷಾ ಸೌಲಭ್ಯಗಳನ್ನು ಎರಡು ವರ್ಷಗಳಲ್ಲಿ ವಿಸ್ತರಿಸಲಿದೆ.

