‘ಉರಿ’ ಸಿನಿಮಾ ಖ್ಯಾತಿಯ ಯುವ ನಟಿ ರಿವಾ ಅರೋರಾ ಮತ್ತು ಅವರ ಕುಟುಂಬಕ್ಕೆ ಬ್ಲಿಂಕಿಟ್ ಡೆಲಿವರಿ ಏಜೆಂಟ್ ಒಬ್ಬ ಕೆಟ್ಟ ಭಾಷೆಯಲ್ಲಿ ನಿಂದಿಸಿ ಕಿರುಕುಳ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಏಪ್ರಿಲ್ 26ರಂದು ನಡೆದ ಈ ಘಟನೆಯ ಕುರಿತು ರಿವಾ ಇದೀಗ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ನಟಿ ರಿವಾ ಅವರ ಮನೆಗೆ ಆರ್ಡರ್ ತಲುಪಿಸಲು ಬಂದಿದ್ದ ಡೆಲಿವರಿ ಏಜೆಂಟ್, ಮೊದಲಿನಿಂದಲೂ ಅಸಭ್ಯವಾಗಿ ವರ್ತಿಸಲು ಶುರು ಮಾಡಿದ್ದ ಎನ್ನಲಾಗಿದೆ. ಪರಿಸ್ಥಿತಿ ತಿಳಿಗೊಳಿಸಲು ರಿವಾ ಅವರ ತಾಯಿ ಪ್ರಯತ್ನಿಸಿದರೂ ಸಹ ಆತ ತನ್ನ ಮಿತಿ ಮೀರಿ ವರ್ತಿಸಿದ್ದಾನೆ. ಇಷ್ಟೇ ಅಲ್ಲದೆ, ಲಿಫ್ಟ್‌ನಲ್ಲಿ ಸಿಕ್ಕ ನಟಿಯ ತಂಗಿಯ ಜೊತೆಗೂ ಏಜೆಂಟ್ ಅತ್ಯಂತ ಕೀಳು ಮಟ್ಟದ ಭಾಷೆ ಬಳಸಿ ನಿಂದಿಸಿದ್ದಾನೆ ಎಂದು ಆರೋಪಿಸಲಾಗಿದೆ.
ಯಾವುದೇ ಪ್ರಚೋದನೆ ಇಲ್ಲದಿದ್ದರೂ ಸತತವಾಗಿ ಕೆಟ್ಟ ಭಾಷೆ ಬಳಸುತ್ತಿದ್ದ ಏಜೆಂಟ್‌ನನ್ನು ರಿವಾ ಕುಟುಂಬದವರು ತಡೆದು ನಿಲ್ಲಿಸಿ, ತಕ್ಷಣ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಈ ಸಂಬಂಧ ಈಗಾಗಲೇ ಪೊಲೀಸರಿಗೆ ಅಧಿಕೃತ ದೂರು ನೀಡಲಾಗಿದ್ದು, ಬ್ಲಿಂಕಿಟ್ ಸಂಸ್ಥೆಗೂ ದೂರು ಸಲ್ಲಿಸಲಾಗಿದೆ ಎಂದು ನಟಿ ತಿಳಿಸಿದ್ದಾರೆ.
ಒಬ್ಬ ಡೆಲಿವರಿ ಏಜೆಂಟ್ ಮಹಿಳೆಯರ ಜೊತೆ ಇಷ್ಟು ಅಸಭ್ಯವಾಗಿ ವರ್ತಿಸಿರುವುದು ಆತಂಕಕಾರಿ ವಿಷಯವಾಗಿದ್ದು, ಸಂಸ್ಥೆಯ ಜವಾಬ್ದಾರಿಯ ಬಗ್ಗೆಯೂ ರಿವಾ ಪ್ರಶ್ನೆ ಎತ್ತಿದ್ದಾರೆ. ಸದ್ಯ ಈ ಪ್ರಕರಣ ಕಾನೂನು ಹಾದಿಯಲ್ಲಿದ್ದು, ಬ್ಲಿಂಕಿಟ್ ಸಂಸ್ಥೆಯಿಂದ ಸ್ಪಷ್ಟ ಪ್ರತಿಕ್ರಿಯೆಗಾಗಿ ನಟಿ ಕಾಯುತ್ತಿದ್ದಾರೆ.

