HomeKarnatakaಅಂಬೇಡ್ಕರ್‌ ಆಶಯಗಳ ಸಾಕಾರವೇ ಪ್ರಜಾಪ್ರಭುತ್ವಕ್ಕೆ ನಿಜವಾದ ಗೌರವ: ಸಚಿವ ಶಿವರಾಜ್ ತಂಗಡಗಿ

ಅಂಬೇಡ್ಕರ್‌ ಆಶಯಗಳ ಸಾಕಾರವೇ ಪ್ರಜಾಪ್ರಭುತ್ವಕ್ಕೆ ನಿಜವಾದ ಗೌರವ: ಸಚಿವ ಶಿವರಾಜ್ ತಂಗಡಗಿ

ಬೆಂಗಳೂರು- ಸಂವಿಧಾನ ನೀಡಿರುವ ಸಮಾನತೆ, ಸಾಮಾಜಿಕ ನ್ಯಾಯ ಹಾಗೂ ಸ್ವಾತಂತ್ರ್ಯದ ಆಶಯಗಳನ್ನು ಎತ್ತಿಹಿಡಿಯುವ ಮೂಲಕ ಪ್ರಜಾಪ್ರಭುತ್ವವನ್ನು ಮತ್ತಷ್ಟು ಬಲಪಡಿಸಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಅವರು ತೋರಿದ ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್. ತಂಗಡಗಿ ಹೇಳಿದರು.

ಅಂಬೇಡ್ಕರ್ ಅವರ ಇಂದಿಗೂ ಆದರ್ಶಗಳು

ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ಬ್ಯಾಕ್ವೆಂಟ್ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಜಾಪ್ರಭುತ್ವವೆಂದರೆ ಕೇವಲ ಒಂದು ದಿನದ ಆಚರಣೆಯಲ್ಲ. ಅದು ನಮ್ಮ ಸಂವಿಧಾನ, ಹಕ್ಕುಗಳು ಮತ್ತು ಜವಾಬ್ದಾರಿಗಳನ್ನು ಪ್ರತಿಯೊಬ್ಬರೂ ಅರಿತುಕೊಳ್ಳುವ ನಿರಂತರ ಪ್ರಕ್ರಿಯೆಯಾಗಿದೆ ಎಂದರು.

ಭಾರತದ ಪ್ರಜಾಪ್ರಭುತ್ವದ ಶಕ್ತಿ ಎಂದರೆ ಅಧಿಕಾರ ಯಾರೊಬ್ಬರ ಸ್ವತ್ತಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಗಳೇ ಪ್ರಭುಗಳು. ಜನರ ಮತದಿಂದ ಸರ್ಕಾರ ರಚನೆಯಾಗುತ್ತದೆ ಮತ್ತು ಜನರಿಗಾಗಿ ಸರ್ಕಾರ ಕೆಲಸ ಮಾಡಬೇಕು ಎಂಬುದು ಸಂವಿಧಾನದ ಆಶಯವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಭಾರತದ ಪ್ರಜಾಪ್ರಭುತ್ವದ ಶಕ್ತಿಯ ಕುರಿತು ಮಾತನಾಡುವಾಗ ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರನ್ನು ಸ್ಮರಿಸದೇ ಇರಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರು ನಮಗೆ ಕೇವಲ ಕಾನೂನು ಪುಸ್ತಕವನ್ನು ನೀಡಲಿಲ್ಲ; ಸಮಾನತೆ ಮತ್ತು ಸಾಮಾಜಿಕ ನ್ಯಾಯದ ದಾರಿಯನ್ನು ತೋರಿಸಿದರು. ಜಾತಿ, ಧರ್ಮ, ಭಾಷೆ, ಪ್ರದೇಶ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ನಾಗರಿಕನಿಗೂ ಗೌರವಯುತ ಬದುಕು ದೊರೆಯಬೇಕು ಎಂಬುದು ಅವರ ಆಶಯವಾಗಿತ್ತು ಎಂದರು.

ಅಂಬೇಡ್ಕರ್ ಅವರ ಜೀವನ ಮತ್ತು ಸಾಧನೆ

ಸಾಮಾಜಿಕವಾಗಿ ತುಳಿತಕ್ಕೊಳಗಾದ ಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್ ಅವರು ಬಾಲ್ಯದಿಂದಲೇ ಅಸಮಾನತೆ ಮತ್ತು ಅವಮಾನವನ್ನು ಎದುರಿಸಿದರು. ಆದರೆ ಆ ನೋವನ್ನೇ ತಮ್ಮ ಶಕ್ತಿಯನ್ನಾಗಿ ಮಾಡಿಕೊಂಡು, ವಿಶ್ವದ ಅತ್ಯುತ್ತಮ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದು ಜ್ಞಾನ ಮತ್ತು ವಿಚಾರಧಾರೆಯ ಮೂಲಕ ಸಮಾಜಕ್ಕೆ ಹೊಸ ದಾರಿ ತೋರಿಸಿದರು. ‘ಶಿಕ್ಷಣ ಪಡೆಯಿರಿ, ಸಂಘಟಿತರಾಗಿ, ಹೋರಾಡಿರಿ’ ಎಂಬ ಅವರ ಸಂದೇಶ ಇಂದಿಗೂ ಕೋಟ್ಯಂತರ ಜನರಿಗೆ ಸ್ಫೂರ್ತಿಯಾಗಿದೆ. ಈ ದೇಶಕ್ಕೆ ಅಂಬೇಡ್ಕರ್ ಅವರು ಸಂವಿಧಾನ ಕೊಡುಗೆಯಾಗಿ ನೀಡಿದ ಪರಿಣಾಮ ಇಂದು

ನಾನು ಇಲ್ಲಿ ನಿಂತು ಮಾತನಾಡುತ್ತಿದ್ದೇನೆ ಎಂದರು.

ಅಂಬೇಡ್ಕರ್‌ ಅವರು ಜಾತಿ, ಧರ್ಮ, ಲಿಂಗ ಹಾಗೂ ಆರ್ಥಿಕ ಸ್ಥಿತಿಯ ಯಾವುದೇ ಭೇದವಿಲ್ಲದೆ ಪ್ರತಿಯೊಬ್ಬ ಭಾರತೀಯನೂ ಸಮಾನ ಎಂಬ ಮಹತ್ವದ ತತ್ವವನ್ನು ಸಂವಿಧಾನದ ಮೂಲಕ ಗಟ್ಟಿಗೊಳಿಸಿದರು.‌ ಅಂಬೇಡ್ಕರ್ ಅವರು ಕೇವಲ ಸಂವಿಧಾನ ಶಿಲ್ಪಿಯಲ್ಲ; ಅವರು ಸಾಮಾಜಿಕ ನ್ಯಾಯದ ಮಹಾನ್ ಹೋರಾಟಗಾರ, ಶೋಷಿತರ ಧ್ವನಿ, ಸಮಾನತೆಯ ಪ್ರತಿಪಾದಕ ಹಾಗೂ ಆಧುನಿಕ ಭಾರತದ ನಿರ್ಮಾತೃಗಳಲ್ಲಿ ಒಬ್ಬರು. ಇಂದು ನಾವು ಅನುಭವಿಸುತ್ತಿರುವ ಪ್ರಜಾಪ್ರಭುತ್ವದ ಹಕ್ಕುಗಳು ಮತ್ತು ಸ್ವಾತಂತ್ರ್ಯದ ಹಿಂದೆ ಅವರ ದೂರದೃಷ್ಟಿ ಹಾಗೂ ಪರಿಶ್ರಮದ ದೊಡ್ಡ ಕೊಡುಗೆಯಿದೆ ಎಂದು ತಿಳಿಸಿದರು.

ಅಂಬೇಡ್ಕರ್ ಅವರನ್ನು ಸ್ಮರಿಸುವುದೆಂದರೆ ಕೇವಲ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡುವುದಲ್ಲ. ಅವರು ತೋರಿದ ಸಮಾನತೆ, ಸಾಮಾಜಿಕ ನ್ಯಾಯ ಮತ್ತು ಸಂವಿಧಾನದ ಮಾರ್ಗದಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದು ಸಚಿವ ಶಿವರಾಜ್ ತಂಗಡಗಿ ಹೇಳಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular