ಚೆನ್ನೈ: ತಮಿಳುನಾಡು ಚುನಾವಣೆಯಲ್ಲಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮಿದರೂ ನಟ ವಿಜಯ್ ನೇತೃತ್ವದ ತಮಿಳಿಗ ವೆಟ್ರಿ ಕಳಗಂ ( ಟಿವಿಕೆ) ಪಕ್ಷಕ್ಕೆ ಬಹುಮತದ ಕೊರತೆ ಎದುರಾಗಿದ್ದು, ಸರ್ಕಾರ ರಚನೆಗೆ ಪರದಾಡುವಂತಾಗಿದೆ. 118 ಶಾಸಕರ ಬಹುಮತದೊಂದಿಗೆ ಸರ್ಕಾರ ರಚಿಸುವಂತೆ ರಾಜ್ಯಪಾಲ ರಾಜೇಂದ್ರ ವಿಶ್ವನಾಥ್ ಅರ್ಲೇಕರ್ ಸೂಚಿಸಿರುವ ಬೆನ್ನಲ್ಲೇ ಟಿವಿಕೆ ಇಕ್ಕಟ್ಟಿಗೆ ಸಿಲುಕಿದೆ. ಕಾಂಗ್ರೆಸ್ ಬೆಂಬಲವಿದ್ದರೂ ಇನ್ನೂ ಐದು ಶಾಸಕರ ಬೆಂಬಲದ ಅಗತ್ಯವಿದ್ದು, ಬೇರೆ ಪಕ್ಷದಿಂದ ಶಾಸಕರನ್ನು ಸೆಳೆಯಲು ಯತ್ನಿಸಿದೆ. ಈ ನಡುವೆ ಡಿಎಂಕೆ ಹಾಗೂ ಎಐಎಡಿಎಂಕೆ ಪಕ್ಷಗಳು ಮೈತ್ರಿಯೊಂದಿಗೆ ಸರ್ಕಾರ ರಚನೆಗೆ ಮುಂದಾಗುವ ನಿಟ್ಟಿನಲ್ಲಿ ಯತ್ನಿಸುತ್ತಿವೆ ಎನ್ನಲಾಗಿದೆ.
ಇದು ಟಿವಿಕೆ ನಾಯಕರಿಗೆ ಇನ್ನಷ್ಟು ತಲೆನೋವಾಗಿ ಪರಿಣಮಿಸಿದೆ. ಇದರ ಬೆನ್ನಲ್ಲೇ ತಮಿಳುನಾದಿನ ಜನರ ತೀರ್ಪಿನ ವಿರುದ್ಧವಾಗಿ ಡಿಎಂಕೆ ಹಾಗೂ ಎಐಎಡಿಎಂಕೆ ಸರ್ಕಾರ ರಚನೆಗೆ ಮುಂದಾದರೆ ಟಿವಿಕೆಯ ಎಲ್ಲಾ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಘೋಷಿಸಿದೆ.
234 ಸದಸ್ಯ ಬಲದ ತಮಿಳುನಾಡು ವಿಧಾನಸಭೆಯಲ್ಲಿ ಟಿವಿಕೆಯ 108 ಶಾಸಕರಿದ್ದಾರೆ. ಡಿಎಂಕೆ ಮತ್ತು ಎಐಎಡಿಎಂಕೆ ಎರಡನೇ ಮತ್ತು ಮೂರನೇ ಅತಿದೊಡ್ಡ ಪಕ್ಷಗಳಾಗಿವೆ. ಟಿವಿಕೆ ಸರ್ಕಾಅರ ರಚನೆಗೆ ಅವಕಾಶ ನೀಡಬಾರದು ಎಂಬ ಕಾರಣಕ್ಕೆ ಎಐಎಡಿಎಂಕೆ ತನ್ನ ಬದ್ಧ ವೈರಿ ಡಿಎಂಕೆ ಜೊತೆ ಕೈ ಜೋಡಿಸಿ ಸರ್ಕಾರ ರಚನೆಗೆ ಕಸರತ್ತು ನಡೆಸುತ್ತಿದೆ.
ತಮಿಳುನಾಡು ಜನಾದೇಶ ತಮ್ಮ ಪಕ್ಷದ ಪರವಾಗಿದೆ. ಇದನ್ನೂ ಮೀರಿ ಡಿಎಂಕೆ ಮತ್ತು ಎಐಡಿಎಂಕೆ ಸಮ್ಮಿಶ್ರ ಸರ್ಕಾರ ರಚನೆಗೆ ಮುಂದಾದಲ್ಲಿ ತಮ್ಮ ಎಲ್ಲಾ 108 ಶಾಸಕರೂ ರಾಜೀನಾಮೆ ನೀಡುತ್ತಾರೆ ಎಂದು ಟಿವಿಕೆ ಬೆದರಿಕೆ ಹಾಕಿದೆ.
234 ವಿಧಾನಸಭಾ ಕ್ಷೇತ್ರಗಳಿರುವ ತಮಿಳುನಾಡಿನಲ್ಲಿ ಟಿವಿಕೆ 108 ಸ್ಥಾನ ಪಡೆದಿದೆ. ಡಿಎಂಕೆ ಮೈತ್ರಿಕೂಟ 73, ಎಐಎಡಿಎಂಕೆ ಮೈತ್ರಿಕೂಟ 53 ಸ್ಥಾನಗಳನ್ನು ಹೊಂದಿವೆ. ಇಲ್ಲಿ ಡಿಎಂಕೆ 59 ಸ್ಥಾನ ಹಾಗೂ ಎಐಎಡಿಎಂಕೆ 47 ಸ್ಥಾನಗಳನ್ನು ಹೊಂದಿವೆ. ಎರಡೂ ಸೇರಿಸಿದರೆ 106 ಸ್ಥಾನಗಳಾಗುತ್ತವೆ. ಆಗಲೂ ಬೇರೆ ಬೇರೆ ಪಕ್ಷಗಳ ಬೆಂಬಲದ ಅಗತ್ಯವಿರುತ್ತದೆ.
ಒಂದೊಮ್ಮೆ ಎಲ್ಲಾ 108 ಟಿವಿಕೆ ಶಾಸಕರು ರಾಜೀನಾಮೆ ನೀಡಿದರೆ ಆಗ ವಿಧಾನಸಭೆಯ ಗಾತ್ರ 234ರಿಂದ 126ಕ್ಕೆ ಇಳಿಯುತ್ತದೆ. ಬಹುಮತ ಸಾಬೀತು ಮಾಡಲು ಬೇಕಾದ ಶಾಸಕರ ಬೆಂಬಲ 64 ಮಾತ್ರವೇ ಬೇಕಾಗುತ್ತದೆ. ಆಗ ಡಿಎಂಕೆ ಮತ್ತು ಎಐಎಡಿಎಂಕೆ ಪಕ್ಷಗಳು ಸುಲಭವಾಗಿ ಮೈತ್ರಿ ಮಾಡಿಕೊಂಡು ಸರ್ಕಾರ ರಚಿಸಬಹುದು. ಟಿವಿಕೆ ಶಾಸಕರ ರಾಜೀನಾಮೆ ಬಳಿಕ ಆ 108 ಸ್ಥಾನಗಳಿಗೆ ಉಪಚುನಾವಣೆ ನಡೆಯಬಹುದು. ಮತ್ತೆ ಎಲ್ಲಾ ಸ್ಥಾನಗಳಿಗೂ ಟಿವಿಕೆ ಅಭ್ಯರ್ಥಿಗಳೇ ಆಯ್ಕೆಯಾದರೆ ಮತ್ತೆ ರಾಜಕೀಯ ಸಮಸ್ಯೆ ಎದುರಾಗುತ್ತದೆ. ತಮಿಳುನಾಡಿಗೆ ಮತ್ತೊಮ್ಮೆ ಮರುಚುನಾವಣೆ ನಡೆದರೂ ಅಚ್ಚರಿ ಇಲ್ಲ ಎಂದು ಹೇಳಲಾಗುತ್ತಿದೆ.

