ಚೆನ್ನೈ: ತಮಿಳುನಾಡು ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ವಿವಿಧ ರಾಜಕೀಯ ಪಕ್ಷಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆಯಲ್ಲಿ ತೊಡಗಿದ್ದಾರೆ. ತಮಿಳುನಾಡು ಚುನಾವಣೆಯಲ್ಲಿ ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿರುವ ಟಿವಿಕೆ ಸಂಸ್ಥಾಪಕ, ನಟ ದಳಪತಿ ವಿಜಯ್, ಪರೆಂಬೂರಿನ ಬಳಿಕ ಇಂದು ಪೂರ್ವ ತಿರುಚ್ಚಿ ಕ್ಷೇತ್ರದಲ್ಲಿಯೂ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ.
ನಾಮಪತ್ರ ಸಲ್ಲಿಕೆಗೂ ಮುನ್ನ ವಿಜಯ್ ವಿಮಾನ ನಿಲ್ದಾಣದಿಂದ ರೋಡ್ಶೋ ನಡೆಸಿದರು. ಈ ವೇಳೆ, ತಮ್ಮ ನೆಚ್ಚಿನ ನಾಯಕನನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಸೇರಿದ್ದರು. ಈ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಸಣ್ಣ ಅಪಘಾತಕ್ಕೀಡಾದ ದ್ವಿಚಕ್ರ ವಾಹನ ಸವಾರನಿಗೆ ವಿಜಯ್ ತಮ್ಮ ಬೆಂಗಾವಲು ವಾಹನದಿಂದ ಕೆಳಗಿಳಿದು ಹೋಗಿ ಸಹಾಯ ಮಾಡಿ ಮಾನವೀಯತೆ ಮೆರೆದಿದ್ದಾರೆ.
ಬಳಿಕ ವಿಜಯ್ ನಾಪತ್ರ ಸಲ್ಲಿಕೆ ಮಾಡಿದರು. ತಿರುಚ್ಚಿಯಲ್ಲಿ ವಿಜಯ್ ಎಸ್ ಇರುದಯರಾಜ್, ವಿರುದ್ಧ ಸ್ಪರ್ಧಿಸುತ್ತಿದ್ದಾರೆ. ನಾಮಪತ್ರ ಸಲ್ಲಿಕೆ ಬಳಿಕ ಎಐಎಡಿಎಂಕೆ ಸಂಸ್ಥಾಪಕ ಎಂಜಿ ರಾಮಚಂದ್ರನ್ ಪುತ್ಥಳಿಗೆ ಮಾಲಾರ್ಪಣೆ ಮಾಡಿ, ನಮನ ಸಲ್ಲಿಸಿದರು.
ನಾಮಪತ್ರ ಸಲ್ಲಿಕೆ ಬಳಿಕ ಸಾರ್ವಜನಿಕ ಸಭೆಯಲ್ಲಿ ಜನರನ್ನು ಉದ್ದೇಶಿಸಿ ಮಾತನಾಡಿದ ವಿಜಯ್, ಡಿಎಂಕೆ ಸರ್ಕಾರ, ಈ ಹಿಂದೆ ತಾನು ಕೊಟ್ಟಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ವಿಫಲವಾಗಿದೆ. ಡಿಎಂಕೆ ದುಷ್ಟ ಪಡೆಯಾಗಿದೆ. ಅದು ಜನಸಾಮಾನ್ಯ ಸುರಕ್ಷತೆ ಅಥವಾ ಮೂಲಭೂತ ಸೌಕರ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ. ಇದನ್ನು ನಾವು ಕಿತ್ತೆಸೆಯಬೇಕು ಎಂದು ಟೀಕಾ ಪ್ರಕಾರ ನಡೆಸಿದರು.
ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ಇದೇ ಮೊದಲ ಬಾರಿಗೆ ಸ್ಪರ್ಧೆಗೆ ಇಳಿದಿರುವ ನಟ ವಿಜಯ್ ಮಾರ್ಚ್ 30ರಂದು ತಮ್ಮ ಪಕ್ಷದ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ್ದರು. ಅದರಲ್ಲಿ ಮಾದಕ ದ್ರವ್ಯ ರಕ್ಷಣಾ ವಲಯ ಮತ್ತು ವಿದ್ಯಾರ್ಥಿಗಳಿಗೆ ಮಾಸಿಕ ಅನುದಾನ ನೀಡುವ ಘೋಷಣೆ ಮಾಡಿದ್ದರು.
ತಮಿಳುನಾಡನ್ನು ಮಾದಕ ದ್ರವ್ಯ ಮುಕ್ತ ಮಾಡುವ ಗುರಿಯನ್ನು ಹೊಂದಲಾಗಿದ್ದು, ಇದಕ್ಕಾಗಿ ರಾಜ್ಯದ ಶಾಲೆ ಮತ್ತು ಕಾಲೇಜುಗಳನ್ನು ಮಾದಕ ವಸ್ತು ರಕ್ಷಣಾ ವಲಯವನ್ನು ಸ್ಥಾಪಿಸುವುದಾಗಿ ಪ್ರಕಟಿಸಿದ್ದರು. ಜೊತೆಗೆ ಎಲ್ಲ ಸರ್ಕಾರಿ ಪರೀಕ್ಷೆಗಳನ್ನು ವಿಳಂಬವಿಲ್ಲದೇ ನಡೆಸುವ ಭರವಸೆಯನ್ನು ಅವರು ನೀಡಿದ್ದರು. ಪದವೀಧರರಿಗೆ ಮಾಸಿಕ 4,000 ಹಾಗೂ ಡಿಪ್ಲೊಮಾ ಪಡೆದವರಿಗೆ ಮಾಸಿಕ 2,000 ಸಹಾಯ ಧನ ಘೋಷಿಸಿದ್ದರು.
ಯುವಜನರನ್ನು ಉದ್ಯೋಗಿಗಳನ್ನಾಗಿ ಮಾಡುವ ಬದಲು ಉದ್ಯೋಗದಾತರನ್ನಾಗಿ ಮಾಡುವ ದೀರ್ಘಕಾಲದ ಗುರಿ ಹೊಂದಲಾಗಿದೆ. ಇದಕ್ಕಾಗಿ ಸ್ಥಳೀಯ ಜನರಿಗಾಗಿ ಸ್ಥಳೀಯ ಉದ್ಯೋಗ ಯೋಜನೆಯೊಂದನ್ನು ಘೋಷಿಸಿದ್ದರು. ಜೊತೆಗೆ ತಮಿಳುನಾಡಿನಲ್ಲಿ ತಮಿಳರಿಗೆ ಶೇ 75ರಷ್ಟು ಉದ್ಯೋಗ ನೀಡುವ ಭರವಸೆ ನೀಡಿದ್ದರು.
ಸೃಜನಶೀಲ ಉದ್ಯಮಿಗಳ ಯೋಜನೆ ಘೋಷಿಸಿದ ಅವರು ತಮಿಳುನಾಡನ್ನು ಜಾಗತಿಕ ತಾಣವಾಗಿ ಮಾಡುವ ಗುರಿ ಹೊಂದಲಾಗಿದ್ದು, ಇದರ ಅಡಿ 1.6 ಲಕ್ಷ ಸೃಜನಶೀಲರನ್ನು ಉದ್ಯೋಗಿಗಳಾಗಿ ಅಭಿವೃದ್ಧಿ ಮಾಡಲಾಗುವುದು. ಜೊತೆಗೆ ರಾಜ್ಯದಲ್ಲಿ 500 ಸೃಜನಶೀಲ ಶಾಲೆಗಳನ್ನು ಸ್ಥಾಪಿಸಲಾಗುವುದು ಎಂದು ಘೋಷಿಸಿದ್ದರು.
ತಮಿಳುನಾಡಿನಲ್ಲಿ ಏಪ್ರಿಲ್ 23ಕ್ಕೆ ಚುನಾವಣೆ ನಡೆಯಲಿದ್ದು, ಎಲ್ಲ 234 ಕ್ಷೇತ್ರದಲ್ಲೂ ಟಿವಿಕೆ ಏಕಾಂಗಿಯಾಗಿ ಸ್ಪರ್ಧಿಸುತ್ತಿದೆ.

